ಬೆಂಗಳೂರು : ಸಿಗ್ನಲ್‌ ಜಂಪಿಂಗ್‌, ಒನ್‌ ವೇನಲ್ಲಿ ಗಾಡಿ ನುಗ್ಗಿಸುವುದು, ವೇಗವಾಗಿ ಚಾಲನೆಯಂತಹ ಘಟನೆಗಳ ವಿರುದ್ಧ ದೂರು ದಾಖಲಾಗುತ್ತಲೇ ಇದೆ. ಆದರೂ ಜನರು ಬದಲಾಗುವಂತೆ ಕಾಣುತ್ತಿಲ್ಲ. ಹಾಗಾಗಿ ಬೆಂಗಳೂರು ಸಂಚಾರಿ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಡ್ರೈವಿಂಗ್‌ ಲೈಸೆನ್ಸ್‌ ರದ್ದು ಮಾಡಲಾಗುತ್ತದೆ. ಮುಖ್ಯವಾಗಿ ಬೆಂಗಳೂರಿನ ರಸ್ತೆಗಳಲ್ಲಿ ಒನ್‌ ವೇ ನಲ್ಲಿ ಗಾಡಿ ನುಗ್ಗಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಹೀಗಾಗಿ ಬೆಂಗಳೂರು ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

— KAMAKSHIPALYA TRAFFIC BTP (@kmpalyatrfps) January 22, 2026

ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರೊಬ್ಬರು ಈ ಬಗ್ಗೆ ವಿಡಿಯೋ ಮಾಡಿ, ಜಾಗೃತಿ ಮೂಡಿಸಿದ್ದಾರೆ. ಒನ್‌ ವೇ ನಲ್ಲಿ ವಾಹನ ಓಡಿಸಿದರೆ ಅಪಾಯಕಾರಿ ಚಾಲನೆ ಅಂತ ನೋಟೀಸ್‌ ನೀಡುತ್ತೇವೆ. ಆದಾದ ನಂತರ ಕೂಡಾ ಅದೇ ತಪ್ಪು ಪರಿವರ್ತನೆ ಆದರೆ ಲೈಸೆನ್ಸ್‌ ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿಗ್ನಲ್‌ ಜಂಪ್‌ ಮಾಡುವವರು, ವೇಗವಾಗಿ ಗಾಡಿ ಓಡಿಸುವವರ ಡ್ರೈವಿಂಗ್‌ ಲೈಸೆನ್ಸ್‌ ರದ್ದು ಮಾಡುವಂತಹ ಕಠಿಣ ಕ್ರಮಗಳನ್ನು ತೆಗೆದುಕೊಂಡರೆ, ಅಪಘಾತ ಮತ್ತು ಅಪರಾಧ ತಡೆಯಬಹುದು ಎಂದು ಅವರು ಹೇಳಿದ್ದಾರೆ.

ಸರ್ಕಾರವು ಡ್ರೈವಿಂಗ್‌ ಲೈಸೆನ್ಸ್‌ ನವೀಕರಣದ ಸಮಯದಲ್ಲಿಯೂ ಸಹ ಹೊಸ ನಿಯಮಗಳನ್ನು ತರಲು ಯೋಜಿಸಿದೆ. ಡ್ರೈವಿಂಗ್‌ ಲೈಸೆನ್ಸ್‌ ಅವಧಿ ಮುಗಿಯುವ ಮೊದಲು ನವೀಕರಣಕ್ಕೆ ಅರ್ಜಿ ಸಲ್ಲಿಸಿದರೂ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರಿಗೆ ಕಡ್ಡಾಯವಾಗಿ ಚಾಲನಾ ಪರೀಕ್ಷೆ ನಡೆಸಲಾಗುವುದು. ಈ ಕ್ರಮಗಳು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.