ಬೆಂಗಳೂರು: ಮಾದಕ‌ ವಸ್ತುವಿನ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ವೈದ್ಯರಿಗೆ ಕಚ್ಚಿ, ನರ್ಸ್​ಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರದ ಸಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದಿದೆ. ಸದ್ಯ ಇದರಿಂದ ಆಸ್ಪತ್ರೆ ಆಡಳಿತ ಮಂಡಳಿ ಆತಂಕ ವ್ಯಕ್ತಪಡಿಸಿದೆ.

ಡ್ರಗ್ಸ್​ ನಶೆಯಲ್ಲಿದ್ದ ವ್ಯಕ್ತಿಯು ರಸ್ತೆಗಳಲ್ಲಿ ಸಿಕ್ಕ ಸಿಕ್ಕವರ ಮೇಲೆ ಚೇಷ್ಟೆ ಮಾಡುತ್ತಿದ್ದನು. ಹೀಗಾಗಿ ಸಾರ್ವಜನಿಕರು ವ್ಯಕ್ತಿಗೆ ಥಳಿಸಿ ಬೆಟ್ಟದಾಸನಪುರದ ಸಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ಆಸ್ಪತ್ರೆಗೆ ಬಂದ ಮೇಲೆ ಆಸಾಮಿಯು ಏಕಾಏಕಿ ಡಾಕ್ಟರ್​ಗಳ ಮೇಲೆ ಹಲ್ಲೆ ಮಾಡಿದ್ದಲ್ಲದೇ ಅವರಿಗೆ ಕಚ್ಚಲು ಹೋಗಿದ್ದಾನೆ. ನರ್ಸ್​ಗಳ ಮೇಲೂ ಹಲ್ಲೆ ಮಾಡಿದ್ದಾನೆ.

ಇದರಿಂದ ಆತಂಕಗೊಂಡ ವೈದ್ಯರು ತಕ್ಷಣ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು ಮಾದಕವಸ್ತು ತೆಗೆದುಕೊಂಡಿರುವ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.