ಬೆಂಗಳೂರು : ನಂದಿನಿ ಉತ್ಪನ್ನಗಳಿಗೆ ಸೆಡ್ಡು ಹೊಡೆಯಲು ಹಿಂಭಾಗಲಿನಿಂದ ಪ್ರವೇಶ ಮಾಡುತ್ತಿರುವ ಹೊರ ರಾಜ್ಯದ ಅಮುಲ್ ಉತ್ಪನ್ನಗಳನ್ನು ಮೆಟ್ರೋ ನಿಲ್ದಾಣಗಳಲ್ಲಿ ಮಾರಾಟಕ್ಕೆ ಅನುವು ಮಾಡಿಕೊಟ್ಟಿರುವುದನ್ನು ಸಹಿಸಲು ಸಾಧ್ಯವಿಲ್ಲ.
ಕನ್ನಡಿಗರ ಆಕ್ರೋಶಕ್ಕೆ ತುತ್ತಾಗುವ ಮೊದಲೇ ಮೆಟ್ರೋ ನಿಗಮದವರು ಅಮುಲ್ ಉತ್ಪನ್ನಗಳನ್ನು ತೆರವುಗೊಳಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಮಾಧ್ಯಮ ಸಂಚಾಲಕ ಅನಿಲ್ ನಾಚಪ್ಪ ಆಗ್ರಹಿಸಿದ್ದಾರೆ.
ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿನಿ ಹಾಲಿನ ಮಾರಾಟವನ್ನು 1 ಕೋಟಿ ಲೀಟರ್‍ಗೆ ಹೆಚ್ಚಳ ಮಾಡುತ್ತೇವೆಂದು ಒಂದು ಕಡೆ ಹೇಳಿದರೆ, ಮತ್ತೊಂದು ಕಡೆ ಹಿಂಬಾಗಿಲಿನಿಂದ ಹೊರರಾಜ್ಯದ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾಗಿರುವುದು ಅನವಶ್ಯಕ ಪೈಪೋಟಿಗೆ ಕಾರಣವಾಗಿದೆ. ಅಲ್ಲದೆ, ಇವರ ದ್ವಂದ್ವ ನೀತಿಗೆ ಹಿಡಿದ ಕನ್ನಡಿಯಾಗಿದೆ ಎಂದು ದೂರಿದ್ದಾರೆ.
ಇದರಿಂದ ರಾಜ್ಯದ ರೈತರು ಬೀದಿಗೆ ಬೀಳುವ ಸ್ಥಿತಿಗೆ ಬರುವುದರಲ್ಲಿ ಅನುಮಾನವಿಲ್ಲ. ಕೂಡಲೇ ಮೆಟ್ರೋ ಅಧಿಕಾರಿಗಳು ತಮ್ಮ ವ್ಯಾಪಾರಿ ಬುದ್ದಿಯನ್ನು ಬದಿಗೊತ್ತಿ ಕನ್ನಡಿಗರ ಹಾಗೂ ರಾಜ್ಯದ ರೈತರುಗಳ ಅಸ್ಮಿತೆಯನ್ನು ಪ್ರಶ್ನಿಸುವಂತಹ ಇಂತಹ ಕುಕೃತ್ಯಗಳಿಗೆ ಕೈಹಾಕಿದಲ್ಲಿ ಆಮ್ ಆದ್ಮಿ ಪಕ್ಷ ರೈತರುಗಳ ಸಮೇತ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಅನಿಲ್ ನಾಚಪ್ಪ ಎಚ್ಚರಿಕೆ ನೀಡಿದ್ದಾರೆ.

