ಬೆಂಗಳೂರು : ನೆನ್ನೆ ನಡೆದ ಬಜೆಟ್ ಮಂಡನೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ನಲ್ಲಿ ಚಿನ್ನ, ಬೆಳ್ಳಿ, ಪ್ಲಾಟಿನಂ ಇತ್ಯಾದಿ ಅಮೂಲ್ಯ ಲೋಹಗಳ ಮೇಲೆ ಆಮದು ಸುಂಕವನ್ನು ಕಡಿಮೆಗೊಳಿಸಿದ್ದಾರೆ.ಇದರಿಂದಾಗಿ ಇವುಗಳ ಆಮದು ವೆಚ್ಚ ಕಡಿಮೆ ಆಗುತ್ತದೆ. ಅದರ ಪರಿಣಾಮದಿಂದ ಆಭರಣಗಳ ಬೆಲೆಯೂ ಇಳಿಕೆ ಆಗುತ್ತದೆ.
ಚಿನ್ನ ಮತ್ತು ಬೆಳ್ಳಿ ಮೇಲೆ ಮೂಲ ಆಮದು ಸುಂಕವನ್ನು ಶೇ. 6ಕ್ಕೆ ಇಳಿಸಲಾಗಿದೆ. . ಈ ಮುಂಚೆ ಈ ಮೂಲ ಆಮದು ಸುಂಕ ಶೇ. 10 ಇತ್ತು. ಮತ್ತು ಎಐಡಿಸಿ (ಅಗ್ರಿಕಲ್ಚರ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಸೆಸ್) ಶುಲ್ಕ ಶೇ. 5 ಇತ್ತು. ಬಜೆಟ್ನಲ್ಲಿ 4 ಪ್ರತಿಶತ ಅಂಕಗಳಷ್ಟು ಮೂಲ ಆಮದು ಸುಂಕದಲ್ಲಿ ಇಳಿಕೆ ಮಾಡಲಾಗಿ. ಆದರೆ, ಎಐಡಿಸಿ ಶುಲ್ಕ ಮುಂದುವರಿದಿದೆ. ಇದರೊಂದಿಗೆ ಚಿನ್ನ ಮತ್ತು ಬೆಳ್ಳಿ ಮೇಲೆ ಆಮದು ಸುಂಕ ಶೇ. 15 ಇದ್ದದ್ದು ಶೇ. 11ಕ್ಕೆ ಇಳಿದಂತಾಗುತ್ತದೆ.
ಚಿನ್ನದ ಬೆಲೆ ಭಾರಿ ಇಳಿಕೆ
24 ಕ್ಯಾರಟ್ನ ಚಿನ್ನದ ಬೆಲೆ ಸೋಮವಾರ ಗ್ರಾಮ್ಗೆ 7,146 ರೂ ಇತ್ತು. ನಿನ್ನೆ ಮಂಗಳವಾರ ಅದರ ಬೆಲೆ 6,793 ರೂಗೆ ಇಳಿದಿದೆ. ಮೂಲಗಳ ಪ್ರಕಾರ ಚಿನ್ನದ ಬೆಲೆ ಗ್ರಾಮ್ಗೆ 590 ರೂವರೆಗೂ ಇಳಿಕೆ ಆಗಬಹುದು. ಹತ್ತಿರ ಹತ್ತಿರ 6,000 ರೂವರೆಗೂ ಕುಸಿಯಬಹುದು ಎನ್ನಲಾಗುತ್ತಿದೆ.
ಇನ್ನು, ಬೆಳ್ಳಿ ಬೆಲೆ ಗ್ರಾಮ್ಗೆ 7.6 ರೂವರೆಗೂ ಕಡಿಮೆ ಆಗಬಹುದು ಎಂದೂ ಹೇಳಲಾಗುತ್ತಿದೆ. ಇದರ ಬೆಲೆ ಗ್ರಾಮ್ಗೆ 90.50 ರೂ ಇತ್ತು. ಬೆಲೆ 87.50 ರೂಗೆ ಇಳಿದಿದೆ. ಈ ಬೆಳ್ಳಿ ಬೆಲೆ ಕೂಡ ಗ್ರಾಮ್ಗೆ 80 ರೂವರೆಗೂ ಇಳಿಕೆ ಆಗುವ ಸಾಧ್ಯತೆ ಇದೆ.
ಸ್ಮಗ್ಲಿಂಗ್ ಕಡಿಮೆ ಮಾಡಲು ಈ ಕ್ರಮ
ಭಾರತ ಹಾಗೂ ಇತರ ಪ್ರಮುಖ ದೇಶಗಳಲ್ಲಿನ ಚಿನ್ನದ ಬೆಲೆಯಲ್ಲಿ ಬಹಳ ವ್ಯತ್ಯಾಸ ಇದೆ. ದುಬೈ, ಅಮೆರಿಕ, ಮಲೆಷ್ಯಾ ಮೊದಲಾದ ದೇಶಗಳಲ್ಲಿ ಚಿನ್ನದ ಬೆಲೆ ಭಾರತದಲ್ಲಿಗಿಂತ ಬಹಳ ಕಡಿಮೆ ಇದೆ. ಭಾರತದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 7,000 ರೂ ಇದ್ದರೆ, ಕುವೇತ್ನಲ್ಲಿ 6,000 ರೂಗಿಂತ ಕಡಿಮೆ ಇದೆ. ಹೆಚ್ಚಿನ ದೇಶಗಳಲ್ಲಿ ಚಿನ್ನದ ಬೆಲೆ 6,100 ರೂ ಆಸುಪಾಸಿನಲ್ಲಿ ಇದೆ.

