ಹೊನ್ನಾಳಿ: ಸಚಿವ ಸಂಪುಟದಲ್ಲಿ ಹಿರಿಯ ಸಚಿವರು ಸಚಿವ ಸ್ಥಾನ ಬಿಟ್ಟುಕೊಡಬೇಕು ಎಂದು ನಾನು ಹಿಂದೆಯೇ ಹೇಳಿದ್ದೆ, ಈಗಲೂ ಒತ್ತಾಯಿಸುತ್ತೇನೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಯಡಿಯೂರಪ್ಪ ಅವರೇ ತಮ್ಮ ಸ್ಥಾನವನ್ನು ತ್ಯಾಗ ಮಾಡಿದ್ದಾರೆ. ಅವರಂತೆ ಎಲ್ಲರೂ ತ್ಯಾಗದ ಮನೋಭಾವನೆ ಬೆಳೆಸಿಕೊಳ್ಳಬೇಕು. ಸಚಿವನಾಗಲು ನನಗೂ ಅರ್ಹತೆ ಇದೆ. ಈ ಹಿಂದೆ ಸಚಿವನಾಗಿ ಒಳ್ಳೆಯ ಕೆಲಸ ಮಾಡಿದ್ದೇನೆ’ ಎಂದು ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ಭಾನುವಾರ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
‘ಬಿಜೆಪಿಯಲ್ಲಿ ಯಾವುದೇ ಕಾರಣಕ್ಕೂ ಹೊಂದಾಣಿಕೆ ರಾಜಕಾರಣ ನಡೆಯುವುದಿಲ್ಲ. ಕೆಲ ಸಚಿವರು ವಿಧಾನಸೌಧದ ಮೂರನೇ ಮಹಡಿಯಲ್ಲಿ, ಇನ್ನೂ ಕೆಲವರು ಕ್ಷೇತ್ರಕ್ಕೆ ಸೀಮಿತರಾಗಿ ಕುರ್ಚಿಗೆ ಅಂಟಿಕೊಂಡು ಕುಳಿತಿದ್ದಾರೆ. ಅಂಥವರಿಗೆ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಿವಿಮಾತು ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.