ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಜೈಲಿನಿಂದಲೇ ವಿಡಿಯೋ ಕಾಲ್ ಮಾಡಿದ ಸುದ್ದಿ ತೀವ್ರ ಸಂಚಲನ ಸೃಷ್ಟಿಸಿದೆ. ಜೈಲಿಂದಲೇ ವಿಡಿಯೋ ಕಾಲ್‌ನಲ್ಲಿ ದರ್ಶನ್ ಕಾಣಿಸಿಕೊಂಡ ವಿಡಿಯೋ ಲೀಕ್ ಆಗಿದ್ದು ಹೊಸ ಚರ್ಚೆಗೆ ಗುರಿಯಾಗಿದೆ.

ಕೊಲೆ ಆರೋಪಿ ದರ್ಶನ್ ಜೈಲಿನ ಬ್ಯಾರಕ್‌ನಲ್ಲಿರುವಾಗ ವಿಡಿಯೋ ಕಾಲ್ ಮಾಡಿದ್ದು ಹೇಗೆ? ವಿಡಿಯೋ ಕಾಲ್‌ನಲ್ಲಿ ಕಾಣಿಸಿಕೊಂಡ ವ್ಯಕ್ತಿ ಯಾರು ಅನ್ನೋ ರಹಸ್ಯ ಇದೀಗ ಬಯಲಾಗಿದೆ. ದರ್ಶನ್ ವಿಡಿಯೋ ಕಾಲ್‌ನಲ್ಲಿ ಇರೋನು ಒಬ್ಬ ರೌಡಿಶೀಟರ್ ಮಗ. ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ ಅಲಿಯಾಸ್‌ ಜನಾರ್ದನ್ ಅವರ ಮಗ ಸತ್ಯ ಎನ್ನಲಾಗಿದೆ.

ಜೈಲಿನಿಂದ ವಿಡಿಯೋ ಕಾಲ್ ಮಾಡಿ ದರ್ಶನ್‌ಗೆ ತೋರಿಸಿರೋದು ಕೂಡ ಒಬ್ಬ ರೌಡಿಶೀಟರ್. ಅವನ ಹೆಸರು ಧರ್ಮ. ಧರ್ಮ, ಕಳೆದ ಮೇ 07ರಂದು ಬಾಣಸವಾಡಿಯ ಕಾರ್ತಿಕೇಯನ್ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿ ಜೈಲಿನಲ್ಲಿದ್ದಾನೆ. ಜಾನಿ ಮಗ ಸತ್ಯ ಕೂಡ ಇತ್ತೀಚೆಗೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ. ಉಲ್ಟಾ ಮಚ್ಚಲ್ಲಿ ಕೆಎಲ್‌ಇ‌ ಕಾಲೇಜಿನ ವಿದ್ಯಾರ್ಥಿಗಳಿಗೆ ಸತ್ಯ ಹೊಡೆದಿದ್ದ ಸತ್ಯ. ಜೈಲಿಗೆ ಹೋಗಿ ಸದ್ಯ ಬೇಲ್ ಮೇಲೆ ಸತ್ಯ ಹೊರಗೆ ಬಂದಿದ್ದಾನೆ.

ಜೈಲಿನ ಹೊರಬಂದಿರುವ ಸತ್ಯ ಇತ್ತೀಚೆಗೆ ಮಾರ್ಕೆಟ್ ಧರ್ಮನಿಗೆ ವಿಡಿಯೋ ಕಾಲ್ ಮಾಡಿದ್ದ. ಆಗ ಮಾರ್ಕೆಟ್ ಧರ್ಮ, ದರ್ಶನ್ ನಮ್ಮ ಸೆಲ್ ಪಕ್ಕದಲ್ಲೇ ಇರೋದು ಎಂದಿದ್ದಾನೆ. ಕೂಡಲೇ ಇರು ತೋರಿಸ್ತಿನಿ ಎಂದು ದರ್ಶನ್ ಕೈಯಲ್ಲಿ ಹಾಯ್ ಹೇಳಿಸಿದ್ದಾನೆ.

ಇದೇ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಸತ್ಯ ಏರಿಯಾದಲ್ಲಿ ಸಖತ್ ಬಿಲ್ಡಪ್ ಕೊಟ್ಟಿದ್ದಾನೆ. ಕಲಾಸಿಪಾಳ್ಯದ ಕೆಲ ಹುಡುಗರಿಗೂ ವಿಡಿಯೋ ಕಳಿಸಿದ್ದ. ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದು, ಸತ್ಯ ವಿಡಿಯೋ ಕಾಲ್‌ನಿಂದ ದರ್ಶನ್ ಕೂಡ ಸಿಕ್ಕಿಬಿದ್ದಿದ್ದಾರೆ.