ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಆರೋಪಿಗಳ ಜೈಲು ವರ್ಗಾವಣೆ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಸೆಪ್ಟೆಂಬರ್ 9ಕ್ಕೆ ಕೋರ್ಟ್ ಅರ್ಜಿ ವಿಚಾರಣೆ ಮುಂದೂಡಲಾಗಿದ್ದು, ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಕೂಡ ಸೆಪ್ಟೆಂಬರ್ 9 ರವರೆಗೆ ವಿಸ್ತರಿಸಲಾಗಿದೆ.
ನಟ ದರ್ಶನ್ ಮತ್ತು ಸಹ ಆರೋಪಿಗಳು ಸಲ್ಲಿಸಿದ್ದ ಜೈಲು ವರ್ಗಾವಣೆ ಅರ್ಜಿಯ ವಿಚಾರಣೆಯನ್ನು ಸೆಷನ್ಸ್ ಕೋರ್ಟ್ ಮುಂದೂಡಿದೆ. ಇದರ ಜತೆಗೆ, ಪವಿತ್ರಾ ಗೌಡ ಪರ ವಕೀಲರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಲಾಗಿದೆ. ಒಟ್ಟಾರೆ ಎಲ್ಲರಿಗೂ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ.
ವಾದ ಪ್ರತಿವಾದ ವೇಳೆ ಚಾರ್ಜ್‌ಶೀಟ್ ಅನ್ನು CRPC ಸೆಕ್ಷನ್ ಅಡಿಯಲ್ಲಿ ಸಲ್ಲಿಸಲಾಗಿದ್ದು, ಹೊಸ BNSS ಕಾಯ್ದೆಯಡಿಯಲ್ಲಿ ಸಲ್ಲಿಸಿಲ್ಲ ಎಂದು ವಕೀಲ ಬಾಲನ್ ವಾದಿಸಿದರು. ಈ ವಾದಕ್ಕೆ ಪ್ರತಿಕ್ರಿಯೆ ನೀಡಲು ವಕೀಲರು ಸಮಯ ಕೋರಿದ್ದರಿಂದ ನ್ಯಾಯಾಲಯ ಈ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದೆ.
ಇದೇ ಪ್ರಕರಣದಲ್ಲಿ ಬಂಧಿತರಾಗಿ ಈ ಹಿಂದೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್ ಮತ್ತು ಇತರೆ ಆರೋಪಿಗಳು ರಾಜಾತಿಥ್ಯ ಪಡೆದಿದ್ದರು. ಈ ಕಾರಣಕ್ಕೆ ಅವರೆಲ್ಲರನ್ನೂ ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗಿತ್ತು. ಸುಪ್ರೀಂ ಕೋರ್ಟ್ ಆರೋಪಿಗಳ ಜಾಮೀನು ರದ್ದುಪಡಿಸಿದ ಬಳಿಕ ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಂದಿರುವ ದರ್ಶನ್ ಮತ್ತು ಇತರೆ ಆರೋಪಿಗಳನ್ನು ಅದೇ ಜೈಲುಗಳಿಗೆ ಸ್ಥಳಾಂತರಿಸುವಂತೆ ಕೋರಿ ಪ್ರಾಸಿಕ್ಯೂಷನ್ ಪರ ಅಭಿಯೋಜಕರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ದರ್ಶನ್‌ರನ್ನು ಬಳ್ಳಾರಿ ಜೈಲಿಗೆ, ಆರೋಪಿಗಳಾದ ಜಗದೀಶ್ ಮತ್ತು ಲಕ್ಷ್ಮಣ್‌ನನ್ನು ಶಿವಮೊಗ್ಗ ಜಿಲ್ಲಾಕಾರಾಗೃಹಕ್ಕೆ, ನಾಗರಾಜ್‌ನನ್ನು ಕಲಬುರಗಿ ಜೈಲಿಗೆ, ಪ್ರದೋಷ್‌ನನ್ನು ಬೆಳಗಾವಿ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಪ್ರಕರಣದ ಮೊದಲ ಆರೋಪಿ ಪವಿತ್ರಾಗೌಡ ಮತ್ತು ಅನುಕುಮಾರ್‌ನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಇರಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಗೆ ಈ ಬಾರಿ ಜೈಲು ಅಧಿಕಾರಿಗಳು ಯಾವುದೇ ಸಡಿಲಿಕೆ ತೋರದೇ, ಕಟ್ಟುನಿಟ್ಟಿನ ನಿಯಮಾವಳಿಗಳ ನಡುವೆ ಭದ್ರತೆಯಿಂದ ನೋಡಿಕೊಳ್ಳುತ್ತಿದ್ದಾರೆ. ಜೈಲಿನಲ್ಲಿನ ದಿನವನ್ನು ಕಳೆಯಲು ದರ್ಶನ್ ಪುಸ್ತಕಗಳ ಮೊರೆ ಹೋಗಿದ್ದಾರೆ.
ನಿನ್ನೆ ಅವರು ಜೈಲು ಅಧಿಕಾರಿಗಳ ಬಳಿ ಮನವಿ ಸಲ್ಲಿಸಿ, ಗ್ರಂಥಾಲಯದಿಂದ ಕೆಲವು ಪುಸ್ತಕಗಳನ್ನು ಪಡೆದುಕೊಂಡಿದ್ದಾರೆ. ದಿನದ ಹೆಚ್ಚಿನ ಸಮಯವನ್ನು ಸೆಲ್‌ನಲ್ಲಿ ಪುಸ್ತಕ ಓದುತ್ತಾ, ಸ್ವಲ್ಪ ಸಮಯವನ್ನು ಸಹಖೈದಿಗಳೊಂದಿಗೆ ಕಳೆಯುತ್ತಿದ್ದಾರೆ. ಇದೀಗ ಸೆಪ್ಟೆಂಬರ್ 9ರವರೆಗೂ ದರ್ಶನ್ ಪರಪ್ಪನ ಅಗ್ರಹಾರದಲ್ಲಿಯೇ ಕಾಲಕಳೆಯಬೇಕಾಗಿದೆ.

