ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅಂಡ್ ಗ್ಯಾಂಗ್ ಗೆ ಮತ್ತೆ ಜೈಲೇ ಗತಿ ಎನ್ನುವಂತೆ ಆಗಿದೆ. ಇಂದು ಕೋರ್ಟ್ ನಟ ದರ್ಶನ್ ಹಾಗು ಅವರ ಗ್ಯಾಂಗ್ ಗೆ ಆಗಸ್ಟ್.28ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಇಂದು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧದ ಅರ್ಜಿಯ ವಿಚಾರಣೆಯನ್ನು ನಡೆಸಲಾಯಿತು. ಎಲ್ಲಾ ಆರೋಪಿಗಳನ್ನು ವೀಡಿಯೋ ಕಾನ್ಫೆರೆನ್ಸ್ ಮೂಲಕ ಕೋರ್ಟ್ ಗೆ ಜೈಲು ಅಧಿಕಾರಿಗಳು ಹಾಜರು ಪಡಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದಂತ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರಾದ ವಿಶ್ವನಾಥ ಸಿ ಗೌಡರ್ ಅವರು, ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಆಗಸ್ಟ್.28ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶಿಸಿದ್ದಾರೆ. ಬೆಂಗಳೂರು ಜೈಲಿನಲ್ಲಿರುವ ಆರೋಪಿಗಳು ಹಾಗೂ ತುಮಕೂರು ಜೈಲಿನಲ್ಲಿರುವ ಮೂವರು ಆರೋಪಿಗಳನ್ನು ಪೊಲೀಸರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರು ಪಡಿಸಿದ್ದರು. ಈ ಸಮಯದಲ್ಲಿ ಪೊಲೀಸರು, ಎಲ್ಲ ಆರೋಪಿಗಳಿಗೂ ನ್ಯಾಯಾಂಗ ಬಂಧನ ವಿಸ್ತರಿಸುವಂತೆ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಾಧೀಶ ಜಡ್ಜ್ ವಿಶ್ವನಾಥ್ ಸಿ ಗೌಡರ್ ಅವರು ಎಲ್ಲ ಆರೋಪಿಗಳಿಗೂ ಆಗಸ್ಟ್ 28ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದರು. ಆರೋಪಿಗಳಿಗೆ ಪುನಃ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲು ಪೊಲೀಸರು ಎಂಟು ಕಾರಣಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ.