ಬೆಂಗಳೂರು: ಪುರಾತನ ದೇವಾಲಯದ ಕಲ್ಲಿನ ಕಂಬಗಳಲ್ಲಿ ಕೆತ್ತಲಾದ ಶಿಲಾಬಾಲಿಕೆಯರು ದಿಢೀರನೆ ಜೀವ ಪಡೆದು, ರಂಗದ ಮೇಲೆ ಮೂಡಿಬಂದರೆ ಹೇಗಿರುತ್ತದೆ? ಇಂತಹದೊಂದು ಅಪರೂಪದ ಕಲ್ಪನೆಯನ್ನು ಪ್ರಯೋಗಕ್ಕೆ ತರಲಿದ್ದಾರೆ ಪ್ರಸಿದ್ಧ ನೃತ್ಯ ಕಲಾವಿದೆ, ಸಂಗೀತ ನಾಟಕ ಅಕಾಡೆಮಿ ಪುರಸ್ಕೃತೆ ನಿರೂಪಮಾ ರಾಜೇಂದ್ರ.

ಪದ್ಮಭೂಷಣ ಪುರಸ್ಕೃತ, ಶತಾವಧಾನಿ ಡಾ. ಆರ್. ಗಣೇಶ್ ಅವರ ಸಾಹಿತ್ಯ ಮತ್ತು ಕಾವ್ಯವನ್ನು ರಂಗದ ಮೇಲೆ ಅಭಿನಯ ಹಾಗೂ ನೃತ್ಯದ ಮೂಲಕ ಜೀವಂತಗೊಳಿಸುವ ‘ರಸಾರಾಧನ’ ಏಕವ್ಯಕ್ತಿ ಭರತನೃತ್ಯ ಪ್ರದರ್ಶನವು ಸೆಪ್ಟೆಂಬರ್ 20ರಂದು ನಗರದ ಮೀನಾಕ್ಷಿ ರಂಗಮಂಚದಲ್ಲಿ ನಡೆಯಲಿದೆ. ಉಚಿತ ಪ್ರವೇಶ ಇರಲಿದೆ. ಡಾ. ಗಣೇಶ್ ಅವರ ಸಾಹಿತ್ಯಕ್ಕಾಗಿಯೇ ವಿಶೇಷವಾಗಿ ಸಂಗೀತ ಸಂಯೋಜನೆ ಮಾಡಲಾಗಿದೆ.

ಡಾ. ಪದ್ಮಾ ಸುಬ್ರಹ್ಮಣ್ಯಂ ಅವರು ದೇವಾಲಯಗಳ ಕರಣಗಳನ್ನು ಆಧರಿಸಿ ಪುನರ್‌ ರೂಪಿಸಿದ ಹಾಗೂ ಗುರು ಸುಂದರಿ ಸಂತಾನಂ ಅವರಿಂದ ಕಲಿತ ‘ಭರತನಾಟ್ಯ’ ಶೈಲಿಯಲ್ಲಿ ನಿರೂಪಮಾ ಅವರು ಈ ಪ್ರದರ್ಶನ ನೀಡಲಿದ್ದಾರೆ.

ಶಿಲೆ – ಕಲೆ- ಕಾವ್ಯ
ಈ ಪ್ರದರ್ಶನದಲ್ಲಿ ದಕ್ಷಿಣ ಭಾರತದ ದೇವಾಲಯಗಳ ಶಿಲ್ಪಕಲೆಗಳನ್ನು ನೃತ್ಯಕ್ಕೆ ಅಳವಡಿಸುವ ಪ್ರಯತ್ನ ನಡೆದಿದೆ. ಶಿಲ್ಪಗಳ ಆಧರಿತ ಕಥಾನಕಗಳತ್ತ ನೃತ್ಯ ಮುಂದೆ ಸಾಗುತ್ತದೆ.

ಕಾಳಿದಾಸನ ‘ಕುಮಾರಸಂಭವ’ ಆಧಾರಿತ ‘ಆತ್ಮ ಸೌಂದರ್ಯ’ ರೂಪಕದಲ್ಲಿ ಪಾರ್ವತಿಯು ಬಾಹ್ಯ ಸೌಂದರ್ಯದಿಂದಲ್ಲ, ಬದಲಿಗೆ ತಪಸ್ಸು ಹಾಗೂ ಆಂತರಿಕ ಜ್ಞಾನದಿಂದ ಶಿವನನ್ನು ಒಲಿಸಿಕೊಳ್ಳುವ ಪ್ರಸಂಗ ಮೂಡಿಬರಲಿದೆ. ‘ಹರಿಹರ’ ಕೃತಿಯಲ್ಲಿ ವಿಷ್ಣು ಮತ್ತು ಶಿವನ ನಡುವಿನ ಪರಸ್ಪರ ಗೌರವ ಹಾಗೂ ದೈವಿಕ ಸಮಾನತೆಯನ್ನು ಬಿಂಬಿಸಲಾಗಿದೆ. ಇದರೊಂದಿಗೆ ಗೃಹಸ್ಥ ಜೀವನದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ನಡುವೆಯೂ ನಿಷ್ಠೆ ಕಾಯ್ದುಕೊಳ್ಳುವ ಪತ್ನಿ ಮತ್ತು ಕಷ್ಟದ ಕಾಲದಲ್ಲೂ ಸಂಯಮ ಕಳೆದುಕೊಳ್ಳದ ಶ್ರೀರಾಮನ ಸ್ಥಿತಪ್ರಜ್ಞತೆಯನ್ನು ರಂಗದ ಮೇಲೆ ಪ್ರಸ್ತುತಪಡಿಸಲಾಗುತ್ತದೆ.

ಡಾ. ಗಣೇಶ್ ಅವರ ಕಾವ್ಯದಲ್ಲಿರುವ ಶಾಂತತೆ, ಆಂತರಿಕ ಸೌಂದರ್ಯ ಹಾಗೂ ಕಷ್ಟಕಾಲದ ಸಂಯಮದಂತಹ ಆಳವಾದ ಮೌಲ್ಯಗಳನ್ನು ನಿರೂಪಮಾ ಅವರು ತಮ್ಮ ಭಾವಾಭಿನಯದ ಮೂಲಕ ಪ್ರೇಕ್ಷಕರಿಗೆ ತಲುಪಿಸಲಿದ್ದಾರೆ. ಶಾಸ್ತ್ರೀಯ ಕಲೆಯು ಕೇವಲ ಪುಸ್ತಕದ ಸಾಲುಗಳಾಗಿ ಉಳಿಯದೆ, ರಂಗದ ಮೇಲೆ ‘ರಸ’ವಾಗಿ ಹರಿದಾಗ ಮಾತ್ರ ಸಾರ್ಥಕತೆ ಪಡೆಯುತ್ತದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಲಿದೆ.