ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭೀಕರ ಅವಘಡವೊಂದು ಸಂಭವಿಸಿದೆ. ಟಿ.ದಾಸರಹಳ್ಳಿಯ ಚೊಕ್ಕಸಂದ್ರದಲ್ಲಿ ಸಿಲಿಂಡರ್ ಸೋರಿಕೆಯಾಗಿ ಸ್ಫೋಟಗೊಂಡ ಪರಿಣಾಮ ಮಗು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

ಇವತ್ತು ಬೆಳಗ್ಗೆ 8:25ಕ್ಕೆ ಈ ಅವಘಡ ಸಂಭವಿಸಿದ್ದು, ಸ್ಫೋಟದಿಂದ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಸ್ಫೋಟದ ತೀವ್ರತೆಗೆ ಬಾಗಿಲು, ಕಿಟಕಿ ಚೂರಾಗಿದ್ದು, ಕಿಟಕಿಗೆ ಹಾಕಿದ್ದ ಬಟ್ಟೆ ಸುಟ್ಟು ಕರಕಲಾಗಿದೆ. ಜೊತೆಗೆ ಅಕ್ಕಪಕ್ಕದ ಮನೆಗಳಿಗೂ ತೀವ್ರ ಹಾನಿಯುಂಟಾಗಿದೆ.

ಗಾಯಾಳುಗಳನ್ನ ಮಂಜುನಾಥ್ , ಮನುಶ್ರೀ ಹಾಗೂ ಮನು ಎಂದು ಗುರುತಿಸಲಾಗಿದೆ. ಮತ್ತೋರ್ವ ಮಗುವೊಂದು ಸಹ ಗಾಯಗೊಂಡಿದೆ. ಸ್ಫೋಟದ ತೀವ್ರತೆಗೆ ಎಲ್ಲರೂ ಬೆಚ್ಚಿಬಿದ್ದಿದ್ದು, ಅಕ್ಕಪಕ್ಕದ 7 ಮನೆಗಳಿಗೆ ಹಾನಿಯಾಗಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಗ್ಯಾಸ್ ಲೀಕ್ ಆದ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. 5 ನಿಮಿಷದಲ್ಲಿ ಬೆಂಕಿ ವ್ಯಾಪಿಸಿದ್ದು , ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ಕೊಟ್ಟು ಬೆಂಕಿ ನಂದಿಸಿದೆ. ಸದ್ಯ ಗಾಯಳುಗಳನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.