ಕಾರವಾರ: ರಿವರ್ ರ್‍ಯಾಫ್ಟಿಂಗ್​ಗೆ ಹೋದ ವೇಳೆ ಕರೆಂಟ್​ ಶಾಕ್ ಹೊಡೆದು ಪ್ರವಾಸಿಗರೊಬ್ಬರು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶ ಗುಡಿಯ ಖಾಸಗಿ ರೆಸಾರ್ಟ್​​ನಲ್ಲಿ ನಡೆದಿದೆ.

ಆಂದ್ರ ವಿಜಯವಾಡ ಮೂಲದ ಮಹೇಶ್ ಅವರು ತಮ್ಮ ಸ್ನೇಹಿತರ ಗುಂಪಿನೊಂದಿಗೆ ವೀಕೆಂಡ್ ಕಳೆಯಲು ರೆಸಾರ್ಟ್‌ಗೆ ಆಗಮಿಸಿದ್ದರು. ಕಾಳಿ ನದಿಯ ನೀರಿನಲ್ಲಿ ರಿವರ್ ರಾಫ್ಟಿಂಗ್ ನಡೆಸಲು ಸಜ್ಜಾಗಿ ನೀರಿಗೆ ಇಳಿದಾಗ ಈ ದುರಂತ ಸಂಭವಿಸಿದೆ.

ರೆಸಾರ್ಟ್ ಆವರಣದಲ್ಲಿ ಲೈಟಿಂಗ್ ವ್ಯವಸ್ಥೆಗಾಗಿ ಅಳವಡಿಸಲಾಗಿದ್ದ ವಿದ್ಯುತ್ ಲೈನ್ ಅಥವಾ ಮೋಟಾರ್ ವೈರ್ ನೀರಿನಲ್ಲಿ ಲೀಕ್ ಆಗಿತ್ತು ಎನ್ನಲಾಗಿದೆ. ನೀರಿಗೆ ಕಾಲಿಡುತ್ತಿದ್ದಂತೆ ಮಹೇಶ್ ಅವರಿಗೆ ಭಾರಿ ಪ್ರಮಾಣದ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ರೆಸಾರ್ಟ್​​ನ ಆಡಳಿತ ಮಂಡಳಿಯವರ ನಿರ್ಲಕ್ಷ್ಯವೇ ಪ್ರವಾಸಿ ಯುವಕನ ಸಾವಿಗೆ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಜಲಸಾಹಸ ಕ್ರೀಡೆ ನಡೆಯುವ ಜಾಗದಲ್ಲೇ ಆಡಳಿತ ಮಂಡಳಿ ಪಂಪ್ ಸೆಟ್ ಹಾಕಿತ್ತು ಎನ್ನಲಾಗ್ತಿದೆ. ಯಾವುದೇ ಸುರಕ್ಷಿತ ಕ್ರಮ ಅನುಸರಿಸದೆ ವಿದ್ಯುತ್ ಪಸರಿಸುವ ತಂತಿಯನ್ನ ನದಿಯೊಳಗೆ ಬಿಟ್ಟ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ರಿವರ್ ರ್‍ಯಾಫ್ಟಿಂಗ್​ಗೆ ಹೋಗಿ ಬೀಟ್​ನಿಂದ ನದಿಯೊಳಗೆ ಹಾರಿದಾಗ ಪ್ರವಾಸಿಗ ಮಹೇಶ್​​ಗೆ ಕರೆಂಟ್​ ಶಾಕ್ ಹೊಡೆದಿದೆ ಎನ್ನಲಾಗ್ತಿದೆ. ಹೀಗಾಗಿ ಸಿಲ್ವರ್ ಬಿಲ್ ರೆಸಾರ್ಟ್ ಆಡಳಿತ ವ್ಯವಸ್ಥೆ ವಿರುದ್ದ ಜನರು ಆಕ್ರೋಶ ಹೊರಹಾಕಿದ್ದಾರೆ. ಘಟನಾ ಸ್ಥಳಕ್ಕೆ ದಾಂಡೇಲಿ/ರಾಮನಗರ ವಲಯದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.