ರಾಮನಗರ : ರಾಮನಗರದಲ್ಲಿ ಸಂಭವಿಸಿದ್ದ ನಾಡಬಾಂಬ್ ಸ್ಫೋಟ ಕೇಸ್ ನಲ್ಲಿ ಪೊಲೀಸರು ಮೂವರು ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಹಸುವಿನ ಬಾಯಿ ಛಿದ್ರಗೊಂಡ ಪರಿಣಾಮ ಮೃತಪಟ್ಟಿತ್ತು.
ಈ ಪ್ರಕರಣ ಸಂಬಂಧ ಕಾಡುಹಂದಿ ಬೇಟೆಗಾಗಿ ನಾಡಬಾಂಬ್ ಇಟ್ಟಿದ್ದ ಮೂವರು ಆರೋಪಿಗಳನ್ನ ಬಂಧನ ಮಾಡಲಾಗಿದೆ.
ಕೃಷ್ಣಮೂರ್ತಿ (45), ಶಿವಕುಮಾರ್ (23), ಶಿವನಪ್ಪ (46) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಕನಕಪುರ ತಾಲೂಕಿನ ಆಲನಾಥ ಗ್ರಾಮದ ಬಳಿ ಈ ಘಟನೆ ನಡೆದಿತ್ತು. ರೈತ ಶಿವನೇಗೌಡ ಎಂಬುವವರು ಹಸುವನ್ನ ಮೇಯಲು ಬಿಟ್ಟಿದ್ದಾಗ ಬಾಯಿಗೆ ನಾಡಬಾಂಬ್ ಸಿಲುಕಿ ಸ್ಫೋಟಗೊಂಡು ಹಸು ಛಿದ್ರಗೊಂಡಿತ್ತು.
ಕಿಡಿಗೇಡಿಗಳ ಕೃತ್ಯಕ್ಕೆ ಹಸು ನರಳಾಡಿ ಎರಡು ದಿನಗಳ ಬಳಿಕ ಸಾವನ್ನಪ್ಪಿತ್ತು. ಈ ಸಂಬಂಧ ರೈತ ಶಿವನೇಗೌಡ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಕೋಡಿಹಳ್ಳಿ ಪೊಲೀಸರು ಕಾಡು ಪ್ರಾಣಿಗಳ ಬೇಟೆಗೆ ನಾಡಬಾಂಬ್ ಇಟ್ಟಿದ್ದ ಮೂವರ ಬಂಧಿಸಿ, ಎರಡು ಜೀವಂತ ನಾಡಬಾಂಬ್ಗಳನ್ನ ವಶಕ್ಕೆ ಪಡೆದಿದ್ದಾರೆ.

