ನೆಲಮಂಗಲ : ಹಸುವಿನ ಕತ್ತು ಕೊಯ್ದು ನಡುರಸ್ತೆಯಲ್ಲಿ ಬಿಸಾಕಿ ಹೋಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮೂವರು ಕಿಡಿಗೇಡಿಗಳನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಇಮ್ರಾನ್ (30) ಸೈಯದ್ ನವಾಜ್ (35) ಎಂದು ಗುರುತಿಸಲಾಗಿದ್ದು, ಮತ್ತೋರ್ವನ ಗುರುತು ಇನ್ನು ಗೊತ್ತಾಗಬೇಕಿದೆ. ಈ ಹಿಂದೆ ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದ ಸೇತುವೆ ಮೇಲೆ ಎರಡು ನಾಟಿ ಹಸುವಿನ ಮೃತದೇಹ ಪತ್ತೆಯಾಗಿತ್ತು.
ಮೇಲ್ನೋಟಕ್ಕೆ ಯಾರೋ ಬೇಕೆಂದೇ ಹಸುವಿನ ಕತ್ತು ಕೊಯ್ದು ಮೈಯೆಲ್ಲ ಮಾಡಿಟ್ಟು ಬಿಸಾಕಿ ಹೋಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ನೆಲಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದರು, ಜೊತೆಗೆ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಈ ಬಗ್ಗೆ ಸದನದಲ್ಲಿ ಕೂಡ ಭಾರೀ ಚರ್ಚೆಯಾಗಿತ್ತು.
ದುಷ್ಕರ್ಮಿಗಳು ಹಸುವನ್ನು ಮಾಂಸಕ್ಕಾಗಿ ಕೇರಳಕ್ಕೆ ಕದ್ದೊಯ್ಯುತ್ತಿದ್ದರು. ಆದರೆ ಈ ವೇಳೆ ಎರಡು ಹಸುವಿನ ಮಾಂಸ ತಿನ್ನನ್ನು ಯೋಗ್ಯವಲ್ಲ ಎಂದು ಗೊತ್ತಾದ ಬಳಿಕ ಸೇತುವೆ ಮೇಲೆಯೇ ಅವುಗಳ ಕತ್ತು ಕೊಯ್ದು ನಡುರಸ್ತೆಯಲ್ಲೇ ಬಿಸಾಕಿ ಹೋಗಿದ್ದರು.
ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ಇಬ್ಬರು ಅನ್ಯಕೋಮಿಗಳು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಈ ಹಿಂದೆ ಕಾಫಿನಾಡು ಚಿಕ್ಕಮಗಳೂರಿನ ಜಿಲ್ಲೆಯ ಎಸ್ಟೇಟ್ ವೊಂದರಲ್ಲಿ ಮಾಂಸಕ್ಕಾಗಿ ಗಬ್ಬದ ಹಸುವೊಂದನ್ನು ಕೊಂದು ತಿಂದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ನಿಡುವಾಳೆ ಗ್ರಾಮದ ಮರ್ಕಲ್ ಎಸ್ಟೇಟ್ ನಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಮಾಂಸಕ್ಕಾಗಿ ತುಂಬು ಗಬ್ಬದ ಹಸುವನ್ನು ಕಡಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಮಾಂಸವನ್ನು ತೆಗೆದು ಅಂಗಾಂಗವನ್ನು ಮಣ್ಣಿನಲ್ಲಿ ಹೂತು ಹಾಕಲು ಯತ್ನಿಸಿದ್ದಾರೆ ಎನ್ನಲಾಗಿದೆ. ಸದ್ಯ ಹಸುವನ್ನು ಕೊಂದಿದ್ದ ಅಸ್ಸಾಂ ಮೂಲದ 6 ಜನ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.

