ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಜೈಲೂಟವನ್ನೇ ಸೇವಿಸಬೇಕಿದೆ. ಮನೆಯಿಂದ ಊಟ ಹಾಗೂ ಹಾಸಿಗೆ ಸೌಲಭ್ಯ ಪಡೆಯುವುದಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜುಲೈ 25ಕ್ಕೆ ಆದೇಶ ಕಾಯ್ದಿರಿಸಿದೆ. ದರ್ಶನ್ ಪರ ಮತ್ತು ಪೊಲೀಸರ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಾಧೀಶರು ಜುಲೈ 25 ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದರು.
ಆರೋಪಿಗೆ ಜೈಲಿನಲ್ಲಿ ಇರುವಾಗ ಮನೆಯ ಊಟ ಪಡೆಯಬಹುದು. ಇದು ವಿಚಾರಣಾಧೀನ ಕೈದಿಯ ಹಕ್ಕು. ಜೈಲಿನ ನಿಯಮಗಳಲ್ಲಿ ಇದರ ಉಲ್ಲೇಖ ಇದೆ. ಆರೋಪಿಗೆ ಕೆಲವೊಂದು ನಿಬಂಧನೆಗಳನ್ನು ಹೇಳಿ ಅವಕಾಶ ಕೊಡಿಸಬಹುದು. ತಮ್ಮದೇ ವೆಚ್ಚದಲ್ಲಿ ಇದನ್ನು ಪಡೆಯಲು ಅವಕಾಶವನ್ನು ಹೊಂದಿಸಲಾಗಿದೆ. ಕೊಲೆಯ ಆರೋಪಿಗಳಿಗೆ ವಿನಾಯಿತಿ ನೀಡಲಾಗಿದೆ. ಅಲ್ಲದೇ ಮನೆಯಿಂದ ಹಾಸಿಗೆ ವ್ಯವಸ್ಥೆ ಮತ್ತು ಪುಸ್ತಕಗಳನ್ನು ಹೊಂದುವ ಅವಕಾಶ ಇದೆ . ಈ ಎಲ್ಲಾ ಅವಕಾಶಗಳನ್ನು ಆರೋಪಿಗಳಿಗೆ ಒದಗಿಸಿಕೊಡಬಹುದು.ಯಾವಾಗ ಆರೋಪಿ, ಅಪರಾಧಿ ಎಂದು ಕೋರ್ಟ್ ಶಿಕ್ಷೆ ನೀಡುತ್ತದೋ ಅಲ್ಲಿಯವರೆಗೆ ಈ ಎಲ್ಲಾ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು.
ಆಹಾರ ಅಜೀರ್ಣವಾಗುತ್ತಿದೆ. ಪುಡ್ ಪಾಯಿಸನ್ ಆಗಿದೆ, ಭೇದಿ ಆಗುತ್ತಿದೆ ಎಂದು ಮೆಡಿಕಲ್ ವರದಿಯನ್ನು ಸಲ್ಲಿಕೆ ಮಾಡಲಾಗಿದೆ. ಆದರೆ ಒಂದು ಒಂದು ಬಾರಿಯೂ ಭೇದಿ ಆಗಿದೆ ಎಂದು ಆಸ್ಪತ್ರೆಯಲ್ಲಿ ದರ್ಶನ್ ಚಿಕಿತ್ಸೆ ಪಡೆದಿಲ್ಲ. ಇನ್ನು ಜೈಲಿನ ನಿಯಮಗಳ ಪ್ರಕಾರ ಮನೆಯ ಊಟ ಎನ್ನುವುದರ ಬಗ್ಗೆ ಉಲ್ಲೇಖ ಇಲ್ಲ. ಅನಾರೋಗ್ಯದ ಸಮಯದಲ್ಲಿ ಮಾತ್ರ ವಿಶೇಷ ಊಟ ನೀಡಬಹುದು ಹೊರತು ಮನೆಯ ಊಟವನ್ನೇ ನೀಡಬೇಕು ಎಲ್ಲೂ ಉಲ್ಲೇಖ ಮಾಡಿಲ್ಲ. ವಾರದಲ್ಲಿ ಒಮ್ಮೆ ಮಾತ್ರ ಮಾಂಸಾಹಾರದ ಊಟ ಕೊಡಬಹುದು. ಅದನ್ನು ಬಿಟ್ಟು ಪ್ರತಿ ದಿನ ಬಿರಿಯಾನಿ ತಿನ್ನಬೇಕು ಎಂದರೆ ನೀಡಲು ಸಾಧ್ಯವಿಲ್ಲ. ಹೀಗಾಗಿ ಮನೆಯ ಊಟವನ್ನು ನೀಡುವಂತೆ ಇಲ್ಲ ಎಂದು ಸರ್ಕಾರ ಪರ ವಕೀಲರು ವಾದ ಮಂಡಿಸಿದ್ದಾರೆ.

