ನೆಲಮಂಗಲ: ನಕಲಿ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಅಂತರ್ಜಿಲ್ಲಾ ಖೋಟಾ ನೋಟು ದಂಧೆಯ ಪ್ರಮುಖ ಆರೋಪಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಂಡನಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದ ಹುಳಿಯೂರು ಮತ್ತು ಮಾದನಾಯಕನಹಳ್ಳಿ ಪೊಲೀಸರ ಜಂಟಿ ತಂಡ, ರುದ್ರೇಶ್ (41) ಎಂಬಾತನನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದೆ.

ತುಮಕೂರು ಜಿಲ್ಲೆಯ ಹುಳಿಯಾರಿನ ಅಂಗಡಿಯೊಂದರಲ್ಲಿ ಈತ ಸಿಗರೇಟ್ ಖರೀದಿಸಲು 500 ರೂಪಾಯಿಯ ನಕಲಿ ನೋಟು ನೀಡಿದ್ದಾಗ ಇವನ ಕಳ್ಳಾಟ ಬಯಲಾಗಿದೆ. ನೋಟಿನ ಬಗ್ಗೆ ಅನುಮಾನಗೊಂಡ ವ್ಯಾಪಾರಿ ತಕ್ಷಣ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಬೆನ್ನಟ್ಟಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತ ರುದ್ರೇಶ್ ಹಳೇ ಅಪರಾಧಿಯಾಗಿದ್ದಾನೆ. ಕಳೆದ 2024ರಲ್ಲಿ ಸುಮಾರು 20 ಲಕ್ಷ ರೂ. ಮೌಲ್ಯದ ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡಿದ್ದ ಆರೋಪದಡಿ ದಾವಣಗೆರೆ ಪೊಲೀಸರು ಈತನೂ ಸೇರಿದಂತೆ ಆರು ಜನರ ಗ್ಯಾಂಗನ್ನು ಜೈಲಿಗಟ್ಟಿದ್ದರು. ಆದರೆ, ಜೈಲಿನಿಂದ ಜಾಮೀನಿನ ಮೇಲೆ ಹೊರಬಂದರೂ ಈತ ಬುದ್ಧಿ ಕಲಿಯದೆ ಮತ್ತೆ ದಂಧೆಗೆ ಇಳಿದಿದ್ದಾನೆ.

ಪೊಲೀಸರು ಆರೋಪಿ ರುದ್ರೇಶ್‌ನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಹುಳಿಯೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಜಾಲದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.