ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಬೆಂಗಳೂರಿನ ಆನೇಪಾಳ್ಯ ಪ್ರದೇಶದಲ್ಲಿರುವ ತಮ್ಮ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳು ಹಾಗೂ ಇತರೆ ಅಂಶಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದು, ತನಿಖೆ ಮುಂದುವರಿದಿದೆ.
ತಮ್ಮ ಕುಟುಂಬದ ಮೇಲೆ ಪದೇ ಪದೆ ಆದಾಯ ತೆರಿಗೆ ಇಲಾಖೆ ನಡೆಸುತ್ತಿದ್ದ ದಾಳಿಗೆ ಹೆದರಿ ಸಿಜೆ ರಾಯ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ನಿನ್ನೆ ಸಹ ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಪಿಸ್ತೂಲ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಡಾ. ಸಿ.ಜೆ. ರಾಯ್ ಅವರು ಕೇರಳ ಮೂಲದವರಾಗಿದ್ದು, ಕಾನ್ಫಿಡೆಂಟ್ ಗ್ರೂಪ್ ಎಂಬ ಪ್ರಮುಖ ರಿಯಲ್ ಎಸ್ಟೇಟ್ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿದ್ದರು. ವಸತಿ ಯೋಜನೆಗಳು, ವಾಣಿಜ್ಯ ಕಟ್ಟಡಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಸಂಸ್ಥೆ ತಮ್ಮದೇ ಆದ ಹೆಸರು ಗಳಿಸಿಕೊಂಡಿತ್ತು. ಅವರ ನಾಯಕತ್ವದಲ್ಲಿ ಕಾನ್ಫಿಡೆಂಟ್ ಗ್ರೂಪ್ ಹಲವು ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಿತ್ತು.
ಸಿಜೆ ರಾಯ್ ಅವರು ಸ್ವಿಟ್ಜರ್ಲೆಂಡ್‌ನ SBS ಬಿಸಿನೆಸ್ ಸ್ಕೂಲ್‌ನಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಡಾಕ್ಟರೇಟ್ ಪಡೆದಿದ್ದರು. ಕಾನ್ಫಿಡೆಂಟ್ ಗ್ರೂಪ್ ಎಂಬ ಸಂಸ್ಥೆ ಸ್ಥಾಪಿಸಿ, ಕೇರಳ ಮತ್ತು ಬೆಂಗಳೂರಿನಲ್ಲಿ ಪ್ರಮುಖ ಐಷಾರಾಮಿ ಯೋಜನೆಗಳನ್ನು ಪೂರ್ಣಗೊಳಿಸಿದ್ದು, ದುಬೈ ಮಾರುಕಟ್ಟೆಗೂ ವಿಸ್ತರಿಸಿದ್ದಾರೆ.

