ಬೆಂಗಳೂರು: ಮುಡಾ ಹಗರಣದಲ್ಲಿ ದೂರು ದಾಖಲಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮತ್ತೆರಡು ದೂರು ದಾಖಲಾಗಿವೆ. ವಿಧಾನಸಭೆ ಕಲಾಪ ನಿನ್ನೆಯಿಂದ ಶುರುವಾಗಿದ್ದು, 2018 ಮತ್ತು 2023ರ ವಿಧಾನಸಭಾ ಚುನಾವಣೆ ಆಫಿಡವಿಟ್‌ನಲ್ಲಿ ಆಸ್ತಿ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ.

ಹೀಗಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಸಾಮಾಜಿಕ ಹೋರಾಟಗಾರ, ಕರ್ನಾಟಕ ಭ್ರಷ್ಟಾಚಾರ ವಿರೋಧಿ ಮತ್ತು ಪರಿಸರ ವೇದಿಕೆ ಅಧ್ಯಕ್ಷ ಟಿ.ಜೆ.ಅಬ್ರಹಾಂ ಎರಡು ಪ್ರತ್ಯೇಕ ದೂರು ಸಲ್ಲಿಸಿದ್ದಾರೆ.

2018ರ ವಿಧಾನಸಭೆ ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ನೀಡಿದ್ದ ಅಫಿಡವಿಟ್​ನಲ್ಲಿ ಪತ್ನಿ ಪಾರ್ವತಿ ಹೆಸರಿನಲ್ಲಿ 3 ಎಕರೆ 16 ಗುಂಟೆ ಕೃಷಿ ಜಮೀನು ಇದ್ದು, ಇದರ ಮೌಲ್ಯ 25 ಲಕ್ಷ ರೂ. ಎಂದು ನಮೂದಿಸಿದ್ದಾರೆ. ಆದರೆ, 2005ರಲ್ಲೇ ಈ ಜಮೀನು ಪರಿವರ್ತನೆ ಮಾಡಿಸಿದ್ದ ದಾಖಲೆ ನೀಡಿ ದೂರು ಸಲ್ಲಿಸಿದ್ದಾರೆ. 2023ರ ವಿಧಾನಸಭೆ ಚುನಾವಣೆ ವೇಳೆ 14 ಮುಡಾ ಸೈಟ್​​ಗಳ ಮೌಲ್ಯ ಕೇವಲ 8 ಕೋಟಿ ಎಂದು ಅಫಿಡವಿಟ್​​ನಲ್ಲಿ ನಮೂದಿಸಿದ್ದಾರೆ.

ಇನ್ನು ಮುಡಾದ 14 ಸೈಟ್​ಗಳ ಅಸಲಿ ಮಾರುಕಟ್ಟೆ ಮೌಲ್ಯ 34 ಕೋಟಿ ರೂಪಾಯಿಯಾಗಿದ್ದು, ಉದ್ದೇಶಪೂರ್ವಕವಾಗಿ ಸಿಎಂ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಮುಖ್ಯ ಚುನಾವಣಾ ಅಧಿಕಾರಿಗೆ ಟಿ.ಜೆ.ಅಬ್ರಹಾಂ ಎರಡು ಪ್ರತ್ಯೇಕ ದೂರು ಸಲ್ಲಿಸಿದ್ದಾರೆ.