ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ 19 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ತೀವ್ರಗೊಳಿಸಿದ್ದಾರೆ. ಇತ್ತ ವಿಚಾರಣೆ ತೀವ್ರಗೊಂಡಂತೆ ಹೊಸ ಹೊಸ ವಿಚಾರ ಹಾಗೂ ಹೆಸರುಗಳು ಕೇಳಿ ಬರುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಪ್ರತಿಕ್ರಿಯಿಸಿದ್ದಾರೆ.
ನಾವು ಸ್ವಲ್ಪ ನಿರ್ಲಕ್ಷಿಸಿದ್ದರೂ ಈ ಪ್ರಕರಣ ಬೇರೆ ದಾರಿ ಹಿಡಿಯುತ್ತಿತ್ತು. ಪ್ರಕರಣ ಗಂಭೀರತೆಯಿಂದ ಕೂಡಿರುವ ಕಾರಣ ತನಿಖೆಯ ಹೊಣೆಯಲ್ಲಿ ಎಸಿಪಿಗೆ ವಹಿಸಲಾಗಿದೆ. ತನಿಖೆಗೆ ಸಂಬಂಧಿಸಿದಂತೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಬೆಂಗಳೂರು, ಚಿತ್ರದುರ್ಗ ಸೇರಿದಂತೆ ಹಲವೆಡೆ ವಿಚಾರಣೆ ನಡೆಸಲಾಗುತ್ತಿದೆ.
ಇನ್ಸ್ಪೆಕ್ಟರ್ಗಳು ತನಿಖೆ ನಡೆಸುತಿದ್ದಾರೆ. ಸಮರ್ಪಕ ಹಾಗೂ ವಿಧಿವಿಜ್ಞಾನ, ತಾಂತ್ರಿಕ, ಕಾನೂನು ಸಲಹೆ ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ. ಬೇರೆ ಬೇರೆ ಆಯಾಮಗಳಿಂದ ತನಿಖೆಯನ್ನ ನಡೆಸಲಾಗುತ್ತಿದೆ. ಸಮರ್ಪಕವಾದ ರೀತಿಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆಯ ವಿವರಗಳನ್ನ ನಾವು ಈಗಲೇ ಹೇಳಲು ಆಗುವುದಿಲ್ಲ. ಸ್ವಲ್ಪ ನಿರ್ಲಕ್ಷ್ಯವಹಿಸಿದ್ದರೂ ಪ್ರಕರಣ ಬೇರೆ ದಾರಿ ಹಿಡಿಯುತ್ತಿತ್ತು. ಪೊಲೀಸರ ಸಮಯ ಪ್ರಜ್ಞೆಯಿಂದ ಪ್ರಕರಣ ಹೊರಬಂದಿದೆ.
ವ್ಯಕ್ತಿ ಕೊಲೆ ಮಾಡಿರುವುದು ಹೀನ ಅತ್ಯಂತ ಹೇಯ ಕೃತ್ಯ . ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಆಗಬೇಕಿದೆ. ಪ್ರಕರಣ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸ ಆಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.

