ಬೆಂಗಳೂರು: ಆರ್‌ಸಿಬಿ ಕಪ್‌ ಗೆಲ್ಲಬೇಕು ಎನ್ನುವುದು ಅಭಿಮಾನಿಗಳ 18 ವರ್ಷದ ಕನಸು. ಈ ವರ್ಷ ಆ ಕನಸು ನನಸಾಗಿತ್ತು. ಆದರೆ ಎಲ್ಲವೂ ಅಂದುಕೊಂಡಂತೆ ಇರಲಿಲ್ಲ. ಬೆಂಗಳೂರಿನಲ್ಲಿ ಸಂಭ್ರಮಾಚರಣೆ ನಡೆಸುವ ವೇಳೆ ಕಾಲ್ತುಳಿತ ಉಂಟಾಗಿ ತೊಂದರೆ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಇದೀಗ ವಿಚಾರಣೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ಜಗದೀಶ್, ಬಿ.ದಯಾನಂದ್ ಗೆ ನೋಟಿಸ್ ನೀಡಿದ್ದಾರೆ.

ಈ ಕಾಲ್ತುಳಿತ ಪ್ರಕರಣ ನಡೆದಾಗ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದವರು ಬಿ ದಯಾನಂದ್. ಈ ಘಟನೆಯ ನಂತರ ಅವರನ್ನ ಸರಿಯಾಗಿ ನಿರ್ವಹಣೆ ಮಾಡಿಲ್ಲ ಎನ್ನುವ ಆರೋಪದ ಮೇಲೆ ಅಮಾನತು ಸಹ ಮಾಡಲಾಗಿತ್ತು. ಇದೀಗ, ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟೀಸ್‌ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ತನಿಖೆ ನಡೆಯಲಿದೆ.

ಚೊಚ್ಚಲ ಐಪಿಎಲ್ ಟ್ರೋಫಿ ಪಡೆದ ಆರ್‌ಸಿಬಿ ತಂಡವನ್ನ ತವರಿಗೆ ಕರೆಸಿ ಸಂಭ್ರಮಾಚರಣೆ ಮಾಡುವುದಕ್ಕೆ ತಯಾರಿ ಮಾಡಲಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದು ಅಭಿಮಾನಿಗಳ ಜೊತೆ ಗೆಲುವನ್ನ ಹಂಚಿಕೊಳ್ಳಲು ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಜನ ಹೆಚ್ಚಾದ ಕಾರಣದಿಂದ ಕಾಲ್ತುಳಿತ ಉಂಟಾಗಿದ್ದು, 11 ಜನರು ಸಾವನಪ್ಪಿದ್ದರು.