ಬೆಂಗಳೂರು: ನಟ ದರ್ಶನ್ ಅವರು ಜೈಲೂಟ ಚೆನ್ನಾಗಿಲ್ಲ, ಮನೆ ಊಟ ಕೊಡಿ ಎಂದು ಪದೇ ಪದೇ ಕೇಳಿಕೊಳ್ಳುತ್ತಿದ್ದಾರೆ. ಈಗಾಗಲೇ ಕೋರ್ಟ್​ನಲ್ಲಿ ಈ ಸಂಬಂಧ ಅರ್ಜಿ ಸಲ್ಲಿಕೆ ಆಗಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಬಳಿ ಮನೆ ಊಟ ಕೊಡೋಕೆ ಕೇಳಿದ್ದರು. ಆದರೆ, ಈ ಅರ್ಜಿ ತಿರಸ್ಕರಿಸಲ್ಪಟ್ಟಿದೆ. ಇದನ್ನು ದರ್ಶನ್ ಅವರು ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ಮಧ್ಯೆ ‘ಆ ದಿನಗಳು’ ಚೇತನ್ ಅವರು ಜೈಲೂಟವನ್ನು ಹೊಗಳಿದ್ದಾರೆ. ‘ನಂಗೆ ಜೈಲೂಟ ಸಖತ್ ಇಷ್ಟ’ ಎಂದಿದ್ದಾರೆ.

ಮೊದಲ ಬಾರಿ ನಾನು ಜೈಲಿಗೆ ಹೋದಾಗ 6 ಜನರಿರುವ ಸೆಲ್ ನಲ್ಲಿ ಹಾಕಿದ್ರು. ಎರಡನೇ ಬಾರಿ 40 ಜನರಿರುವ ಬ್ಯಾರೆಕ್ಸ್ ನಲ್ಲಿ ಹಾಕಿದ್ರು ಎಂದಿರುವ ಚೇತನ್, ಜೈಲಿನ ಊಟ ನನಗೆ ಯಾವತ್ತು ಸಮಸ್ಯೆಯಾಗಲಿಲ್ಲ ಬದಲಿಗೆ ಜೈಲೂಟ ನನಗೆ ಸಖತ್ ಇಷ್ಟವಾಯಿತು. ಆದರೆ ದರ್ಶನ್ ಅವರಿಗೆ ಯಾಕೆ ಕಷ್ಟ ಆಗ್ತಿದೆ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ.

ಇನ್ನು ದರ್ಶನ್ ಅವರ ಘಟನೆ ಕನ್ನಡ ಚಿತ್ರರಂಗಕ್ಕೆ ಕಪ್ಪು ಚುಕ್ಕೆ, ಚಿತ್ರರಂಗದ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿದ್ದಾರೆ. ದರ್ಶನ್ ಆರೋಪಿಯಷ್ಟೇ ಅಪರಾಧಿಯಲ್ಲ ಆದರೆ ಅವರ ಮೇಲೆ ಗಂಭೀರ ಆರೋಪ ಇದೆ.

ಇಂದಿನ ಸಿನಿಮಾ ಸ್ಟಾರ್ ಗಳಿಗೆ ಯೋಗ್ಯತೆ ಮೀರಿ ತುಂಬಾ ಬಿಲ್ಡಪ್ ಸಿಕ್ಕಿದೆ ಎಂದು ಕಿಡಿಯನ್ನೂ ಕಾರಿರುವ ಚೇತನ್, ಹೀರೋಗಳು ಸತ್ತಾಗ ಸ್ಮಾರಕಗಳನ್ನು ಅವರೇ ಮಾಡಿಕೊಳ್ಳಲಿ, ಅವರು ಮಾಡಿರುವ ಸಿನಿಮಾಗಳಿಗೆ ಸಂಭಾವನೆ ಪಡೆದಿರುತ್ತಾರೆ. ಕೋಟಿ ಕೋಟಿ ಹಣ ಅವರ ಬಳಿ ಇರುತ್ತೆ. ಕೋಟಿ ಕೋಟಿ ಹಣ ಇರುತ್ತೆ ಅದನ್ನು ಬಿಟ್ಟು ನಮ್ಮ ಸರ್ಕಾರದ ತೆರಿಗೆ ಹಣವನ್ನು ಕೊಡೋದು ಸರಿಯಲ್ಲ ಎಂದಿದ್ದಾರೆ.