ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ನೂರಕ್ಕೂ ಅಧಿಕ ಬಾಂಗ್ಲಾದೇಶಿ ವಲಸಿಗರನ್ನು ಸೆಂಟ್ರಲ್‌ ಕ್ರೈಂ ಬ್ರಾಂಚ್‌ ಪೊಲೀಸರು ನಿನ್ನೆ ಮಧ್ಯರಾತ್ರಿ ಬೆಂಗಳೂರಿನ ಹಲವು ಕಡೆಗಳಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.

ಬೆಂಗಳೂರಿನ ನಾಲ್ಕು ಡಿವಿಷನ್‌ಗಳಲ್ಲಿರುವ ಅಕ್ರಮ ನಿವಾಸಿಗಳ ಮನೆ ಮೇಲೆ ದಾಳಿ ನಡೆದಿದೆ. ಬಾಂಗ್ಲಾ ಗಡಿಭಾಗದಲ್ಲಿ ನುಸುಳಿ ಅಕ್ರಮವಾಗಿ ಬೆಂಗಳೂರಿಗೆ ಬಂದಿರುವ ಪ್ರಜೆಗಳು ಇವರಾಗಿದ್ದು, ದೇಶದಲ್ಲಿ ನೆಲೆಸುವುದಕ್ಕೆ ಯಾವುದೇ ಸೂಕ್ತ ದಾಖಲೆ ಇವರ ಬಳಿ ಇಲ್ಲ.

ಗುಪ್ತಚರ ಮಾಹಿತಿ ಆಧರಿಸಿ ದಾಳಿ ಮಾಡಿರುವ ಸಿಸಿಬಿ ತಂಡ ಮಧ್ಯರಾತ್ರಿ 1 ಗಂಟೆಯಿಂದ ಬೆಳಗ್ಗಿನ ಜಾವ 5 ಗಂಟೆವರೆಗೂ ಆಪರೇಷನ್ ನಡೆಸಿದೆ. ನೂರಕ್ಕೂ ಹೆಚ್ಚ ಅಕ್ರಮ ನಿವಾಸಿಗಳನ್ನು ಪತ್ತೆ ಹಚ್ಚಲಾಗಿದೆ. ಸಿಸಿಬಿ ಜಂಟಿ ಆಯುಕ್ತ ಚಂದ್ರಗುಪ್ತ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಇವರಲ್ಲಿ ಹಲವರು ವೋಟರ್‌ ಐಡಿ ಕೂಡ ಮಾಡಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ಸೂಕ್ತ ದಾಖಲೆಗಳ ಪರಿಶೀಲನೆ ಮಾಡದೆ ಇವರಿಗೆ ಬಾಡಿಗೆ ಮನೆಗಳನ್ನು ಹಾಗೂ ಕೊಠಡಿಗಳನ್ನು ನೀಡಿದವರನ್ನು ಕೂಡ ಪ್ರಶ್ನಿಸಲಾಗುತ್ತಿದೆ. ಇವರಲ್ಲಿ ಹೆಚ್ಚಿನವರು ಫ್ಯಾಕ್ಟರಿ, ಕೂಲಿ, ಹೋಟೆಲ್‌ಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ. ಹಲವರು ಕೆಲವು ವರ್ಷಗಳಿಂದಲೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.