ಕೊಳ್ಳೇಗಾಲ: ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಪಕ್ಕದ ಕಬ್ಬಿಣದ ಸೇತುವೆಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ, ಕೊಳ್ಳೇಗಾಲ ನ್ಯಾಯಾಲಯದ ಇಬ್ಬರು ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ಕೊಳ್ಳೇಗಾಲ ನಗರದ ಮುಡಿಗುಂಡ ಬಳಿ ಜೂ.18ರ ಗುರುವಾರ ತಡರಾತ್ರಿ ಸಂಭವಿಸಿದೆ.
ನ್ಯಾಯಾಲಯದ ಸಿಬ್ಬಂದಿಗಳಾದ ನಂಜುಂಡಪ್ಪ (50) ಮತ್ತು ಯಮುನಪ್ಪ (40) ಸ್ಥಳದಲ್ಲೇ ಕೊನೆಯುಸಿರೆಳೆದ ದುರ್ದೈವಿಗಳಾಗಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಕೃಷ್ಣಪ್ಪ ಹಾಗೂ ಕಾರಿನಲ್ಲಿದ್ದ ಮತ್ತಿಬ್ಬರಾದ ಶಂಕರಪ್ಪ ಮತ್ತು ಲೋಕೇಶ್ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮೃತರಾದ ನಂಜುಂಡಪ್ಪ ಮತ್ತು ಯಮುನಪ್ಪ ಅವರು ತಮ್ಮ ಸ್ನೇಹಿತರೊಂದಿಗೆ ಯಳಂದೂರು ತಾಲೂಕಿನ ನಡುಕಲಮೋಳೆ ಗ್ರಾಮದಲ್ಲಿ ನಡೆದಿದ್ದ ಸ್ನೇಹಿತನ ಮಗುವಿನ ನಾಮಕರಣ ಶಾಸ್ತ್ರ ಮುಗಿಸಿಕೊಂಡು ಕಾರಿನಲ್ಲಿ ತಡರಾತ್ರಿ ಕೊಳ್ಳೇಗಾಲಕ್ಕೆ ಮರಳಿ ಬರುತ್ತಿದ್ದರು.
ಈ ವೇಳೆ ಮುಡಿಗುಂಡದ ಕಬ್ಬಿಣದ ಸೇತುವೆ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಸೇತುವೆಯ ಕಬ್ಬಿಣದ ತಡೆಗೋಡೆಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಫೋಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು, ಡಿವೈಎಸ್ಪಿ ಮೋಹನ್, ಕೊಳ್ಳೇಗಾಲ ಸಿಐ ರವೀಂದ್ರ ಹಾಗೂ ಎಸ್ಐ ವರ್ಷಾ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಳ್ಳೇಗಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

