ಬೆಂಗಳೂರು : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವೊಂದಕ್ಕೆ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿದ್ದು, ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ವಿಮಾನದ ಶೌಚಾಲಯದ ಒಳಗೆ ಟಿಶ್ಯೂ ಪೇಪರ್ ಮೇಲೆ ‘ಬಾಂಬ್’ ಎಂದು ಬರೆದಿದ್ದ ಬೆದರಿಕೆ ಪತ್ರವನ್ನು ಪ್ರಯಾಣಿಕರೊಬ್ಬರು ಗಮನಿಸಿದ್ದಾರೆ. ತಕ್ಷಣವೇ ಅವರು ಈ ವಿಷಯವನ್ನು ವಿಮಾನದ ಸಿಬ್ಬಂದಿ ವರ್ಗದ ಗಮನಕ್ಕೆ ತಂದಿದ್ದಾರೆ. ಇದರಿಂದ ಎಚ್ಚೆತ್ತ ವಿಮಾನದ ಪೈಲಟ್ ಮತ್ತು ಸಿಬ್ಬಂದಿ, ಕೂಡಲೇ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳಿಗೆ ತುರ್ತು ಮಾಹಿತಿ ರವಾನಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ತಕ್ಷಣವೇ ಕೆಳಗಿಳಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ಭದ್ರತಾ ಸಿಬ್ಬಂದಿ ವಿಮಾನದ ಮೂಲೆ ಮೂಲೆಗಳನ್ನು ಹಾಗೂ ಪ್ರಯಾಣಿಕರ ಲಗೇಜ್‌ಗಳನ್ನು ಸಂಪೂರ್ಣವಾಗಿ ಜಾಲಾಡಿದ್ದಾರೆ. ತೀವ್ರ ತಪಾಸಣೆಯ ನಂತರ ವಿಮಾನದಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ, ಅಧಿಕಾರಿಗಳು ಇದೊಂದು ‘ಹುಸಿ ಬಾಂಬ್ ಬೆದರಿಕೆ’ ಎಂದು ಖಚಿತಪಡಿಸಿದ್ದಾರೆ.

ಬಳಿಕ ವಿಮಾನವು ಸುರಕ್ಷಿತವಾಗಿದೆ ಎಂದು ದೃಢಪಟ್ಟ ನಂತರ ಪ್ರಯಾಣಕ್ಕೆ ಅನುಮತಿ ನೀಡಲಾಗಿದ್ದು, ಘಟನೆಯಿಂದಾಗಿ ವಿಮಾನದ ಸಂಚಾರದಲ್ಲಿ ಕೆಲ ಗಂಟೆಗಳ ಕಾಲ ವಿಳಂಬ ಉಂಟಾಯಿತು. ಈ ಕಿಡಿಗೇಡಿತನದ ಕೃತ್ಯದ ಹಿಂದೆ ಯಾರ ಕೈವಾಡವಿದೆ ಮತ್ತು ಬೆದರಿಕೆ ಪತ್ರ ಬರೆದಿಟ್ಟವರು ಯಾರು ಎಂಬುದರ ಕುರಿತು ವಿಮಾನ ನಿಲ್ದಾಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.