ಬೆಂಗಳೂರು: ಬಿಟ್ ಕಾಯಿನ್ ಹಗರಣದ ಆರೋಪಿ ಶ್ರೀಕಿ ಸಿಐಡಿ ತನಿಖೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದಾನೆ. ಸಿಐಡಿ ಪೊಲೀಸರು 5-6 ಬಾರಿ ನೋಟಿಸ್ ನೀಡಿದರೂ ಇಲ್ಲಿಯವೆರೆಗೆ ಶ್ರೀಕಿ ವಿಚಾರಣೆಗೆ ಹಾಜರಾಗುತ್ತಿಲ್ಲ. ಪ್ರತಿಬಾರಿಯೂ ತಂದೆಗೆ ಹುಷಾರಿಲ್ಲ, ತಾಯಿಗೆ ಹುಷಾರಿಲ್ಲ, ನನಗೆ ಹುಷಾರಿಲ್ಲ ಎಂದು ಕಾರಣ ನೀಡಿ ಸಿಐಡಿ ಪೊಲೀಸರ ವಿಚಾರಣೆಯಿಂದ ತಪ್ಪಿಸುತ್ತಿದ್ದಾನೆ.
ಶ್ರೀಕಿ ಒಂದೂವರೆ ತಿಂಗಳ ಹಿಂದೆ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ ಹಾಗೂ ಮಲಗಲು ಮನೆಗೆ ಹೋಗುತ್ತಿದ್ದನು. ಆಗ ವಿಚಾರಣೆ ನಡೆಸಲು ಸಿಐಡಿ ತಂಡ ನಿಮ್ಹಾನ್ಸ್ಗೆ ಹೋದಾಗ ನಿಮ್ಮ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದ ಬೇಸೆತ್ತು ಸಿಐಡಿ ಅಧಿಕಾರಿಗಳು ಶ್ರೀಕಿಯ ಹೆಲ್ತ್ ರಿಪೋರ್ಟ್ ನೀಡುವಂತೆ ವೈದ್ಯರಿಗೆ ಕೇಳಿದ್ದರು. ಆಗ ವೈದ್ಯರು ಶ್ರೀಕಿ ಸಹವಾಸವೇ ಬೇಡವೆಂದು ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದರು. ಆದರೆ ಇದೀಗ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದರೂ ಹಾಜರಾಗದೆ ಕಳ್ಳಾಟವಾಡುತ್ತಿದ್ದಾನೆ.
2015ರ ಡ್ರಗ್ಸ್ ಕೇಸ್ನಲ್ಲಿ ಶ್ರೀಕಿಯನ್ನು ಬಂಧಿಸಲಾಗಿತ್ತು. 2020ರಲ್ಲಿ ಸುಮಾರು 1000 ಕೋಟಿ ಹಗರಣದ ಬಿಟ್ಕಾಯಿನ್ ಕೇಸ್ನಲ್ಲಿ ಶ್ರೀಕಿ ಬಂಧನವಾಗಿತ್ತು. ಈ ಪ್ರಕರಣವನ್ನು ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದರು. ಆದರೆ ಸಿಸಿಬಿ ಪೊಲೀಸರ ವಿರುದ್ಧ ದಾಖಲೆ ತಿರುಚಿರುವ ಆರೋಪಗಳು ಕೇಳಿ ಬಂದ ಮೇಲೆ ಬಿಟ್ ಕಾಯಿನ್ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಯಿತು.