ಬೆಂಗಳೂರು : ನಗರದ ವಿಲ್ಸನ್ ಗಾರ್ಡನ್ ನಲ್ಲಿ ದುಷ್ಕರ್ಮಿಗಳು ದ್ವಿಚಕ್ರ ವಾಹನ ಸವಾರರೊಬ್ಬರಿಗೆ ಲಾಂಗ್ ತೋರಿಸಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಚಿಲ್ಲರೆ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಶರವಣ್ , ಸೋನು, ವಿಕ್ರಮ್ ಬಂಧಿತ ಆರೋಪಿಗಳು. ಶಾಂತಿನಗರದಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದವರನ್ನು ಅಡ್ಡಗಟ್ಟಿದ್ದ ಈ ಮೂವರೂ ಮೊಬೈಲ್ ಹಾಗೂ ಹಣ ದೋಚಿದ್ದರು. ಈ ಕೃತ್ಯದ ದೃಶ್ಯಗಳು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಶಾಂತಿನಗರದ ಚರ್ಚ್ ರಸ್ತೆಯಲ್ಲಿ ನಡೆದಿದ್ದ ಘಟನೆ ನಗರದಲ್ಲಿ ಅಪರಾಧ ಕೃತ್ಯ ಹೆಚ್ಚಳವಾಗುತ್ತಿರುವ ಬಗ್ಗೆ ಸಾರ್ವಜನಿಕರ ಆತಂಕಕ್ಕೂ ಕಾರಣವಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

