ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ತನ್ನ ಆನ್‌ಲೈನ್ ಸೇವೆಗಳನ್ನು ಅಕ್ಟೋಬರ್ 4 ರಿಂದ ಮೂರು ದಿನಗಳವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಬೆಸ್ಕಾಂನ ಐಟಿ ವಿಭಾಗದಲ್ಲಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ನಿಮಿತ್ತ ಅಕ್ಟೋಬರ್ 4ರ ರಾತ್ರಿ 9 ಗಂಟೆಯಿಂದ ಅಕ್ಟೋಬರ್ 7ರ ಬೆಳಿಗ್ಗೆ 06 ಗಂಟೆವರೆಗೆ ಆರ್.ಎ.ಪಿ.ಡಿ.ಆರ್.ಪಿ ನಗರ ಪ್ರದೇಶದ ಗ್ರಾಹಕರಿಗೆ ಆನ್ಲೈನ್ ಸೇವೆಗಳು ಲಭ್ಯವಿರುವುದಿಲ್ಲ.
ಬೆಸ್ಕಾಂನ ಉಪವಿಭಾಗದ ವ್ಯಾಪ್ತಿಯಲ್ಲಿ ಎರಡು ದಿನ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್ಲೈನ್ ಅರ್ಜಿ ಸಲ್ಲಿಕೆ, ಹೆಸರು ಮತ್ತು ವಿಳಾಸ ಬದಲಾವಣೆ ಸೇರಿದಂತೆ ಯಾವುದೇ ಆನ್ಲೈನ್ ಸೇವೆ ಲಭ್ಯವಿರುವುದಿಲ್ಲ. ಹಾಗೆಯೇ ಬೆಸ್ಕಾಂ ಕ್ಯಾಶ್ ಕೌಂಟರ್ ಗಳಲ್ಲಿ ಬಿಲ್ ಪಾವತಿಸಲು ಸಾಧ್ಯವಿರುವುದಿಲ್ಲ. ಅಕ್ಟೋಬರ್ 5ರ ಬೆಳಗ್ಗೆ 11ರ ನಂತರ ವಿದ್ಯುತ್ ಬಿಲ್ ಪಾವತಿ ಕಾರ್ಯ ಪುನರಾರಂಭಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಐಟಿ ಮೂಲಸೌಕರ್ಯ ವರ್ಧನೆ ಮತ್ತು ಕಾರ್ಯಾಚರಣೆ ಪ್ರದೇಶಗಳಲ್ಲಿ ಸೇವೆಯ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಬೆಸ್ಕಾಂ ಈ ಕಾರ್ಯ ಕೈಗೊಂಡಿದೆ. 2024ರ ಮಾರ್ಚ್ 20 ರಂದು ಬಿಐಪಿ ಮತ್ತು ಡಬ್ಲ್ಯುಎಸ್‌ಎಸ್‌ಗೆ ನವೀಕರಣಗಳೊಂದಿಗೆ ಒರಾಕಲ್ ಸಿಸಿಬಿಯನ್ನು ಆವೃತ್ತಿ 2.3 ರಿಂದ 2.8 ಕ್ಕೆ ಯಶಸ್ವಿಯಾಗಿ ಅಪ್‌ಗ್ರೇಡ್ ಮಾಡುವುದರೊಂದಿಗೆ ಹಂತ-1 ಅನ್ನು ಹಂತ ಹಂತವಾಗಿ ನವೀಕರಿಸಲಾಗಿದೆ.
ಬೆಂಗಳೂರು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕ್ಯಾತಸಂದ್ರ, ಸಿರಾ, ಚನ್ನಪಟ್ಟಣ, ಆನೇಕಲ್, ಮುಳಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆಜಿಎಫ್, ಚಳ್ಳಕೆರೆ, ಕುಣಿಗಲ್, ಹರಪ್ಪನಹಳ್ಳಿ, ಹಿರಿಯೂರು, ತಿಪಟೂರು, ಗೌರಿಬಿದನೂರಿನಲ್ಲಿ ಆನ್ಲೈನ್ ಸೇರವೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂನ 24×7 ಸಹಾಯವಾಣಿ 1912ಕ್ಕೆ ಕರೆಮಾಡಿ ಅಥವಾ ಬೆಸ್ಕಾಂ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.

