News Karnataka Kannada
Saturday, May 04 2024
ಬೆಂಗಳೂರು

ಬೆಂಗಳೂರು: ಇಂದಿನ ವಿಧಾನಸಭಾ ಅಧಿವೇಶನದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ

Cm Siddaramaiah suspends zero traffic for convoy
Photo Credit : Facebook

ಬೆಂಗಳೂರು: ಇಂದಿನ ವಿಧಾನಸಭಾ ಅಧಿವೇಶನದ ತರುವಾಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

2 ವಾರಗಳ ಕಾಲ ಅಧಿವೇಶನವನ್ನು ಕರೆದಿದ್ದರು, ಪ್ರವಾಹ ಮತ್ತು ಅತಿವೃಷ್ಟಿ ಕುರಿತು ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೇಳಿದ್ದೆ, ನಂತರ ನಿಯಮ 69 ರಡಿ ಸುದೀರ್ಘ ಚರ್ಚೆ ನಡೆಯಿತು, ಸರ್ಕಾರ ಈ ಬಗ್ಗೆ ಸಮಂಜಸವಾದ ಉತ್ತರ ನೀಡಿಲ್ಲ, ಹಾಗಾಗಿ ನಾವು ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದೆವು.

ನಂತರ ಪಿಎಸ್‌ಐ ಹಗರಣ ಕುರಿತು ಚರ್ಚೆ ನಡೆಯಿತು. ಈ ಹಗರಣದಲ್ಲಿ ಎಡಿಜಿಪಿ ಮಟ್ಟದ ಅಧಿಕಾರಿಯ ಬಂಧನವಾಗಿದೆ. ಹಗರಣದ ಬಗ್ಗೆ ಮೊದಲು ನಾನು ಪ್ರಸ್ತಾಪ ಮಾಡಿದ್ದಾಗ ಸರ್ಕಾರ, ಮುಖ್ಯಮಂತ್ರಿಗಳು ಮತ್ತು ಸಚಿವರು ನಮ್ಮ ಮೈಮೇಲೆ ಬಿದ್ದರು. ನಮ್ಮ ಪಕ್ಷದ ಪರಿಷತ್‌ ಸದಸ್ಯ ವೆಂಕಟೇಶ್‌ ಅವರಿಗೆ 24-03-2022 ರಂದು ಹಗರಣವೇ ನಡೆದಿಲ್ಲ ಎಂದು ಗೃಹ ಸಚಿವರು ಉತ್ತರ ನೀಡಿದ್ದರು. ಕೊನೆಗೆ ಜನಾಕ್ರೋಶ ವ್ಯಕ್ತವಾದಮೇಲೆ ತನಿಖೆಯನ್ನು ಸಿಐಡಿಗೆ ವಹಿಸಿದ್ರು. ಎಡಿಜಿಪಿ ಅಮೃತ್‌ ಪೌಲ್‌ ಅವರು ನೇಮಕವಾದುದ್ದು ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ. ಆ ವೇಳೆಗೆ ಅಮೃತ್‌ ಪೌಲ್‌ ಅವರ ಬಗ್ಗೆ ದೂರುಗಳು ಇದ್ದವು. ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪರೀಕ್ಷೆಯಲ್ಲಿ ತಮಗೆ ಬೇಕಾದ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡು, ಅಭ್ಯರ್ಥಿಗಳಿಂದ ಹಣ ಪಡೆದು ಖಾಲಿ ಉತ್ತರ ಪತ್ರಿಕೆಗಳನ್ನು ಕಾನ್ಸ್‌ಟೆಬಲ್‌ ಗಳಿಂದ ತುಂಬಿಸಿ, ಪಾಸ್‌ ಮಾಡಿಸಿದ್ದಾರೆ. ಕಡೆಗೆ 545 ಜನರ ಆಯ್ಕೆಪಟ್ಟಿ ಪ್ರಕಟ ಮಾಡಿದ್ದರು. ಆ ನಂತರ ಎಡಿಜಿಪಿ ಕಚೇರಿಯಲ್ಲಿ ಸಿಐಡಿ ಅವರು ರೇಡ್‌ ಮಾಡಿ, ಅಮೃತ್‌ ಪೌಲ್‌ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಿದ್ದರು. ಇವರನ್ನು ಬಂಧಿಸಬೇಕು ಎಂಬ ಒತ್ತಡ ಹೆಚ್ಚಾದ ಮೇಲೆ ಬಂಧಿಸಿದ್ರು. ಮಂಜುನಾಥ್‌ ಎಂಬ ಐಎಎಸ್‌ ಅಧಿಕಾರಿ ಕೂಡ ಲಂಚ ಪಡೆದು ಜೈಲು ಪಾಲಾಗಿದ್ದಾರೆ. ಇದರರ್ಥ ಬರೀ ಅಧಿಕಾರಿಗಳನ್ನು ಮಾತ್ರ ವಿಚಾರಣೆ ಮಾಡಿ ಜೈಲಿಗೆ ಹಾಕಿದ್ದಾರೆ. ಇವತ್ತಿನವರೆಗೆ ಎಜಿಡಿಪಿ ಅವರನ್ನು ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಿ 164 ಹೇಳಿಕೆಯನ್ನು ಕೊಡಿಸಿಲ್ಲ. ಇದೇ ಕಾರಣಕ್ಕೆ ನಾನು ಎಡಿಜಿಪಿ ಅವರ ಮಂಪರು ಪರೀಕ್ಷೆ ಆಗಬೇಕು ಹಾಗೂ ಮ್ಯಾಜಿಸ್ಟ್ರೇಟರ ಮುಂದೆ 164ರ ಹೇಳಿಕೆ ದಾಖಲಿಸಬೇಕು ಎಂದು ಒತ್ತಾಯ ಮಾಡುತ್ತೇನೆ. ಆಗ ಇದರ ಹಿಂದೆ ಯಾವೆಲ್ಲಾ ರಾಜಕಾರಣಿಗಳು ಇದ್ದಾರೆ ಎಂಬುದು ಗೊತ್ತಾಗುತ್ತದೆ.

ಬಸವರಾಜ ದಡೆಸುಗೂರ್‌ ಅವರ ಆಡಿಯೋ ಲೀಕ್‌ ಆಗಿ, ಅದರಲ್ಲಿನ ಧ್ವನಿ ನನ್ನದೆ, ನಾನು 15 ಲಕ್ಷ ಲಂಚ ತೆಗೆದುಕೊಂಡಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದಾನೆ. ಇದರ ಜೊತೆಗೆ ಲಂಚ ಕೊಟ್ಟವರನ್ನು ಹೆದರಿಸಿದ್ದಾನೆ. ಇವನ ವಿಚಾರಣೆ ಮಾಡಿಲ್ಲ. ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಈ ಹಗರಣದಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿಗಳ ಮಗನ ಕೈವಾಡವಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆಯಾಗಿಲ್ಲ. ಇದರಲ್ಲಿ ಕೈವಾಡವಿರುವುದು ಯಡಿಯೂರಪ್ಪ ಅವರ ಮಗನಾ? ದೇವೇಗೌಡರ ಮಗನಾ? ಸಿದ್ದರಾಮಯ್ಯನ ಮಗನಾ? ಎಂಬುದು ವಿಚಾರಣೆ ಆಗಿಲ್ಲ.

ಈ ದಡೆಸುಗೂರು ಲಂಚದ ಹಣವನ್ನು ಸರ್ಕಾರಕ್ಕೆ ನೀಡಿದ್ದೇನೆ ಎಂದು ಆಡಿಯೋದಲ್ಲಿ ಹೇಳಿದ್ದಾರೆ. ಈಗ ಯಾವ ಸರ್ಕಾರ ಇದೆ? ಬಿಜೆಪಿ ಸರ್ಕಾರ ಅಲ್ವಾ? ಈ ಹಣವನ್ನು ಮುಖ್ಯಮಂತ್ರಿಗಳಿಗೆ ಅಥವಾ ಗೃಹ ಸಚಿವರಿಗೆ ಕೊಟ್ಟಿರಬೇಕು. ಹಗರಣದಲ್ಲಿ 92 ಜನರ ಬಂಧನವಾಗಿದೆ, ಆದರೆ ಇದರಲ್ಲಿ ಒಬ್ಬನೇ ಒಬ್ಬ ರಾಜಕಾರಣಿ ಇಲ್ಲ.

ಲಾಯರ್ಸ್‌ ಅಸೋಸಿಯೇಷನ್‌ ನ ಎ.ಪಿ ರಂಗನಾಥ್‌ ಎಂಬುದವವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು, ಈ ವೇಳೆ ಅವರು ಹಗರಣದಲ್ಲಿ 4 ಮಂದಿ ಸಚಿವರು ಷಾಮೀಲಾಗಿದ್ದಾರೆ, ಒಬ್ಬ ಅಭ್ಯರ್ಥಿ ಸಚಿವರೊಬ್ಬರ ಸಂಬಂಧಿಕ ಸಿಕ್ಕಿಬಿದ್ದಿದ್ದಾನೆ, ಆತನಿಗೆ ಈಗ ಬೇಲ್‌ ಸಿಕ್ಕಿದೆ ಎಂಬ ಮಾಹಿತಿ ಇದೆ ಎಂದು ಹೇಳಿದ್ದರು. ಈ ವಿಚಾರದಲ್ಲಿ ತನಿಖೆ ನಡೆಸಿ ಎಂದರೆ ತನಿಖೆ ಮಾಡಿಸಿಲ್ಲ. ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.

1 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರು 6-7-2021ರಲ್ಲಿ ಪ್ರಧಾನಿಗಳಿಗೆ ಪತ್ರ ಬರೆದಿದ್ದರು, ನಂತರ ರಾಜ್ಯಪಾಲರಿಗೆ ಪತ್ರ ಬರೆದಿದ್ದರು, ನಂತರ ಯಡಿಯೂರಪ್ಪ ಅವರ ಭೇಟಿಗೆ ಅವಕಾಶ ಕೇಳಿದ್ದರು, ನಂತರ ಮುಖ್ಯಮಂತ್ರಿ, ಕಾನೂನು ಸಚಿವ ಮಾಧುಸ್ವಾಮಿ, ಗೋವಿಂದ ಕಾರಜೋಳ, ಸಿಸಿ ಪಾಟೀಲರನ್ನು ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿಗಳು ಒಂದು ಸಭೆ ಕರೆದು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂಬ ಭರವಸೆಯನ್ನು ಅವರಿಗೆ ನೀಡಿದ್ದಾರೆ. ಗುತ್ತಿಗೆದಾರರ ಸಂಘದವರದ್ದು 3 ಮುಖ್ಯ ಬೇಡಿಕೆಗಳು ಇದ್ದಾವೆ. ಮೊದಲನೆಯದು 40% ಕಮಿಷನ್‌ ಹಣ ತೆಗೆದುಕೊಳ್ಥಿದ್ದಾರೆ, 5% ಪ್ರಾಜೆಕ್ಟ್‌ ಅನುಮೋದನೆಗೆ, 2% ಲೋಕಸಭಾ ಸದಸ್ಯರಿಗೆ, 10% ಸ್ಥಳೀಯ ಶಾಸಕರಿಗೆ, 5% ಸ್ಥಳೀಯ ಜನಪ್ರತಿನಿಧಿಗಳಿಗೆ ಕೊಡಬೇಕು, ಮತ್ತೆ ಹಣ ಬಿಡುಗಡೆಗೆ 5 ರಿಂದ 8% ಲಂಚ ಕೊಡಬೇಕು. ಇಷ್ಟೆಲ್ಲಾ ಕೊಟ್ಟು ಗುತ್ತಿಗೆದಾರ 20% ಲಾಭ ಇಟ್ಟುಕೊಳ್ತಾನೆ, ನಂತರ ಜಿಎಸ್‌ಟಿ 15% ಹೋದ್ರೆ ಕಾಮಗಾರಿಗೆ ಉಳಿಯೋದು ಕೇವಲ 20% ಹಣ, ಇದರಲ್ಲಿ ಗುಣಮಟ್ಟದ ಕೆಲಸ ನಿರೀಕ್ಷೆ ಮಾಡೋಕೆ ಸಾಧ್ಯನಾ? ಇಷ್ಟೆಲ್ಲಾ ಆರೋಪ ಇದ್ದರೂ ಮುಖ್ಯಮಂತ್ರಿಗಳು ಸಾಕ್ಷಿ ಕೇಳುತ್ತಿದ್ದಾರೆ.

ಗುತ್ತಿಗೆದಾರರು ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ವಿಚಾರಣೆ ಸಂದರ್ಭದಲ್ಲಿ ನಾವು ಅಗತ್ಯ ದಾಖಲೆ ಒದಗಿಸುತ್ತೇವೆ. ಒಂದು ವೇಳೆ ನಾವು ಮಾಡಿರುವ ಆರೋಪ ಸಾಬೀತು ಮಾಡಲು ಸಾದ್ಯವಾಗಿಲ್ಲ ಎಂದರೆ ಯಾವುದೇ ರೀತ್ಯಾ ಕಾನೂನು ಶಿಕ್ಷೆ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳುತ್ತಿದ್ದಾರೆ. ಈಗಲೇ ಸರ್ಕಾರಕ್ಕೆ ಗುತ್ತಿಗೆದಾರರು ದಾಖಲೆ ನೀಡಿದ್ರೆ ತೊಂದರೆಗೆ ಬೀಳುತ್ತೇವೆ ಎಂಬ ಭಯ ಅವರಿಗಿದೆ.

ಕೆಂಪಣ್ಣ ನನ್ನನ್ನು ಭೇಟಿಯಾದದ್ದು 24-8-2022ರಂದು, ಇದಕ್ಕೂ ಮೊದಲು ಅವರು ನನ್ನನ್ನು ಭೇಟಿಯಾಗಿರಲಿಲ್ಲ. ಆದರೂ ಮುಖ್ಯಮಂತ್ರಿಗಳು ಕೆಂಪಣ್ಣನವರನ್ನು ಸಿದ್ದರಾಮಯ್ಯ ಅವರ ಏಜೆಂಟ್‌ ಎಂದು ಕರೆದಿದ್ದಾರೆ. ಹೀಗೆ ಕುಂಟು ನೆಪಗಳನ್ನು ನೀಡಿ ಜನರ ಗಮನವನ್ನು ಬೇರೆ ಕಡೆಗೆ ತಿರುಗಿಸುವ ಪ್ರಯತ್ನವನ್ನು ಸ್ವತಃ ಮುಖ್ಯಮಂತ್ರಿಗಳು ಮಾಡಿದ್ದಾರೆ. ಕೆಂಪಣ್ಣನವರ ಪ್ರಕಾರ ಆರೋಗ್ಯ, ವೈದ್ಯಕೀಯ ಶಿಕ್ಷಣ, ಲೋಕೋಪಯೋಗಿ, ನೀರಾವರಿ, ಸಣ್ಣ ನೀರಾವರಿ, ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ವ್ಯಾಪಕವಾಗಿ ಲಂಚ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಇದರಲ್ಲಿ ಮುನಿರತ್ನ ಮತ್ತು ಸುಧಾಕರ್‌ ಅವರ ಹೆಸರನ್ನು ಹೇಳಿದ್ದಾರೆ.

ನನ್ನ ಭೇಟಿ ಮಾಡಿದ ವೇಳೆ ಅವರು ಮತ್ತೆ ಪ್ರಧಾನಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ರಾಜ್ಯದ ಎಲ್ಲಾ ಪತ್ರಿಕೆಗಳು ಸಂಪಾದಕೀಯ ಪ್ರಕಟ ಮಾಡಿವೆ. ಆದರೂ ಈ ಭಂಡ ಸರ್ಕಾರ ಯಾವುದೇ ತನಿಖೆ ಮಾಡಲು ಸಿದ್ಧವಿಲ್ಲ. ಹಿಂದಿನ ಅಧಿವೇಶನದಲ್ಲಿ ಕೂಡ ನಾನು ಈ ಬಗ್ಗೆ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೇಳಿದ್ದೆ ಆದರೆ ಕಳೆದ ಬಾರಿ ನನ್ನ ಮನವಿಯನ್ನು ತಿರಸ್ಕಾರ ಮಾಡಿದ್ದರು. ಈ ಬಾರಿ ನಾಲ್ಕು ದಿನಗಳ ಹಿಂದೆ ಮತ್ತೆ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೇಳಿದ್ದೆ, ಅವಕಾಶ ನೀಡುವುದಾಗಿ ಹೇಳಿ ಚರ್ಚೆಯನ್ನೇ ಮಾಡದೆ ಕೊನೆಗೆ ಅಧಿವೇಶನವನ್ನು ಮುಕ್ತಾಯ ಮಾಡಿದ್ದಾರೆ. ನಾನು ಅಧಿವೇಶನವನ್ನು ಒಂದು ದಿನ ವಿಸ್ತರಣೆ ಮಾಡಿ, ಸೋಮವಾರ ಅಥವಾ ನಾಳೆ ಈ ವಿಚಾರ ಚರ್ಚೆ ಮಾಡೋಣ ಎಂದು ಹೇಳಿದೆ ಆದರೆ ಸರ್ಕಾರ ಈ ಯಾವುದಕ್ಕೂ ಸಿದ್ಧವಿಲ್ಲ.

ನಾನು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಅದಕ್ಕೂ ಮೊದಲು ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದಾಗ ಸಿಬಿಐ ಅನ್ನು ಚೋರ್‌ ಬಚಾವೊ ಇನ್ಸ್‌ಟಿಟ್ಯೂಟ್‌ ಎಂದು ಇದೇ ಬಿಜೆಪಿಯವರು ಕರೆಯುತ್ತಿದ್ದರು. ಕೇಂದ್ರದಲ್ಲಿ ತಮ್ಮ ಪಕ್ಷದ ಸರ್ಕಾರ ಬಂದ ಕೂಡಲೇ ಸಿಬಿಐ ಮೇಲೆ ಬಿಜೆಪಿಯವರಿಗೆ ಪ್ರೀತಿ, ನಂಬಿಕೆ ಉಕ್ಕಿ ಬಂದಿತ್ತು. 2008ರಿಂದ 2013ರ ವರೆಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಪ್ರಕರಣವನ್ನು ಸಿಬಿಐ ಗೆ ಸರ್ಕಾರ ವಹಿಸಿರಲಿಲ್ಲ. ಆಪರೇಷನ್‌ ಕಮಲದ ಮೂಲಕ ಶಾಸಕರನ್ನು ಖರೀದಿಸಿ, ಸರ್ಕಾರ ಮಾಡಿ 3 ವರ್ಷ ಆಯಿತು ಒಂದೇ ಒಂದು ಪ್ರಕರಣವನ್ನು ಸ್ವಾಯತ್ತ ತನಿಖಾ ಸಂಸ್ಥೆ ಮೂಲಕ ತನಿಖೆ ಮಾಡಿಸಿಲ್ಲ. ಪಿಎಸ್‌ಐ ಹಗರಣವನ್ನು ನ್ಯಾಯಾಂಗ ತನಿಖೆಗೆ ನೀಡುವಂತೆ ನಾನು ಒತ್ತಾಯ ಮಾಡಿದ್ದೆ, ಆದರೂ ಸರ್ಕಾರ ಒಪ್ಪಿಲ್ಲ.

ನಿನ್ನೆ ಬಿಜೆಪಿ ಪಕ್ಷದವರು ಸಿದ್ದರಾಮಯ್ಯ, ಸ್ಕ್ಯಾಮ್‌ ರಾಮಯ್ಯ ಎಂಬ ಪುಸ್ತಕ ಹೊರತಂದಿದ್ದಾರೆ. ಈ ಪುಸ್ತಕದಲ್ಲಿರುವ ಯಾವುದಾದರೂ ಒಂದು ಆರೋಪವನ್ನು ಬಿಜೆಪಿಯವರು ಹಿಂದಿನ 3 ವರ್ಷಗಳ ಕಾಲ ಸದನದ ಒಳಗೆ ಅಥವಾ ಸದನದ ಹೊರಗೆ ಪ್ರಸ್ತಾಪ ಮಾಡಿದ್ದಾರ?

ರೀಡೂ ಮಾಡಿ ಎಂದು ಹೇಳಿದವರು ನ್ಯಾಯಾಲಯ. ಕೆಂಪಣ್ಣ ಅವರ ಅವರ ವರದಿಯಲ್ಲಿ ಸಿದ್ದರಾಮಯ್ಯ ಅವರು ಯಾವುದೇ ಡಿನೋಟಿಫಿಕೇಷನ್‌ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆ ನಂತರ ಕೆಲವರು ಹೈಕೋರ್ಟ್‌ ಗೆ ಹೋದರು, ಅದಕ್ಕಾಗಿ ಹೈಕೋರ್ಟ್‌ ನವರು ಕೇಶವ ನಾರಾಯಣ ಎಂಬ ಹೈಕೋರ್ಟ್‌ ನ ಮಾಜಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ಕಮಿಟಿ ಮಾಡಿದ್ದಾರೆ, ಒಬ್ಬರು ಸಂದೀಪ್‌ ಧವೆ (ನಿವೃತ್ತ ಐಎಎಸ್‌ ಅಧಿಕಾರಿ) ಹಾಗೂ ಮೇಘರಿಕ್‌ ( ನಿವೃತ್ತ ಐಪಿಎಸ್‌ ಅಧಿಕಾರಿ) ಅವರು ಈ ಕಮಿಟಿಯ ಸದಸ್ಯರಾಗಿದ್ದಾರೆ. ಇದಾದ ನಂತರ ಯಾವುದೋ ಒಂದು ಸಂಸ್ಥೆಯವರು ಕೆಂಪಣ್ಣನವರ ವರದಿಯನ್ನು ಅಸೆಂಬ್ಲಿ ಮುಂದೆ ಇಡಿ ಎಂದು ಹೋಗಿದ್ದರು, ಅದಕ್ಕೆ ಹೈಕೋರ್ಟ್‌ ನವರು ನಿಮ್ಮ ಅರ್ಜಿಯನ್ನು ತಿರಸ್ಕಾರ ಮಾಡುತ್ತೇವೆ ಕಾರಣ ಈಗಾಗಲೇ ನ್ಯಾಯಾಲಯವು ಕೇಶವ ನಾರಾಯಣ ಅವರ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಿದೆ. ಆದ್ದರಿಂದ ಈ ಅರ್ಜಿ ಪರಿಗಣನೆಗೆ ಬರುವುದಿಲ್ಲ ಎಂದು ತಿರಸ್ಕಾರ ಮಾಡಿದ್ದರು. ಈ ಬಿಜೆಪಿಯವರು ಮಾತನಾಡಿದ್ರೆ ಅರ್ಕಾವತಿ ರೀಡೂ, ಅರ್ಕಾವತಿ ರೀಡೂ ಎಂದು ಬೊಬ್ಬೆ ಹಾಕುತ್ತಾರೆ. ಈ ರೀಡೂ ಎಂಬುದು ಹೈಕೋರ್ಟ್‌ ಹೇಳಿದ್ದು, ನಾವಲ್ಲ.

ಸಿಬಿಐಗೆ ನಮ್ಮ ಸರ್ಕಾರ ವಹಿಸಿದ್ದ ಪ್ರಕರಣಗಳು
1. ಡಿ.ಕೆ ರವಿ ಪ್ರಕರಣವನ್ನು ಮಾರ್ಚ್‌ 23, 2015ರಲ್ಲಿ ಸಿಬಿಐಗೆ ವಹಿಸಿದ್ದೆ. ಅದರಲ್ಲಿ ಬಿ ರಿಪೋರ್ಟ್‌ ಆಗಿದೆ. ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿತ್ತು.
2. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು 5-9-2017ರಲ್ಲಿ ಸಿಬಿಐ ಗೆ ವಹಿಸಿದ್ದೆ, ಇದರಲ್ಲೂ ಬಿ ರಿಪೋರ್ಟ್‌ ಆಗಿದೆ. ನರೇಂದ್ರ ಮೋದಿ ಅವರೇ ಪ್ರಧಾನಿ.
3. ಅಕ್ರಮ ಲಾಟರಿ ಪ್ರಕರಣ, ಕುಮಾರಸ್ವಾಮಿ ಮತ್ತು ದೇವೇಗೌಡರು ನನ್ನ ಮತ್ತು ಜಾರ್ಜ್‌ ವಿರುದ್ಧ ಸುಮ್ಮನೆ ಆರೋಪ ಮಾಡಿದ್ದರು. ಆರೋಪ ಬಂದ ತಕ್ಷಣವೇ ಮಾಧ್ಯಮದವರನ್ನು ಕರೆದು, ಅವರೆದುರೆ ಸಿಬಿಐ ಗೆ ವಹಿಸಿದ್ದೆ. 26-5-2015
4. ಪರೇಶ್‌ ಮೇಸ್ತಾ ಪ್ರಕರಣವನ್ನು 13-12-2017ರಂದು ಸಿಬಿಐಗೆ ವಹಿಸಿದ್ದೆ.
5. ಸೌಜನ್ಯ ಕೊಲೆ ಪ್ರಕರಣವನ್ನು 2013ರಲ್ಲಿ ಸಿಬಿಐಗೆ ವಹಿಸಿದ್ದೆ.
6. ಎಂ.ಎಂ ಕಲಬುರ್ಗಿ ಕೊಲೆ ಪ್ರಕರಣವನ್ನು ಸಿಬಿಐ ಗೆ ವಹಿಸಿದ್ದೆ, ಕೊನೆಗೆ ವಿಶೇಷ ತನಿಖಾ ತಂಡ ರಚನೆ ಮಾಡಿದ್ರು.
7. ರಾಮನಗರ ಮತ್ತು ಮಂಡ್ಯ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಅವ್ಯವಹಾರ ಪ್ರಕರಣವನ್ನು ಸಿಬಿಐ ಗೆ ವಹಿಸಿದ್ದೆ.
8. ಅನುರಾಗ್‌ ತಿವಾರಿ ಅವರು ಉತ್ತರ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಿದ್ದೆ.

ಇದೆಲ್ಲವೂ ಸ್ಕ್ಯಾಮ್‌ ರಾಮಯ್ಯ ಎಂಬ ಪುಸ್ತಕದಲ್ಲಿ ತಪ್ಪು ತಪ್ಪಾಗಿ, ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಕಾರಣಕ್ಕೆ ಹೇಳಬೇಕಾಗಿದೆ. ಈ ಬಿಜೆಪಿ ಯವರಿಗೆ ಮಾಣ ಮರ್ಯಾದಿ ಇದೆಯಾ? ಗುತ್ತಿಗೆದಾರರು ಸರ್ಕಾರದ ವಿರುದ್ಧ ನೇರ ಆರೋಪ ಮಾಡುತ್ತಿದ್ದಾರೆ, ತನಿಖೆಗೆ ವಹಿಸಿದ್ರಾ? ಬಿಬಿಎಂಪಿ ಗುತ್ತಿಗೆದಾರ ಮಂಜುನಾಥ್‌ ಎಂಬುವವರು ಬಿಬಿಎಂಪಿ ಕಾಮಗಾರಿಗಳಲ್ಲಿ 50% ಕಮಿಷನ್‌ ಕೇಳುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಈ ವಿಚಾರವನ್ನು ಸದನದಲ್ಲಿ ಚರ್ಚೆಗೆ ಅವಕಾಶ ನೀಡಿಲ್ಲ, ತನಿಖೆಗೆ ನೀಡಲು ಸಿದ್ಧರಿಲ್ಲ. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಆರೋಪ ಬಂದ ತಕ್ಷಣ ಸಿಬಿಐಗೆ ವಹಿಸಿದ್ದೆವು, ಕಾರಣ ನಾನಾಗಲೀ, ಸಚಿವರಾಗಲೀ ಯಾವ ತಪ್ಪು ಮಾಡಿರಲಿಲ್ಲ, ಈ ಧೈರ್ಯದಿಂದಲೇ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ನಾವು ಸಿಬಿಐ ತನಿಖೆಗೆ ವಹಿಸಿದ್ದು.

ಈ ಆರ್‌,ಎಸ್‌,ಎಸ್‌ ನವರು ಪಿ. ರಾಜೀವ್‌ ಅವರ ಕೈಲಿ ಮಾಧ್ಯಮಗೋಷ್ಠಿ ಮಾಡಿಸುತ್ತಾರೆ. ಇವೆಲ್ಲಾ ಪ್ರಿಂಟ್‌ ಆಗಿರುವುದು ಕೇಶವ ಕೃಪದಲ್ಲಿ. ಇದರಲ್ಲಿರುವುದು ಬರೀ ಸುಳ್ಳು. ಒಂದೇ ಒಂದು ಪ್ರಕರಣವೂ ಸತ್ಯದಿಂದ ಕೂಡಿಲ್ಲ. ಹೋಗಲಿ ಈಗ ನಾವು ಅಧಿಕಾರದಲ್ಲಿ ಇದ್ದೀವಾ, ದಾಖಲೆಗಳು ನಮ್ಮ ಬಳಿ ಇದ್ದಾವ, ಅಧಿಕಾರಿಗಳು ನಮ್ಮ ಮಾತುಗಳನ್ನು ಕೇಳುತ್ತಾರ? ಆದರೂ ಬಿಜೆಪಿ ಅವರು ಸುಳ್ಳು ಆರೋಪ ಮಾಡಿಕೊಂಡು ಕೂತಿದ್ದಾರೆ. ಆಗ ಅಧಿಕೃತ ವಿರೋಧ ಪಕ್ಷವಾಗಿದ್ದಾಗ ಸುಮ್ಮನೆ ಇದ್ದು, ನಾವೀಗ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ದೊಡ್ಡ ಆಂದೋಲನ ಕೈಗೊಂಡಿರುವುದರಿಂದ ಇಂಥದ್ದೊಂದು ಸುಳ್ಳಿನ್‌ ಬುಕ್‌ ಬಿಡುಗಡೆ ಮಾಡಿದ್ದಾರೆ. ನಾಚಿಕೆಯಾಗಬೇಕು.

ಇದೇ ಕಾರಣಕ್ಕೆ ನಾನು ಬಸವರಾಜ್‌ ಬೊಮ್ಮಾಯಿ ಅವರಿಗೆ 2006ರಿಂದ ಈ ವರೆಗಿನ ಸರ್ಕಾರದ ಎಲ್ಲವನ್ನೂ ನ್ಯಾಯಾಂಗ ತನಿಖೆ ಮಾಡಿಸಿ, ನಾವು ತನಿಖೆಗೆ ಹೆದರುವವರಲ್ಲ. ಕಾರಣ ನಾವು ಭ್ರಷ್ಟಾಚಾರ ಎಸಗಿಲ್ಲ. ಆದರೆ ಬಿಜೆಪಿಯವರು ಹೆದರುತ್ತಿದ್ದಾರೆ. ಭ್ರಷ್ಟಾಚಾರದ ಮೂಲಕ ಹಿಂಬಾಗಿಲಿನಿಂದ ಬಂದು ಅಧಿಕಾರದಲ್ಲಿ ಕೂತಿದ್ದಾರೆ. ಈ ಸರ್ಕಾರಕ್ಕೆ ಕಿಂಚಿತ್ತೂ ಮಾನ ಮರ್ಯಾದಿ ಇದೆಯಾ? ಏನು ದಮ್‌ ಇದ್ರೆ, ತಾಕತ್‌ ಇದ್ರೆ ಎಂಬ ವೀರಾವೇಶದ ಭಾಷಣಗಳು. ಈಗ ನಿಮಗೆ ಧಮ್‌ ಇದ್ರೆ ನ್ಯಾಯಾಂಗ ತನಿಖೆ ಮಾಡಿಸ್ರಿ ನೋಡೋಣ.

ರಾಜೀವ್‌ ಅವರ ಆರೋಪ ಇರುವುದು 12 ಜನ ಶಿಕ್ಷಕರು ಅಕ್ರಮವಾಗಿ ನೇಮಕವಾಗಿದ್ದಾರೆ ಎಂಬುದು. ದೇವೇಂದ್ರ ನಾಯ್ಕ, ಶಮಿನಾಜ್‌ ಬಾನು, ನವೀನ್‌ ಹನುಮಗೌಡ, ಪ್ರಸನ್ನ, ಕಮಲ, ರಾಜೇಶ್ವರಿ, ನಾಗರತ್ನ, ದಿನೇಶ್‌.ಹೆಚ್‌ ಇವರೆಲ್ಲರಿಗೂ ಆದೇಶ ಪ್ರತಿ ಸಿಕ್ಕಿರುವುದು ಬಿಜೆಪಿ ಹಾಗೂ ಕುಮಾರಸ್ವಾಮಿ ಅವರ ಆಡಳಿತದ ಅವಧಿಯಲ್ಲಿ. ನಮ್ಮ ಸರ್ಕಾರ ಇದ್ದಾಗ 3 ಜನ ಮಾತ್ರ ನೇಮಕವಾಗಿದ್ದರು. ಒಟ್ಟು 12 ಜನರಲ್ಲಿ 7 ಜನರಿಗೆ ಬಿಜೆಪಿ ಅವಧಿಯಲ್ಲಿ, 2 ಜನರಿಗೆ ಕುಮಾರಸ್ವಾಮಿ ಅವರ ಅವಧಿಯಲ್ಲಿ ಹಾಗೂ 3 ಜನರಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ನೇಮಕವಾದವು. ಇವನ್ನೂ ನ್ಯಾಯಾಂಗ ತನಿಖೆಗೆ ಸೇರಿಸಿ ಕೊಡಿಯಪ್ಪಾ. ಇದರಲ್ಲಿ ನಮ್ಮ ಪಾತ್ರ ಏನಿಲ್ಲ. ಜಂಟಿ ನಿರ್ದೇಶಕರು ನೇಮಕಾತಿ ಪ್ರಕ್ರಿಯೆ ನೋಡಿಕೊಳ್ಳೋದು.

ನಮ್ಮ ಸರ್ಕಾರದ ಅವಧಿಯಲ್ಲಿ 35,000 ಮಂದಿ ಪೊಲೀಸ್‌ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡಿದ್ದೆವು. 1676 ಸಬ್‌ ಇನ್ಸ್‌ಪೆಕ್ಟರ್‌, 30,113 ಕಾನ್ಸ್‌ಟೆಬಲ್‌, 1102 ಜೈಲರ್‌ ಮತ್ತು ವಾರ್ಡನ್‌ ಗಳು, ಫೊರೆನ್ಸಿಕ್‌ ಸೈನ್ಸ್‌ ಸಿಬ್ಬಂದಿಗಳಾಗಿ 33 ಜನರನ್ನು ಒಟ್ಟು 35,000ಕ್ಕೂ ಅಧಿಕ ಸಿಬ್ಬಂದಿಗಳನ್ನು ನೇಮಕಾತಿ ಮಾಡಿದ್ದೇವೆ. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ನಮ್ಮ ಸರ್ಕಾರದ ಅವಧಿಯ ನೇಮಕಾತಿ ಪ್ರಕ್ರಿಯೆ ವಿಧಾನವನ್ನು ಕೋರ್ಟ್‌ ಆವರಣದಲ್ಲಿಯೇ ಶ್ಲಾಘನೆ ಮಾಡಿದ್ದರು. ಫೆಡರೇಷನ್‌ ಆಫ್ ಇಂಡಿಯನ್‌ ಛೇಂಬರ್ಸ್‌ ಆಫ್‌ ಕಾಮರ್ಸ್‌ ಅಂಡ್‌ ಇಂಡಸ್ಟ್ರಿ ಅವರು ನಮಗೆ ವಿಶೇಷ ಜೂರಿ ಪ್ರಶಸ್ತಿ ನೀಡಿದ್ದಾರೆ. 2015ರಲ್ಲಿ ಪೊಲೀಸ್‌ ನೇಮಕಾತಿಗಳಿಗೆ ಐಎಸ್‌ಒ 9001 ಸರ್ಟಿಫಿಕೇಟ್‌ ಅನ್ನು ಸಹ ನೀಡಿದ್ದಾರೆ. ಇದಕ್ಕೆಲ್ಲ ಔರದ್ಕರ್‌ ಅವರು ಭ್ರಷ್ಟಾಚಾರ ರಹಿತವಾಗಿ, ಪಾರದರ್ಶಕವಾಗಿ ನೇಮಕಾತಿ ಮಾಡಿದ್ದು ಕಾರಣ. ನಾವು 35,000 ಜನರ ನೇಮಕಾತಿ ಮಾಡಿಕೊಂಡ್ರು ಯಾವ ಸಮಸ್ಯೆ, ಹಗರಣ ಆಗಿಲ್ಲ, ಈ ಬಿಜೆಪಿ ಅವರು 545 ಜನ ನೇಮಕ ಮಾಡಲು ಹೋಗಿ ಇಷ್ಟೆಲ್ಲಾ ಸಿಕ್ಕಾಕಿಕೊಂಡು, ನರಳಾಡ್ತಾ ಇದ್ದಾರೆ, ಜನ ಛೀ, ತೂ ಎಂದು ಉಗಿಯುತ್ತಿದ್ದಾರೆ. ನಾಚಿಕೆಯಾಗಲ್ವಾ ನಿಮಗೆ?

ಈ ಬಾರಿ ನನಗೆ ಮಾತನಾಡಲು ಅವಕಾಶ ನೀಡಿಲ್ಲ. ಇದನ್ನು ಇಲ್ಲಿಗೆ ಬಿಡಲ್ಲ. ಮತ್ತೆ ಸದನ ಕರೆದರೆ ಶುರು ಮಾಡುತ್ತೇವೆ. ಈಗಾಗಲೇ 40% ಕಮಿಷನ್‌ ಕುರಿತು ಅಭಿಯಾನ ಆರಂಭ ಮಾಡಿದ್ದೇವೆ. ಜನರ ಬಳಿಗೆ ಹೋಗಿ ಸತ್ಯ ಹೇಳುತ್ತೇವೆ. ಇಂಥಾ ಭ್ರಷ್ಟ ಸರ್ಕಾರ ಇಡೀ ದೇಶದಲ್ಲೂ ಇಲ್ಲ, ನನ್ನ ರಾಜಕೀಯ ಜೀವನದಲ್ಲೂ ನೋಡಿಲ್ಲ.

ನ್ಯಾಷನಲ್‌ ಕ್ರೈಂ ರೆಕಾರ್ಡ್‌ ಬ್ಯೂರೋ ಅವರು ನಡೆಸಿರುವ ಸರ್ವೇ ಪ್ರಕಾರ ಕರ್ನಾಟಕ ಭ್ರಷ್ಟಾಚಾರದಲ್ಲಿ 4ನೇ ಸ್ಥಾನದಲ್ಲಿದೆ. 2019ರ ನಂತರ ಭ್ರಷ್ಟಾಚಾರ ಅತ್ಯಂತ ವ್ಯಾಪಕವಾಗಿ ಹೆಚ್ಚಾಗಿದೆ. ಈ ಮಾತನ್ನು ಬೇಕಾದರೆ ಕೆಂಪಣ್ಣನವರ ಬಳಿ ಕೇಳಿ ನೋಡಿ. ಮೊದಲೂ ಭ್ರಷ್ಟಾಚಾರ ಇತ್ತು, ಆದರೆ ಗುತ್ತಿಗೆದಾರರ ಸಂಘದವರು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪ್ರಧಾನಿಗಳಿಗೆ ಪತ್ರ ಬರೆದಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು. ಇದೇ ಕಾರಣಕ್ಕೆ ತಮಮ್‌ ಬಣ್ಣ ಬಯಲಾಗುತ್ತದೆ ಎಂಬ ಭಯದಿಂದ ಸದನದಲ್ಲಿ ಚರ್ಚೆ ಮಾಡಲು ಅವಕಾಶವನ್ನೇ ನೀಡಿಲ್ಲ.

ನನ್ನನ್ನು ಜೈಲಿಗೆ ಹೋಗಬೇಕಾದರೆ ಅದಕ್ಕೆ ಮೊದಲು ನ್ಯಾಯಯುತ ತನಿಖೆ ಆಗಬೇಕು, ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನಾನು ಅಪರಾಧಿ ಎಂದು ಸಾಬೀತಾಗಬೇಕು ಅಲ್ವಾ. ಹಾಗಾಗಿ ನಾನೇ ಹೇಳ್ತಿದ್ದೀನಿ, 2006 ರಿಂದ ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಸದಾನಂದ ಗೌಡರು ಮತ್ತು ನಮ್ಮ ಸರ್ಕಾರ ಹಾಗೂ ಈ 4 ವರ್ಷಗಳ ಸರ್ಕಾರದ ಎಲ್ಲವನ್ನೂ ನ್ಯಾಯಾಂಗ ತನಿಖೆಗೆ ಒಪ್ಪಿಸಿ. ಆಗ ಯಾರು ಭ್ರಷ್ಟರು, ಯಾರು ಪ್ರಾಮಾಣಿಕರು ಗೊತ್ತಾಗುತ್ತದೆ. ನನಗೆ ನ್ಯಾಯಾಂಗ ತನಿಖೆ ಬಗ್ಗೆ ಯಾವ ಭಯವೂ ಇಲ್ಲ. ನಾನು ಜೈಲಿಗೆ ಹೋಗುತ್ತೀನಿ ಎಂದು ಬಾಯಿಗ್‌ ಬಂದಂತೆ ಒದರುವ ಕಟೀಲ್‌ ಗೆ ಕಾನೂನಿನ ಅರಿವಿಲ್ಲ. ಆರ್‌,ಎಸ್‌,ಎಸ್‌ ನವರು ಬರೆದುಕೊಟ್ಟಿದ್ದಾರೆ, ಅದನ್ನು ಓದಿದ್ದಾರೆ.

ಪಿಎಸ್‌ಐ ಹಗರಣದ ಕುರಿತು ನ್ಯಾಯಾಲಯದ ಮೊರೆ ಹೋಗುವ ಬಗ್ಗೆ ನಮ್ಮ ಕಾನೂನು ಘಟಕದವರು ಪರಿಶೀಲನೆ ಮಾಡುತ್ತಿದ್ದಾರೆ, ಇದರ ಜೊತೆಗೆ ಈ ವಿಚಾರವನ್ನು ನಾವು ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ. ನಮಗೆ ಅಂತಿಮ ನಿರ್ಣಯ ಸಿಗುವುದ ಜನತಾ ನ್ಯಾಯಾಲಯದಲ್ಲೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು