ದಾವಣಗೆರೆ: ಅತ್ಯಾಚಾರ ಆರೋಪಿಯೊಬ್ಬ 40 ಅಡಿ ಎತ್ತರದ ಜೈಲಿನ ಗೋಡೆ ಹಾರಿ ಪರಾರಿಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕ ದಾವಣಗೆರೆ ಹೊರವಲಯದ ಕರೂರು ನಿವಾಸಿ ವಸಂತ ಎಂಬಾತನನ್ನು ಪೊಲೀಸರು ಶನಿವಾರ ಬಂಧಿಸಿ ದಾವಣಗೆರೆ ಉಪ ಕಾರಾಗೃಹದಲ್ಲಿ ಇರಿಸಿದ್ದರು. ಜೈಲಿಗೆ ಬಂದ ನಂತರ ವಸಂತ 40 ಅಡಿ ಎತ್ತರದಿಂದ ಗೋಡೆ ಹಾರಿ ಪರಾರಿಯಾಗಿದ್ದ. ಗೋಡೆ ಜಿಗಿದ ಬಳಿಕ ಆತನ ಕಾಲಿಗೆ ಗಾಯವಾಗಿದ್ದರೂ ರಸ್ತೆಯ ಕಡೆಗೆ ಕುಂಟುತ್ತಾ ಸಾಗಿ ಆಟೋದಲ್ಲಿ ಏರುತ್ತಿರುವ ದೃಶ್ಯ ವೈರಲ್ ಆಗಿತ್ತು. ಈ ಸಂಬಂಧ ಬಸವನಗರ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಬಳಿಕ ಆರೋಪಿಯನ್ನು ಹರಿಹರ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ಪತ್ತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಉಪ ಕಾರಾಗೃಹದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಘಟನೆ ಬಗ್ಗೆ ಜೈಲು ಅಧಿಕಾರಿಗಳು ಕೂಡ ವಿಚಾರಣೆ ನಡೆಸುತ್ತಿದ್ದಾರೆ.