News Karnataka Kannada
Tuesday, April 30 2024
ಬೆಂಗಳೂರು ನಗರ

ಜಗದೀಶ್ ಶೆಟ್ಟರ್ ಅವರನ್ನು ನಾಡಿನ ಜನತೆ ಕ್ಷಮಿಸುವುದಿಲ್ಲ- ಬಿ.ಎಸ್.ಯಡಿಯೂರಪ್ಪ

Yediyurappa vacates Cauvery's residence
Photo Credit : IANS

ಬೆಂಗಳೂರು: ಬಿಜೆಪಿ ತೊರೆದು ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ಸೇರಲು ಹೊರಟಿರುವುದು ಅಕ್ಷಮ್ಯ ಅಪರಾಧ. ಪಕ್ಷಕ್ಕೆ ಮಾಡಿದ ದ್ರೋಹ. ನಾಡಿನ ಜನತೆ ಅವರನ್ನು ಕ್ಷಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.

ಬೆಂಗಳೂರಿನ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರು ಜನಸಂಘದ ಕಾಲದಿಂದ ಬಿಜೆಪಿ ಕುಟುಂಬದಲ್ಲಿದ್ದವರು. ಪಕ್ಷದ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕ, ಸಚಿವ ಮತ್ತು ಮುಖ್ಯಮಂತ್ರಿ ಸ್ಥಾನಗಳನ್ನು ಬಿಜೆಪಿ ನೀಡಿತ್ತು. ಬಿ.ಬಿ.ಶಿವಪ್ಪ ಅವರನ್ನು ಎದುರು ಹಾಕಿಕೊಂಡು ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಾಯಿತು. ತಾವು ಮತ್ತು ಅನಂತಕುಮಾರ್ ಅವರ ಪರವಾಗಿ ನಿಂತು ಅವರನ್ನು ಮುಖ್ಯಮಂತ್ರಿಯನ್ನಾಗಿಯೂ ಮಾಡಲಾಯಿತು ಎಂದು ವಿವರಿಸಿದರು.

ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ದೇಶ ಮುಂದುವರೆಯುತ್ತಿರುವ ವೇಳೆ ಅವರಿಗೆ ಶಕ್ತಿ ತುಂಬುವುದು ನಮ್ಮ ಜವಾಬ್ದಾರಿಯಾಗಿದೆ. ವಿಶ್ವದಲ್ಲಿ ಭಾರತಕ್ಕೆ ಗೌರವ ತಂದು ಒಳ್ಳೆಯ ಸ್ಥಾನ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಅವರ ವಿಚಾರಧಾರೆಗೆ ತದ್ವಿರುದ್ಧದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.

ಸ್ಥಾನ ಸಿಗದಿದ್ದರೂ ದೇಶಕ್ಕಾಗಿ ಶ್ರಮಿಸಬೇಕಿದೆ. ಶೆಟ್ಟರ್ ಅವರನ್ನು ಗುರುತಿಸಿದ್ದು ಬಿಜೆಪಿ. ವ್ಯಕ್ತಿ ಎಷ್ಟೇ ದೊಡ್ಡವನಾದರೂ ಪಕ್ಷದ ಬೆಂಬಲವಿಲ್ಲದೆ ಎತ್ತರಕ್ಕೇರಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಪದವಿ ಅಲಂಕರಿಸಲು ಸಾಧ್ಯವಿಲ್ಲ. ಧಮೇಂದ್ರ ಪ್ರಧಾನ್, ಪ್ರಲ್ಹಾದ್ ಜೋಷಿ ಹುಬ್ಬಳ್ಳಿಯಲ್ಲಿ ಶೆಟ್ಟರ್ ಅವರ ಮನೆಗೆ ಭೇಟಿ ನೀಡಿ ಅವರ ಮನವೊಲಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಸಚಿವರಾಗಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ಹಠಮಾಡಿ ಶೆಟ್ಟರ್ ಕಾಂಗ್ರೆಸ್ ಪಕ್ಷ ಸೇರಲು ಹೊರಟಿರುವುದು ಅಕ್ಷಮ್ಯ ಅಪರಾಧ. ನಾಡಿನ ಜನತೆ ಅವರನ್ನು ಕ್ಷಮಿಸುವುದಿಲ್ಲ. ಇದು ಪಕ್ಷಕ್ಕೆ ಮಾಡಿರುವ ದ್ರೋಹ ಎಂದು ಹೇಳಿದರು.

ಲಕ್ಷಣ ಸವದಿ ಅವರು ಶಾಸಕರು, ಸಚಿವರಾಗಿದ್ದರು. ಸೋತಮೇಲೆ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಕೋರ್ ಕಮಿಟಿಯಲ್ಲಿ ಸ್ಥಾನವನ್ನೂ ನೀಡಲಾಯಿತು. ಅವರ ವಿಧಾನಪರಿಷತ್ ಸದಸ್ಯ ಅವಧಿ ಇನ್ನೂ 5 ವರ್ಷ ಇದ್ದರೂ ಪಕ್ಷವನ್ನು ತೊರೆದಿದ್ದಾರೆ. ಪಕ್ಷದಲ್ಲಿದ್ದಿದ್ದರೆ ಮುಂದೆಯೂ ಅವರನ್ನು ಸಚಿವರನ್ನಾಗಿ ಮಾಡುತ್ತಿದ್ದೆವು. ಬಿಜೆಪಿ ಅವರಿಗೆ ಅನ್ಯಾಯ ಮಾಡಿಲ್ಲ. ಬಿಜೆಪಿ ಅವರನ್ನು ಗುರುತಿಸಿದೆ. ಕಾಂಗ್ರೆಸ್ ಹೋಗುವ ಅವರ ಪ್ರಯತ್ನ ಜನತೆಗೆ, ಪಕ್ಷಕ್ಕೆ, ನಂಬಿಕೆ-ವಿಶ್ವಾಸಕ್ಕೆ ಮಾಡಿದ ದ್ರೋಹ ಎಂದು ತಿಳಿಸಿದರು.

ಅವರ ನಿರ್ಧಾರವನ್ನು ಜನತೆ ಕ್ಷಮಿಸುವುದಿಲ್ಲ. ಈ ಬೆಳವಣಿಗೆಗಳಿಂದ ಕಾರ್ಯಕರ್ತರು ವಿಚಲಿತರಾಗುವ ಅಗತ್ಯವಿಲ್ಲ. ಯಾವುದೇ ಸಮಸ್ಯೆಯೂ ಆಗುವುದಿಲ್ಲ. ಯಾವುದೇ ಅಭ್ಯರ್ಥಿ ಇದ್ದರೂ ಕಾರ್ಯಕರ್ತರು ಹಗಲಿರುಳು ಕೆಲಸ ಮಾಡಬೇಕು. ತಾವು ಆ ಭಾಗದಲ್ಲಿ ಪ್ರವಾಸ ಮಾಡಿ ಜನರಿಗೆ ವಾಸ್ತವ ಸಂಗತಿ ತಿಳಿಸುವುದಾಗಿ ಎಂದು ಹೇಳಿದರು.

ತಮಗೆ, ಶೆಟ್ಟರ್ ಅವರಿಗೆ, ಈಶ್ವರಪ್ಪ ಅವರಿಗೆ ಸೇರಿದಂತೆ ಎಲ್ಲರಿಗೂ ಪಕ್ಷ ಸ್ಥಾನಮಾನ ಅವಕಾಶ ನೀಡಿದೆ. ತಮ್ಮಂತ ಸಾಮಾನ್ಯ ಕಾರ್ಯಕರ್ತರು ರಾಜ್ಯದ ಮೂಲೆ ಮೂಲೆಯಲ್ಲಿ ವಿಶ್ವಾಸ ಗಳಿಸಲು ಬಿಜೆಪಿ ಕಾರಣ ಎಂಬುದನ್ನು ಎಂದಿಗೂ ಮರೆಯುವುದಿಲ್ಲ. ಸ್ವಇಚ್ಛೆಯಿಂದ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದೇನೆ. ಈಶ್ವರಪ್ಪ, ಅಂಗಾರ, ರಘುಪತಿ ಭಟ್ ಅವರು ಪಕ್ಷದ ತೀರ್ಮಾನವನ್ನು ಗೌರವಿಸಿದ್ದು, ಅವರನ್ನು ಅಭಿನಂದಿಸುತ್ತೇನೆ. ಶೆಟ್ಟರ್ ಮತ್ತು ಸವದಿ ನಾಲ್ಕೈದು ದಿನಗಳಲ್ಲಿ ತಮ್ಮ ತಪ್ಪಿನ ಅರಿವಾಗಿ ಪಕ್ಷಕ್ಕೆ ಬರುವುದಾದರೆ ವಾಪಸ್ ಸೇರಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಜಗತ್ತಿನ ಯಾವುದೇ ಶಕ್ತಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಎಲ್ಲ ಜಾತಿ-ವರ್ಗಗಳಿಗೆ ಅವಕಾಶ ನೀಡಲಾಗಿದೆ. ಹೊಸತನ, ಹೊಸಹುರುಪು, ಹೊಸ ಹುಮ್ಮಸ್ಸಿನೊಂದಿಗೆ ಬಿಜೆಪಿ ಸಾಗುತ್ತಿದೆ. ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಶೋಷಿತರಿಗೆ, ಬಡವರ ಕಲ್ಯಾಣಕ್ಕೆ ಏನೂ ಮಾಡಲಿಲ್ಲ. ಇವರನ್ನು ವೋಟ್ ಬ್ಯಾಂಕ್ ಆಗಿಯೇ ಪರಿಗಣಿಸುತ್ತಾ ಬಂದಿದೆ. ಆದರೆ, ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯ ಪಾಲಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಿದೆ ಎಂದು ನುಡಿದರು.

2018ರಲ್ಲಿ ಕಾಂಗ್ರೆಸ್ ವಿಷಯದಲ್ಲಿ ಧರ್ಮದ ಹೆಸರಿನಲ್ಲಿ ವೀರಶೈವ-ಲಿಂಗಾಯಿತರನ್ನು ಒಡೆಯಲು ಪ್ರಯತ್ನಿಸಿತು. ಆದರೆ, ಕಾಂಗ್ರೆಸ್ ನಾಯಕರ ಪ್ರಯತ್ನ ವಿಫಲವಾಯಿತು. ರಾಜ್ಯದ ಜನರು ಕಾಂಗ್ರೆಸ್ ಅನ್ನು ತಿರಸ್ಕರಿಸಿದರು. ಹಿಂದಿನ ಲೋಕಸಭೆ ಚುನಾವಣೆ ವೇಳೆ ಬಿಜೆಪಿ 25 ಸ್ಥಾನಗಳನ್ನು ಗೆಲ್ಲುವುದಾಗಿ ತಾವು ಹೇಳಿದ್ದು, ಅದರಂತೆ 25 ಸ್ಥಾನಗೆದ್ದಿದೆ. ಮುಂದಿನ ಚುನಾವಣೆಯಲ್ಲೂ 25ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ಈ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 125ರಿಂದ 130 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.

ಕರ್ನಾಟಕದ ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಕೇಂದ್ರ ಸಚಿವೆ ಮತ್ತು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಕು.ಶೋಭಾ ಕರಂದ್ಲಾಜೆ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು