ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನ ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಠೇವಣಿ ಹಣ ಸೇರಿದಂತೆ ಬ್ಯಾಂಕ್ ಸಂಬಂಧಿಸಿ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪ ಕೇಳಿಬಂದಿದ್ದು, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಯುಬಿ ವೆಂಕಟೇಶ್ ಒತ್ತಾಯಿಸಿದ್ದರು. ಅದರಂತೆ ಇದೀಗ ರಾಜ್ಯ ಸರ್ಕಾರ ಇಂದು (ಡಿಸೆಂಬರ್ 02) ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಅಧಿಕೃತ ಆದೇಶಿಸಿದೆ.
ಗುರು ರಾಘವೇಂದ್ರ ಬ್ಯಾಂಕಿನಲ್ಲಿ 1,500 ಕೋಟಿ ರೂ. ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, 38,000 ಗ್ರಾಹಕರನ್ನು ಸಂಕಷ್ಟಕ್ಕೆ ತಳ್ಳಿದೆ. ಗುರು ರಾಘವೇಂದ್ರ ಬ್ಯಾಂಕ್ ಒಂದೇ ದಿನದಲ್ಲಿ 90 ಖಾತೆಗಳಿಗೆ 60 ಕೋಟಿ ರೂ. ಮೌಲ್ಯದ ಸಾಲಗಳನ್ನು ಬಿಡುಗಡೆ ಮಾಡಿದೆ ಎಂದು ಲೆಕ್ಕ ಪರಿಶೋಧನೆಯ ವರದಿ ಹೇಳಿದೆ.