News Karnataka Kannada
Wednesday, May 01 2024
ಬೆಂಗಳೂರು ನಗರ

ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆಗೆ ಮಾನದಂಡವೇ ಇಲ್ಲ, ಕಾಂಗ್ರೆಸ್‌ ಸೇರ್ಪಡೆಗೊಂಡು ಸವದಿ ಹೇಳಿಕೆ

DCM DK Shivakumar assures solution to veterinary colleges' problem
Photo Credit : G Mohan

ಬೆಂಗಳೂರು:  ರಾಜ್ಯದಲ್ಲಿ 63 ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ವಲಸೆ ಹೋಗುತ್ತಿದ್ದಾರೆ. ಶೇ. 90 ರಷ್ಟು ನಾಯಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದು, ಕೆಲವರು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದು, ಮತ್ತೇ ಕೆಲವರು ಜೆಡಿಎಸ್ ಸೇರುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ನಗರದ ಕ್ವಿನ್ಸ್‌ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಡಿಸಿಎಂ ಲಕ್ಷ್ಣ ಸವದಿ ಅವರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡು ಮಾತನಾಡಿದರು.  ಇನ್ನು 5 ವರ್ಷಗಳ ಕಾಲ ವಿಧಾನ ಪರಿಷತ್ ಅಧಿಕಾರವಿದ್ದರೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಅವರು ಈ ಹಿಂದೆ ಸಹಕಾರ, ಸಾರಿಗೆ ಸಚಿವರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಅವರು ಚುನಾವಣೆಯಲ್ಲಿ ಸೋತಾಗಲೂ ಅವರನ್ನು ಉಪಮುಖ್ಯಮಂತ್ರಿ ಮಾಡಲಾಗಿತ್ತು. ಆಪರೇಷನ್ ಕಮಲ ಮಾಡಿದಾಗ ಮುಂದೆ ತಮಗೆ ಟಿಕೆಟ್ ನೀಡುವುದಾಗಿ ಬಿಜೆಪಿ ನಾಯಕರು ಇವರಿಗೆ ಮಾತು ಕೊಟ್ಟಿದ್ದರು. ಆದರೆ ನುಡಿದಂತೆ ನಡೆಯಲಿಲ್ಲ. ಹೀಗಾಗಿ ಬೇಸತ್ತು ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರು.

ಅವರು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಮ್ಮ ಜತೆ ಚರ್ಚೆ ಮಾಡಿ, ಯಾವುದೇ ಷರತ್ತು ಇಲ್ಲದೇ ಪಕ್ಷ ಸೇರುತ್ತಿದ್ದಾರೆ. ರಾಜ್ಯದ ಎಲ್ಲ ನಾಯಕರು ಕಾರ್ಯಕರ್ತರ ಪರವಾಗಿ ಸವದಿ ಅವರನ್ನು ತುಂಬು ಹೃದಯದಿಂದ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಇಂದು ಪಕ್ಷದ ಪ್ರಧಾನ ಕಾರ್ಯದರ್ಶಿ, ಶಾಸಕಾಂಗ ಪಕ್ಷದ ನಾಯಕರ ಜತೆ ಸಭೆ ಮಾಡಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಬೆಳಗಾವಿಯಲ್ಲಿ ಕಾರ್ಯಕ್ರಮ ಇರುವುದರಿಂದ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಅಂಬೇಡ್ಕರ್ ಅವರು ಜನಿಸಿದ ದಿನ ಈ ಶುಭ ದಿನ, ಶುಭ ಗಳಿಗೆಯಲ್ಲಿ ನಾವು ಸವದಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ಇವರ ಜತೆಗೆ ಮಾಜಿ ಸಚಿವ ಶಶಿಕಾಂತ ನಾಯ್ಕ್, ಸಂಘಟನೆಕಾರರಾದ ಶಂಕರ್ ಗೌಡರು ಪಕ್ಷ ಸೇರುತ್ತಿದ್ದಾರೆ ಎಂದರು.

ಈ ಸಂದರ್ಭ ಮಾತನಾಡಿದ ಮಾಜಿ ಡಿಸಿಎಂ ಲಕ್ಷ್ಣ ಸವದಿ, ಇಂದು ಕಾಂಗ್ರೆಸ್ ಸದಸ್ಯತ್ವ ಪಡೆದು, ಪಕ್ಷ ಸೇರುತ್ತಿದ್ದೇನೆ. ಇಂದು ಭಾರತ ದೇಶದ ಸಂವಿಧಾನ ಶಿಲ್ಪಿ, ಭಾರತ ರತ್ನ, ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನ. ದೇಶಕ್ಕೆ ಸಂವಿಧಾನ ಕೊಟ್ಟವರ ಜನ್ಮದಿನದಂದು ಕಾಂಗ್ರೆಸ್ ಸೇರುತ್ತಿದ್ದೇನೆ.  ಸುಮಾರು 25 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಅನೇಕ ಹುದ್ದೆ ನಿಭಾಯಿಸಿ, ಆ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುತ್ತಿರುವುದರ ಬಗ್ಗೆ ಕೆಲವರಿಗೆ ಪ್ರಶ್ನೆ ಇರಬಹುದು ಎಂದು ಹೇಳಿದರು.

ನಿನ್ನೆ ನನ್ನ ಕ್ಷೇತ್ರದ ಕಾರ್ಯಕರ್ತರು ಮಾರ್ಗದರ್ಶಕರ ಜತೆ ಚರ್ಚೆ ಮಾಡಿ ಬಿಜೆಪಿ ತೊರೆಯುತ್ತಿರುವುದರ ಬಗ್ಗೆ ವಿವರಿಸಿ, ನನ್ನ ಮುಂದಿನ ಹೆಜ್ಜೆ ಯಾವ ಕಡೆ ಎಂದು ಕೇಳಿದಾಗ 30 ಸಾವಿರಕ್ಕೂ ಹೆಚ್ಚು ಜನ ನಿಮಗೆ ಮುಂದೆ ಭವಿಷ್ಯ ಇದ್ದರೆ ಅದು ಕಾಂಗ್ರೆಸ್ ಪಕ್ಷ ಸೇರಬೇಕು ಎಂದು ಮಾರ್ಗದರ್ಶನ ನೀಡಿದ್ದಾರೆ. ಅವರ ಅಪ್ಪಣೆಯಂತೆ ಇಂದು ನಾನು ಬೆಂಗಳೂರಿಗೆ ಬಂದು ಸುರ್ಜೆವಾಲ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಜತೆ ಚರ್ಚೆ ಮಾಡಿ ಪಕ್ಷ ಸೇರುತ್ತಿದ್ದೇನೆ ಎಂದು ಹೇಳಿದರು.

ಬಿಜೆಪಿಯಲ್ಲಿ ಯಾವ ರೀತಿ ನಿಷ್ಠೆಯಿಂದ ಕೆಲಸ ಮಾಡಿದ್ದೆನೋ, ಅದೇ ರೀತಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಅತ್ಯಂತ ಶ್ರದ್ಧೆಯಿಂದ ಮಾಡಲು ಸಿದ್ಧನಿದ್ದೇನೆ. ಈ ನಾಯಕರೆಲ್ಲರೂ ನನ್ನನ್ನು ಪ್ರೀತಿ ವಿಶ್ವಾಸದಿಂದ ಬರಮಾಡಿಕೊಂಡಿದ್ದಾರೆ. ನಾನು ಬೇರೆ ಪಕ್ಷದಲ್ಲಿದ್ದಾಗಿನಿಂದ ಈ ನಾಯಕರುಗಳು ನನಗೆ ಸ್ನೇಹಿತರಾಗಿದ್ದರು. ವಿಚಾರಧಾರೆಗಳು ಮಾತ್ರ ಬೇರೆ ಇತ್ತು. ರಾಜಕಾರಣದ ಉದ್ದೇಶದಿಂದ ಟೀಕೆ ಟಿಪ್ಪಣಿ ಮಾಡಿದ್ದೆವು. ಇವೆಲ್ಲವನ್ನು ಮರೆತು ಮುಂದಿನ ದಿನಗಳಲ್ಲಿ ನನ್ನನ್ನು ಮನೆ ಮಗನಂತೆ ಭಾವಿಸುವುದಾಗಿ ತಿಳಿಸಿದ್ದು, ಅದಕ್ಕೆ ಧನ್ಯವಾದಗಳು ಎಂದರು.

ಸವದಿ ಸೋತಾಗ ಉಪಮುಖ್ಯಮಂತ್ರಿ ಮಾಡಿದ್ದರು, ಆದರೂ ಅವರು ಕಾಂಗ್ರೆಸ್ ಯಾಕೆ ಸೇರುತ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ನಾನು ಸೋತಾಗ ನಾನು ಕಾರ್ಯಕರ್ತನಾಗಿ ಸಂಘಟನೆ ಮಾಡುತ್ತಿದ್ದಾಗ ರಾಷ್ಟ್ರೀಯ ನಾಯಕರು ನನ್ನನ್ನು ಕರೆದು ರಾಜ್ಯದ ಸಚಿವ ಸ್ಥಾನದ ಜತೆಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದರು. ಆಪರೇಷನ್ ಕಮಲದ ನಂತರ ನಡೆದ ಉಪಚುನಾವಣೆ ಸಮಯದಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ಹಿರಿಯರು ನನಗೆ ಬೆಂಬಲ ನೀಡುವಂತೆ ಕೇಳಿದ್ದರು. ಜತೆಗೆ 2023ರಲ್ಲಿ ನನಗೆ ಟಿಕೆಟ್ ನೀಡುವುದಾಗಿ ಹೇಳಿದ್ದರು. ಬಿಜೆಪಿಯಲ್ಲಿ ನಾನು 13 ಉಪಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ್ದೆ. ನಾನು ಉಪಮುಖ್ಯಮಂತ್ರಿ, ಮಂತ್ರಿ ಸ್ಥಾನ ಕೇಳಿರಲಿಲ್ಲ. ಆದರೂ ಅವರೇ ನನಗೆ ಈ ಸ್ಥಾನ ನೀಡಿದರು. ಆದರೆ ಆ ಸ್ಥಾನದಿಂದ ಕೆಳಗಿಳಿಸುವಾಗ ಒಂದು ಮಾತು ಹೇಳಲಿಲ್ಲ ಎಂದರು.

ಒಬ್ಬ ವ್ಯಕ್ತಿಯನ್ನು ಉಪಮುಖ್ಯಮಂತ್ರಿ ಮಾಡಿ ಏಕಕಾಲಕ್ಕೆ ಅಲ್ಲಿಂದ ಕೆಳಗಿಸುವುದು ಅಪಮಾನವೋ, ಸನ್ಮಾನವೋ?  ಇತ್ತೀಚೆಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡುವ ಸಮಿತಿ ಸದಸ್ಯನಾಗಿದ್ದೆ. ಆಗ ನೀವು ಚರ್ಚೆ ಮಾಡಿದಂತೆ ನನಗೆ ಟಿಕೆಟ್ ನೀಡಬೇಕು ಎಂದು ಕೇಳಿದೆ. ನೀವು ಮಾನದಂಡಗಳ ಆಧಾರದ ಮೇಲೆ ಟಿಕೆಟ್ ನೀಡಬೇಕು ಎಂದು ಹೇಳಿದ್ದೆ. ಆದರೆ ಎಲ್ಲ ಮಾನದಂಡ ಗಾಳಿಗೆ ದೂರಿ ಟಿಕೆಟ್ ಹಂಚಿಕೆ ಮಾಡಿದ್ದು ನೋವು ತಂದಿದ್ದು, ಹೀಗಾಗಿ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ ಎಂದರು.

ನನಗೆ ಸಿದ್ದರಾಮಯ್ಯ ಅವರು ಜನತಾ ಪರಿವಾರದಿಂದ ಪರಿಚಯ. ಶಿವಕುಮಾರ್ ಅವರು ಸಹಕಾರಿ ಸಚಿವರಾಗಿದ್ದಾಗ ನಾನು ಯಾವುದೇ ಕೆಲಸ ತೆಗೆದುಕೊಂಡು ಹೋದರೂ ನನಗೆ ಕೆಲಸ ಮಾಡಿಕೊಡುತಿದ್ದರು. ಅವರ ಪ್ರೀತಿ ವಿಶ್ವಾಸ ನನ್ನನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ತಂದು ನಿಲ್ಲಿಸಿದೆ. ಇಂದಿನಿಂದ ಲಕ್ಷ್ಮಣ ಸವದಿಯನ್ನು ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಲ್ಲಿ ಬಳಸಿಕೊಳ್ಳಿ ಎಂದು ಕೇಳುತ್ತೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಹೆಚ್ಚು ಸ್ಥಾನ ಗೆದ್ದು ರಾಜ್ಯಕ್ಕೆ ಉತ್ತಮ ಆಡಳಿತ ನೀಡಲು ನನ್ನ ಅಳಿಲು ಸೇವೆ ಮಾಡಲು ಸಿದ್ಧನಿದ್ದೇನೆ ಎಂದರು.

ಸವದಿ ಎಲ್ಲಿ ಇರುತ್ತಾನೋ ನಿಷ್ಠೆ ಅಲ್ಲಿರುತ್ತದೆ. ನನಗೆ ಹೊಂದಾಣಿಕೆ ರಾಜಕೀಯ ಗೊತ್ತಿಲ್ಲ. ನಾನು ಇರುವ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನನ್ನು ಪಕ್ಷಕ್ಕೆ ಬರಮಾಡಿಕೊಂಡ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು