ಬೆಂಗಳೂರು: ದ್ವೇಷ, ಸೇಡಿನ ರಾಜಕಾರಣದ ಮೂಲಕ ಕಾಂಗ್ರೆಸ್ ಅಂತ್ಯಕಾಲ ಆರಂಭವಾಗಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ಅವರು ನಿನ್ನೆ (ಜ.2) ರಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ದೇಶದ ಕೋಟ್ಯಂತರ ಜನರ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈಡೇರಿಸಿದ್ದಾರೆ. ಒಂದೆಡೆ ರಾಮಮಂದಿರ ಉದ್ಘಾಟನೆಗೆ ದಿನ ನಿಗದಿಯಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ಸರ್ಕಾರವು ಸುಮಾರು 31 ವರ್ಷಗಳಷ್ಟು ಹಳೆಯ ಪ್ರಕರಣಗಳನ್ನು ತೆಗೆದು ಹಿಂದೂಗಳನ್ನು ಬಂಧಿಸುತ್ತಿದೆ. ಇದು ಹಿಂದೂ ವಿರೋಧಿ ಸರ್ಕಾರ ಎಂದು ಹೇಳಿದರು.
ಶ್ರೀರಾಮಚಂದ್ರನೇ ಕಾಲ್ಪನಿಕ ಎನ್ನುವ ಕಾಂಗ್ರೆಸ್ಸಿಗರು ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ದೇವಾಲಯದ ಬಗ್ಗೆ ಮಾತನಾಡುತ್ತಾರೆ. ಶ್ರೀರಾಮಚಂದ್ರನೇ ಕಾಲ್ಪನಿಕ ಎಂದಾದರೆ ಮಹರ್ಷಿ ವಾಲ್ಮೀಕಿ ಕುರಿತು ಮಾತನಾಡಲು ನಿಮಗೇನು ಹಕ್ಕಿದೆ ಎಂದು ಪ್ರಶ್ನಿಸಿದರು.