News Karnataka Kannada
Thursday, May 02 2024
ಬೆಂಗಳೂರು ನಗರ

ಬೆಂಗಳೂರು: ಇಂದಿನ ಮಹಿಳೆಯರಿಗೆ ಭದ್ರತೆಯ ಅಗತ್ಯವಿದೆ ಎಂದ ಶೋಭಾ ಕರಂದ್ಲಾಜೆ

Women of today need security, says Shobha Karandlaje
Photo Credit : By Author

ಬೆಂಗಳೂರು: ಇಂದಿನ ಮಹಿಳೆಯರಿಗೆ ಹೆಚ್ಚು ಸ್ವಾತಂತ್ರ್ಯ, ನ್ಯಾಯದ, ಭದ್ರತೆಯ ಅಗತ್ಯವಿದೆ ಎಂದು ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಶುಕ್ರವಾರ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಗೆ ಶಿಕ್ಷಣ, ಆರ್ಥಿಕ ಸ್ವಾವಲಂಬನೆ ದೊರೆತಾಗ ಹೆಚ್ಚು ಸದೃಢಳಾಗುತ್ತಾಳೆ ಎಂಬ ಕಲ್ಪನೆಯಿತ್ತು. ಆದರೆ ಇಂದು ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ನೋಡಿದರೆ, ನಮ್ಮನ್ನು ನಾವು ಕಾಪಾಡಿಕೊಳ್ಳಲು ಶಕ್ತರಾಗಿದ್ದೇವೆಯೆ? ದೌರ್ಜನ್ಯದಿಂದ ಮುಕ್ತರಾಗುವುದು ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ಪ್ರಧಾನಮಂತ್ರ್ರಿ ನರೇಂದ್ರ ಮೋದಿಯವರು ಹೆಣ್ಣು ಮಕ್ಕಳು ಆಚೆ ಹೋದಾಗ ಏಕೆ ಇಷ್ಟು ತಡವಾಗಿ ಬಂದೆ ಎಂದು ಪ್ರಶ್ನೆ ಮಾಡುವಂತೆ ಗಂಡು ಮಕ್ಕಳಿಗೂ ಪ್ರಶ್ನೆ ಮಾಡಬೇಕು. ಮಹಿಳೆಯರಿಗೆ ಇರುವ ಜವಾಬ್ದಾರಿಯನ್ನು ಗಂಡುಮಕ್ಕಳಿಗೂ ವಹಿಸಬೇಕು ಎಂದು ಹೇಳಿರುವಂತೆ, ಸಮಾಜ ಮಾಡಿದಾಗ ಹೆಣ್ಣು ಮಕ್ಕಳಿಗೆ ರಕ್ಷಣೆ ಸಿಗುತ್ತದೆ ಎಂದರು.

ಸರ್ಕಾರ ಹೆಚ್ಚು ನಿರ್ಧಾರ ತೆಗೆದುಕೊಳ್ಳಬೇಕು.ಆರು ತಿಂಗಳೊಳಗೆ ಪ್ರಕರಣಗಳು ಇತ್ಯರ್ಥ ಆಗುವ ರೀತಿಯಲ್ಲಿ ಆಯೋಗಕ್ಕೆ ಶಕ್ತಿ ಸಿಗಬೇಕು. ವಕೀಲರನ್ನು ನೇಮಿಸಬೇಕು, ಆಯೋಗಕ್ಕೆ ಬಲವಾದ ಶಕ್ತಿ ನೀಡಿ, ಹೆಣ್ಣು ಮಕ್ಕಳು ಸುರಕ್ಷಿತವಾಗಿ, ಗೌರವಯುತವಾಗಿ ಬಾಳುವಂತಾಗಬೇಕು ಎಂದರು.

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ರೇಖಾ ಶರ್ಮಾ ಮಾತನಾಡಿ ರಾಜ್ಯ ಸರ್ಕಾರವು ಮಹಿಳಾ ಆಯೋಗಕ್ಕೆ ಅತ್ಯುತ್ತಮ ಬೆಂಬಲ ನೀಡಿ, ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಪ್ರೋತ್ಸಾಹಿಸುತ್ತಿದೆ. ಮಹಿಳೆಯರು ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸಬಲರಾಬೇಕೆಂದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಆರ್. ಪ್ರಮೀಳಾ ನಾಯ್ಡು ಮಾತನಾಡಿ , ಆಯೋಗವು ಮಹಿಳೆಯರ ಏಳಿಗೆಗಾಗಿ, ರಕ್ಷಣೆಗಾಗಿ, ಹಕ್ಕುಗಳನ್ನು ದೊರಕಿಸಿ ಕೊಡಲು ದುಡಿಯುತ್ತಿದೆ. ಮಹಿಳೆಯರು ಗೌರವದಿಂದ ಬಾಳಬೇಕು ಎಂದರು.

ಕೋವಿಡ್ ಸಮಯದಲ್ಲಿ ಆಯೋಗವು 22 ಗರ್ಭಿಣಿ ಸ್ತ್ರೀಯರನ್ನು ಉಳಿಸಿದೆ. ಗಂಭೀರ ಪ್ರಕರಣಗಳಲ್ಲಿ ಆಯೋಗವು ಹೆಣ್ಣು ಮಕ್ಕಳ ಜೊತೆಯಿದ್ದು, ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿಗಳು ಆಯೋಗಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು, ಆಸಿಡ್ ಸಂತ್ರಸ್ತರಿಗೆ ನೀಡುತ್ತಿದ್ದ 3 ಸಾವಿರ ರೂ.ಗಳ ಮಾಸಾಶನವನ್ನು 10 ಸಾವಿರ ರೂಗಳಿಗೆ ಹೆಚ್ಚಿಸಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ಎನ್. ಮಂಜುಳಾ ಮಾತನಾಡಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಆಯೋಗದಿಂದ ಮಾತ್ರ ನಿಯಂತ್ರಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಬದಲಾವಣೆಯಾಗ ಬೇಕು. ಪ್ರತಿ ಮನೆಯಲ್ಲಿಯೂ ಹೆಣ್ಣು ಮಕ್ಕಳಿಗೆ ಗೌರವ ಕೊಡುವಂತೆ, ಗಂಡು ಮಕ್ಕಳಿಗೆ ಚಿಕ್ಕಂದಿನಿಂದಲೇ ಪೋಷಕರು ಅರಿವು ಮೂಡಿಸಬೇಕು. ಆಗ ಮಾತ್ರ ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ತಡೆಯಬಹುದು ಎಂದರು.

ಇದೇ ವೇಳೆ ಗಣಿ ಮತ್ತು ಭೂ ವಿಜ್ಞಾನ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರು 9 ಮಹಿಳಾ ಸಾಧಕರಿಗೆ ಪುರಸ್ಕಾರ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಸಂಸದರಾದ ಪ್ರತಾಪ ಸಿಂಹ, ಶಾಸಕಿ ರೂಪಾಲಿ ನಾಯ್ಕ್, 7 ರಾಜ್ಯಗಳಿಂದ ಆಗಮಿಸಿದ ಮಹಿಳಾ ಆಯೋಗದ ಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಮಹಿಳಾ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು