News Karnataka Kannada
Saturday, May 04 2024
ಬೆಂಗಳೂರು ನಗರ

ಬೆಂಗಳೂರು: ನಾವು ಯಾವುದೇ ಧರ್ಮ ನಂಬಿದ್ದರು, ಸಂವಿಧಾನ ಬಿಟ್ಟು ಬದುಕಲು ಸಾಧ್ಯವಿಲ್ಲ

DCM DK Shivakumar assures solution to veterinary colleges' problem
Photo Credit : G Mohan

ಬೆಂಗಳೂರು: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪ್ರತಿಕಾಂಗ ನಾಲ್ಕು ಆಧಾರ ಸ್ತಂಭಗಳಾಗಿವೆ. ಈ ನಾಲ್ಕು ಸ್ತಂಭಗಳ ಪೈಕಿ ಒಂದು ಕುಸಿದರೂ ಸಂವಿಧಾನ, ಪ್ರಜಾಪ್ರಭುತ್ವಕ್ಕೆ, ನಮ್ಮ ಬದುಕಿಗೆ ತೊಂದರೆಯಾಗುತ್ತದೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ನಾವು ಯಾವುದೇ ಧರ್ಮ ನಂಬಿದ್ದರು ಸಂವಿಧಾನ ಬಿಟ್ಟು ಬದುಕಲು ಸಾಧ್ಯವಿಲ್ಲ. ಈಗ ಈ ಸಂವಿಧಾನಕ್ಕೆ ಕುತ್ತು ಬಂದಿದ್ದು, ಅದನ್ನು ಉಳಿಸಿಕೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರು ಪ್ರೆಸ್ ಕ್ಲಬ್ ಮಾಧ್ಯಮ ಸಂವಾದದಲ್ಲಿ  ಮಾತನಾಡಿದ ಅವರು, ಬದುಕು ಬೇಕೋ ಭಾವನೆಗಳು ಬೇಕೋ ಎಂಬ ವಿಚಾರ ಈಗ ಚರ್ಚೆ ಆಗುತ್ತಿದೆ. ನಾವು ಬದುಕಿನ ಬಗ್ಗೆ ಹೋರಾಟ ಮಾಡಿದರೆ, ನಮ್ಮ ವಿರೋಧ ಪಕ್ಷದವರು ಭಾವನೆ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ನಾನು ವಿರೋಧ ಪಕ್ಷದ ರಾಜ್ಯದ ಅಧ್ಯಕ್ಷನಾಗಿ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಜವಾಬ್ದಾರಿಗಳು ಹೆಚ್ಚಾಗಿರುವ ಕಾರಣ ನಾನು ಅಧಿವೇಶನಗಳಲ್ಲಿ ಹೆಚ್ಚಾಗಿ ಮಾತನಾಡಲು ಆಗುತ್ತಿಲ್ಲ. ಅಧಿಕಾರದಲ್ಲಿರುವ ಸರ್ಕಾರದ ವಿರುದ್ಧ ಮಾತನಾಡಲು ಹುಡುಕಲು ನಾನು ಎಲ್ಲಿಗೂ ಹೋಗಬೇಕಿಲ್ಲ. ಮಾಧ್ಯಮಗಳು ಅದರಲ್ಲೂ ಮುದ್ರಣ ಮಾಧ್ಯಮ ಕಾಂಗ್ರೆಸ್ ಗಿಂತ ಹೆಚ್ಚಾಗಿ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದೆ. ಸರ್ಕಾರ, ಸರ್ಕಾರಿ ಅಧಿಕಾರಿಗಳ ತಪ್ಪು, ಅಕ್ರಮ, ಭ್ರಷ್ಟಾಚಾರಗಳನ್ನು ತಮ್ಮದೇ ಆದ ತನಿಖೆ ಮೂಲಕ ಬಹಿರಂಗಪಡಿಸುತ್ತಿದೆ.

ಕೋವಿಡ್ ಸಮಯದಲ್ಲಿ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಹಾಗೂ ಎಲ್ಲ ನಾಯಕರು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರು. ಚುನಾವಣೆಯಲ್ಲಿ ನಾವು ಸೋತ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈ ಸಮಯದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟು ಇಡೀ ಪಕ್ಷ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಒಗ್ಗಟ್ಟಿನಿಂದ ನೀಡಿದ್ದಾರೆ. ಈ ಜವಾಬ್ದಾರಿ ತೆಗೆದುಕೊಂಡ ನಂತರ ಸರಿಯಾಗಿ ಒಂದು ದಿನವೂ ನಿದ್ದೆ ಮಾಡದೇ, ಬೀದಿಗಿಳಿದು ಹೋರಾಟ ಮಾಡಿದ್ದೇವೆ. ನಾನು ಬಹಳ ಸಾಧನೆ ಮಾಡಿದ್ದೇನೆ ಎಂದು ಹೇಳುವುದಿಲ್ಲ ನನಗಿದ್ದ ವಿಚಾರ, ಗುರಿ, ಶಕ್ತಿಯಲ್ಲಿ ಕೇವಲ 25-30ರಷ್ಟು ಕೆಲಸ ಮಾಡಿದ್ದೇನೆ ಎಂದು ಹೇಳುತ್ತೇನೆ.

ಇಷ್ಟೆಲ್ಲಾ ಆದರೂ ಮಾಧ್ಯಮಗಳು ಮುಖ್ಯಮಂತ್ರಿ ವಿಚಾರಕ್ಕೆ ಕಿತ್ತಾಟದ ಬಗ್ಗೆ ಹೆಚ್ಚು ಚರ್ಚೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ ವಿಚಾರವಾಗಿ ನಮ್ಮಲ್ಲಿ ಕಿತ್ತಾಟದ ಬಗ್ಗೆ ಒಂದು ಘಟನೆಯೂ ಸಿಗದಿದ್ದರೂ ಈ ವಿಚಾರ ಚರ್ಚೆಗೆ ಅಕಾಶ ಮಾಡಿಕೊಟ್ಟಿದ್ದೀರಿ. ಆಡಳಿತ ಪಕ್ಷದಲ್ಲಿನ ಆಂತರಿಕ ಭಿನ್ನಮತ ಹೆಚ್ಚು ಚರ್ಚೆ ಆಗುತ್ತಿಲ್ಲ. ಈ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಬಿಜೆಪಿಯವರು ತಮ್ಮ ಮುಖ್ಯಮಂತ್ರಿ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಮುಖ್ಯಮಂತ್ರಿ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಅಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ.

ಇಂದು ಏನೇ ಚರ್ಚೆ ಮಾಡಿದರೂ ಒಂದು ಪ್ರಶ್ನೆ ಉಳಿಯುತ್ತದೆ. ಅದು ಪ್ರಜಾಪ್ರಭುತ್ವ ಉಳಿಯಬೇಕು. ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ಪ್ರಜಾಪ್ರಭುತ್ವ ಉಳಿಯಬೇಕು. ಸ್ಥಳೀಯ ಮಟ್ಟದಲ್ಲಿ ನಾಯಕರನ್ನು ತಯಾರು ಮಾಡುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ರಾಜೀವ್ ಗಾಂಧಿ ಅವರು ಅವರು ತಂದರು. ಇಡೀ ದೇಶ ಹಾಗೂ ಸಂವಿಧಾನ ಅದಕ್ಕೆ ಒಪ್ಪಿದೆ. ಆದರೆ ಬಿಜೆಪಿ ಡಬಲ್ ಇಂಜಿನ್, ಜನಪರ, ಜನಹಿತ, ಭಾವನೆ ಹಂಚಿಕೊಳ್ಳುವ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿ ಜನರ ಮುಂದೆ ಹೋಗಲು ಯಾಕೆ ಹೆದರುತ್ತಿದ್ದಾರೆ ಎಂಬುದು ಪ್ರಮುಖ ಪ್ರಶ್ನೆ.

ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಪಾಲಿಕೆ ಚುನಾವಣೆ ಮಾಡಲು ಸರ್ಕಾರಕ್ಕೆ ಭಯ ಯಾಕೆ? ಅಂದರೆ ರಾಜ್ಯದ ಮತದಾರರ ಮೇಲೆ ನಿಮಗೆ ನಂಬಿಕೆ ಇಲ್ಲವೇ? ಇಚ್ಚೀತೆಗೆ ನಡೆದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಚುನಾವಣೆ ಪೈಕಿ 11 ಕಾಂಗ್ರೆಸ್, 11 ಬಿಜೆಪಿ ಗೆಲ್ಲುತ್ತದೆ. ಪದವಿಧರರು ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮಂಡ್ಯ ಹಾಗೂ ಬೆಳಗಾವಿ ಮತದಾರರು ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಇನ್ನು ಉಪಚುನಾವಣೆಯಲ್ಲಿ ಅವರೊಂದು ನಾವೊಂದು ಗೆಲ್ಲುತ್ತಿದ್ದೇವೆ. ಉಪಚುನಾವಣೆಯಲ್ಲಿ ಅಧಿಕಾರದಲ್ಲಿರುವವರಿಗೆ ಶಕ್ತಿ ಹೆಚ್ಚು, ಅದರೂ ನಾವು ಸಮಾನ ಸಾಧನೆ ಮಾಡಿದ್ದೇವೆ.

ಜಿಲ್ಲಾ ಹಾಗೂ ಪಂಚಾಯ್ತಿ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯುತ್ತಿದ್ದು, ಈ ಚುನಾವಣೆ ಯಾಕೆ ನಡೆಸುತ್ತಿಲ್ಲ ಎಂದು ನ್ಯಾಯಾಲಯ ಮೊರೆ ಹೋಗಿದ್ದೆವು. ಈಗ ನ್ಯಾಯಾಲಯ ಸರ್ಕಾರಕ್ಕೆ 5 ಲಕ್ಷ ದಂಡ ವಿಧಿಸಿದೆ. ಹೀಗಾಗಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು.

ಕಳೆದ ಮೂರು ವರ್ಷಗಳಿಂದ ಈ ಸರ್ಕಾರಕ್ಕೆ ಜನರ ಹೊಟ್ಟೆ ತುಂಬಿಸಲು, ಬದುಕು ಕಟ್ಟಿಕೊಳ್ಳಲು ಒಂದು ಕಾರ್ಯಕ್ರಮ ನೀಡಲು ಸಾಧ್ಯವಾಗಿಲ್ಲ. ಇವರ ಯೋಜನೆ ಕೇವಲ ಕಾಗದದ ಮೇಲೆ ಮಾತ್ರ ಇದೆಯೇ ಹೊರತು ಜನರನ್ನು ತಲುಪಿಲ್ಲ. ದೇಶದಲ್ಲೇ ಅತ್ಯಂತ ಉತ್ತಮ ಆಡಳಿತ ರಾಜ್ಯ ಕರ್ನಾಟಕವಾಗಿತ್ತು. ಕಳೆದ ಮೂರು ವರ್ಷಗಳಿಂದ ಈ ಸರ್ಕಾರಕ್ಕೆ ಉದ್ಯೋಗ ಸೃಷ್ಟಿಸಲು ಸಾಧ್ಯವಾಗಿಲ್ಲ. ಈ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ನಮ್ಮ ಕಾಲಾವಧಿಯಲ್ಲಿ ಸಾಕಷ್ಟು ನೇಮಕಾತಿ ಮಾಡಿದ್ದೇವೆ. ನಮ್ಮ ಕಾಲದಲ್ಲಿ ಒಂದು ನೇಮಕಾತಿ ಅಕ್ರಮ ನಡೆದಿಲ್ಲ. ಅಕ್ರಮ ನಡೆದಿರುವುದನ್ನು ಸಾಬೀತುಮಾಡಲು ನಿಮ್ಮಿಂದ ಸಾಧ್ಯವಾಗಿಲ್ಲ. ಆದರೆ ನಿಮ್ಮ ಅಧಿಕಾರದಲ್ಲಿಪ್ರತಿ ಇಲಾಖೆಯಲ್ಲಿ ಹುದ್ದೆ ನೇಮಕಾತಿ ಮಾಡುವಾಗ ನೇಮಕಾತಿ ಅಕ್ರಮ ನಡೆದಿದ್ದು, ಎಡಿಜಿಪಿ ಮಟ್ಟದ ಅಧಿಕಾರಿಗಳಿಂದ ಎಳ್ಲ ಹಂತದ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿ ಬಂಧನವಾಗಿದ್ದಾರೆ. ಉತ್ತರ ಪತ್ರಿಕೆ ತಿದ್ದಿ ಅಖ್ರಮ ಮಾಡಿರುವುದು ಐಟಿ ಕ್ಯಾಪಿಟಲ್ ನಲ್ಲಿ ನಡೆದಿದೆ. ಇದಕ್ಕಿಂತ ದೊಡ್ಡ ಅಪಮಾನ ಬೇರೊಂದಿಲ್ಲ.

ಇನ್ನು ಲಂಚ ಹಾಗೂ ಮಂಚದ ವಿಚಾರದಲ್ಲಿ ಇಬ್ಬರು ಸಚಿವರ ತಲೆತಂಡವಾಗಿದೆ. ಇವರು ರಾಜೀನಾಮೆ ನೀಡುವ ಮುನ್ನ ಅವರಿಗೆ ಕ್ಲೀನ್ ಚಿಟ್ ನೀಡುತ್ತಾರೆ. ಅವರ ಬೆಂಬಲವಾಗಿ ನೀಡುವಾಗ ಅಧಿಕಾರಿಗಳಿಗೆ ಬಿ ರಿಪೋರ್ಟ್ ನೀಡುವಂತೆ ಸೂಚಿಸುತ್ತಾರೆ. ಅವರ ಸಾಧನೆಗೆ ನಾವು ಅಭಿನಂದನೆ ಸಲ್ಲಿಸಬೇಕು.

ಇನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಮಂತ್ರಿಗಳಿಗೆ ದೂರು ನೀಡಿದರು, ಕೆಲವರು ಭ್ರಷ್ಟಾಚಾರ ಕಿರುಕುಳ ತಾಳಲಾರದೆ ಪ್ರಾಣ ಬಿಟ್ಟಿದ್ದಾರೆ. ಆಮೂಲಕ ದೇಶದಲ್ಲೇ ಭ್ರಷ್ಟಾಚಾರದ ರಾಜಧಾನಿ ಎಂಬ ಕುಖ್ಯಾತಿ ರಾಜ್ಯಕ್ಕೆ ನೀಡಿದ್ದಾರೆ. ಕೆಂಪಣ್ಣ ಅವರ ಆರೋಪ ಸುಳ್ಳಾಗಿದ್ದರೆ ಅವರ ವಿರುದ್ಧ ತನಿಖೆ ಯಾಕಿಲ್ಲ? ಗುತ್ತಿಗೆದಾರರು ದಾಖಲೆ ನೀಡುತ್ತೇವೆ ಎಂದು ಹೇಳಿದ್ದರೂ ಯಾವ ಅಧಿಕಾರಿ ವಿರುದ್ಧ ತನಿಖೆ ಮಾಡಲಿಲ್ಲ. ಇನ್ನು ಭ್ರಷ್ಟಾಚಾರ ವಿಚಾರದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಶಾಸಕರಿಗೆ ನೋಟೀಸ್ ಕೊಟ್ಟರು. ಇದಕ್ಕಿಂತ ದೊಡ್ಡ ಅಪಮಾನ ಬೇಕೆ?

ಇನ್ನು ಕೋವಿಡ್ ಸಮಯದಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ 36 ಕುಟುಂಬಕ್ಕೆ ಸಾಂತ್ವನ ಹೇಳಲಾಗಲಿಲ್ಲ. ಮಾನವೀಯತೆಯಿಂದ ಒಬ್ಬ ಮಂತ್ರಿ, ಶಾಸಕ, ಅಧಿಕಾರಿಗಳು ಹೋಗಿ ಪರಿಹಾರ ನೀಡಲಿಲ್ಲ. ನ್ಯಾಯಾಲಯ ಮಧ್ಯಪ್ರವೇಶ ಮಾಡಲಾಯಿತು. ವಿರೋಧ ಪಕ್ಷವಾಗಿ ನಾವು ಮನೆ ಮನೆಗೆ ಹೋಗಿ, ಪ್ರತಿ ಕುಟುಂಬಕ್ಕೆ ತಲಾ 1 ಲಕ್ಷ ಆರ್ಥಿಕ ನೆರವು ನೀಡಬೇಕಾಯಿತು. ಕೋವಿಡ್ ನಿಂದ ಸತ್ತವರಿಗೆ ಘೋಷಣೆ ಮಾಡಿದ ಪರಿಹಾರವನ್ನು ನೀಡಲು ಸಾಧ್ಯವಾಗಲಿಲ್ಲ. ಕೋವಿಡ್ ನಿಂದ ಸಂಕಷ್ಟ ಅನುಭವಿಸಿದವರಿಗೆ ಕೇಂದ್ರ ಸರ್ಕಾರದ ಮೂಲಕ 20 ಲಕ್ಷ ಕೋಟಿ ರಾಜ್ಯ ಸರ್ಕಾರದಿಂದ 1800 ಕೋಟಿ ಪ್ಯಾಕೇಜ್ ಘೋ,ಣೆ ಮಾಡಿದಿರಿ. ಇದರಿಂದ ಯಾರಿಗೆ ಎಷ್ಟು ಸಹಾಯ ಮಾಡಲಾಯಿತು ಎಂದು ಸರ್ಕಾರ ಪಟ್ಟಿ ನೀಡಿ ಎಂದು ಕೇಳಿದರೂ ಕೊಡಲಿಲ್ಲ. ಇದೊಂದು ಸರ್ಕಾರವೇ? ಇದು ಡಬಲ್ ಇಂಜಿನ್ ಸರ್ಕಾರವೇ?

ಈ ಎಲ್ಲ ಹಗರಣದ ನಂತರ ಈಗ ಮತದಾರರ ಮಾಹಿತಿ ಕಳವು ಮಾಡಲಾಗಿದೆ. ಮನೆಗಳಿಲ್ಲದಿದ್ದರೂ ಮನೆ ಇದೆ ಎಂದು ಮತದಾರರನ್ನು ಸೇರಿಸಿದ್ದಾರೆ. ಕಾಂಗ್ರೆಸ್ ಮತದಾರರನ್ನು ತೆಗೆದು ಹಾಕಿದ್ದಾರೆ. 8.7 ಸಾವಿರ ಬಿಎಲ್ಓ ಸ್ಥಾನವನ್ನು ಖಾಸಗಿಯವರಿಗೆ ನೀಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಈ ರೀತಿ ಚುನಾವಣೆ ಗೆಲ್ಲಬೇಕಾ? ಬಂಧಿತ ಅಧಿಕಾರಿಗಳು ಶಾಸಕರು ಹಾಗೂ ಮಂತ್ರಿಗಳ ಆದೇಶದಂತೆ ಕೆಲಸ ಮಾಡಿದ್ದಾರೆ. ಅವರ ಮೇಲೆ ಯಾರೂ ಪ್ರಕರಣ ದಾಖಲಿಸುತ್ತಿಲ್ಲ. ಇಂತಹ ಅಕ್ರಮ ನಡೆಯುತ್ತಿದೆ. ಇನ್ನು ಸಿಎಸ್ ಸಿ ಹೆಸರಲ್ಲಿ ಕೆಲವು ರೈತರ ಖಾತೆಗೆ ಕೇಂದ್ರ ಸರ್ಕಾರದ ಹಣ ಹಾಕಿ ಅವರಿಂದ ಹಣ ಪಡೆಯಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳು ಮೃಧು ಧೋರಣೆ ತೋರುತ್ತಿವೆ. ಈ ರಾಜ್ಯದಲ್ಲಿ ಏನಾಗುತ್ತಿದೆ? ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಹರಿದಿದೆ ಎನ್ನುತ್ತೀರಿ, ಆದರೆ ತನಿಖೆ ಮಾಡಿ ಶಿಕ್ಷೆ ನೀಡಿ. ನಿಮ್ಮನ್ನು ತಡೆಯುತ್ತಿರುವವರು ಯಾರು?

ಜನರ ಗಮನ ಬೇರೆಡೆ ಸೆಳೆಯಲು ಕುಕ್ಕರ್ ಬ್ಲಾಸ್ಟ್ ಪ್ರಕರಣ ಬಳಕೆ

ಮತ ಮಾಹಿತಿ ಕಳವು ಅಕ್ರಮ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರ ತಂದರು.ಎಲ್ಲಿಂದ ಭಯೋತ್ಪಾದಕರು ಬಂದು ಬ್ಲಾಸ್ಟ್ ಮಾಡಿದರು? ಡಿಜಿ ಆತುರದಲ್ಲಿ ಭಯೋತ್ಪಾದಕ ಕೃತ್ಯ ಎಂದರು. ಕೇವಲ ವಿಚಾರ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ.

ರಾಜ್ಯಕ್ಕೆ 10 ಲಕ್ಷ ಕೋಟಿ ಬಂಡವಾಳ ಬರುತ್ತಿದೆ ಎಂದು ಹೇಳಿದ್ದಾರೆ. ಇದರಲ್ಲಿ ಶಿವಮೊಗ್ಗಕ್ಕೆ, ಕರಾವಳಿ, ಉಡುಪಿ ಜಿಲ್ಲೆಗಳಿಗೆ ಯಾಕೆ ಬಂಡವಾಳ ಹೋಗುತ್ತಿಲ್ಲ? ಯಾವ ಜಿಲ್ಲೆಯಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗಿದೆ? ಎಂದು ಸರ್ಕಾರ ಪಟ್ಟಿ ಬಿಡುಗಡೆ ಮಾಡಲಿ.

ಸರ್ಕಾರ ಕೇವಲ ಭಾವನೆ ಮೂಲಕ ದೇಶ ಕಟ್ಟಲು ರಾಜ್ಯ ಕಟ್ಟಲು ಹೊರಟಿದ್ದಾರೆ. ಜನರ ಹೊಟ್ಟೆಪಾಡು ಮರೆತಿದ್ದಾರೆ. ಸರ್ಕಾರ ಕೊನೆ ದಿನಗಳನ್ನು ತಲುಪಿದೆ. ಜನ ಈ ಸರ್ಕಾರ ಕಿತ್ತೊಗೆಯಲು ತೀರ್ಮಾನಿಸಿದ್ದಾರೆ. ಮಾಧ್ಯಮಗಳು ನ್ಯಾಯ ನೀಡುವ ಸ್ಥಾನದಲ್ಲಿದೆ. ನ್ಯಾಯ ನೀಡುವ ಸ್ಥಾನದಿಂದ ಅನ್ಯಾಯ ಬರಬಾರದು. ರಾಜ್ಯದ ಗೌರವ, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಬೇಕು ಎಂದು ಪಕ್ಷದ ಅಧ್ಯಕ್ಷದ ಅಧ್ಯಕ್ಷನಾಗಿ ಮನವಿ ಮಾಡಿಕೊಳ್ಳುತ್ತೇನೆ.’

ಪ್ರಶ್ನೋತ್ತರ:

ಕುಕ್ಕರ್ ಬ್ಲಾಸ್ಟ್ ಪೂರ್ವನಿಯೋಜಿತ ಎಂದು ಹೇಗೆ ಹೇಳುತ್ತೀರಿ ಎಂದು ಕೇಳಿದಾಗ ‘ಕುಕ್ಕರ್ ಬ್ಲಾಸ್ಟ್ ಪ್ರಕರಣದ ತನಿಖೆಗೂ ಮುನ್ನವೇ ಅಧಿಕಾರಿಗಳು ಇದನ್ನು ಭಯೋತ್ಪಾದಕ ಕೃತ್ಯ ಎಂದು ಹೇಗೆ ಘೋಷಿಸಿದರು? ಇದರ ಹಿಂದೆ ಯಾವ ಉಗ್ರನಿದ್ದಾನೆ? ಯಾವ ಸಂಘಟನೆ ಇದೆ? ಯಾರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ. ತನಿಖೆ ಏನಾಯ್ತು? ಮತ ಮಾಹಿತಿ ಕಳವು ಪ್ರಕರಣವನ್ನು ಮುಚ್ಚಿಹಾಕಲು ಈ ಷಡ್ಯಂತ್ರ ರೂಪಿಸಿದ್ದಾರೆ. ಮತದಾನದ ಕಳವು ಇಡೀ ದೇಶದಲ್ಲಿ ಆಗಿರಲಿಲ್ಲ. ಈಗ ಇದನ್ನು ಮಾಡಿ ರಾಜ್ಯಕ್ಕೆ ಕಪ್ಪು ಚುಕ್ಕೆ ತಂದಿದ್ದಾರೆ’ ಎಂದು ಪ್ರಶ್ನಿಸಿದರು.

ಈ ಬಾರಿ ನಿಮ್ಮ ಸರ್ಕಾರ ಬಂದರೆ ಮತ್ತೆ ಆಪರೇಷನ್ ಕಮಲ ನಡೆಯದಂತೆ ಹೇಗೆ ತಡೆಯುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ‘ನಮ್ಮ ಸಮೀಕ್ಷೆಯಲ್ಲಿ ಕಾಂಗ್ರೆಸ್ 136 ಸೀಟು, ಬಿಜೆಪಿ 66 ಸ್ಥಾನ ಪಡೆಯಲಿದೆ. 100 ಕ್ಷೇತ್ರಗಳಲ್ಲಿ ಒಂದು ಅರ್ಜಿಗಳಿದ್ದು, ನಮ್ಮಲ್ಲಿ ಐದಾರು ಚುನಾವಣೆ ಸೋತಿರುವ ಕ್ಷೇತ್ರದಲ್ಲೂ 10 ಅರ್ಜಿಗಳು ಬಂದಿವೆ. ಇದರ ಅರ್ಥ ಏನು? ಬಿಜೆಪಿಯವರು ಕಾಂಗ್ರೆಸ್ ನಲ್ಲಿ ಅಭಅಯರ್ಥಿಗಳಿಲ್ಲ ಎನ್ನುತ್ತಿದ್ದರು. ಅಸೋಕ್ ಅವರು 10 ಜನ ಶಆಸಕರು ಬರುತ್ತಾರೆ ಎಂದು ಹೇಳಿದ್ದಾರೆ. ಅವರು ತಡಯಾಕೆ ಮಾಡುತ್ತಿದ್ದಾರೆ? ಅವರಿಗೆ ಮಾತ್ರ ಸಂಕ್ರಾಂತಿ ಬರುವುದಿಲ್ಲ, ನಮಗೂ ಸಂಕ್ರಾಂತಿ ಬರುತ್ತದೆ’ ಎಂದು ತಿಳಿಸಿದರು.

ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಗೊಂದಲ ಯಾವ ಸಂದೇಶ ಸಾರುತ್ತದೆ ಎಂದು ಕೇಳಿದಾಗ, ‘ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ತಮ್ಮನಾಯಕರ ಪರವಾಗಿ ಭಾವನೆ, ಅಭಿಮಾನ ವ್ಯಕ್ತಪಡಿಸುತ್ತಾರೆ. ಆದರೆ ನಾನು ಸಿದ್ದರಾಮಯ್ಯ ಅವರು ಒಂದು ಸಣ್ಣ ಸನ್ನಿವೇಶದಲ್ಲಿ ಕಿತ್ತಾಡಿರುವುದನ್ನು ಹೇಳಿ ನೋಡೋಣ. ಬಿಜೆಪಿಯಲ್ಲಿನ ಕಿತ್ತಾಟದ ಬಗ್ಗೆ ಪಟ್ಟಿ ನೀಡಲೇ?’ ಎಂದು ಕೇಳಿದರು.

ದೆಹಲಿ ನಾಯಕರು ನಿಮ್ಮನ್ನು ಕೂರಿಸಿ ಮಾತನಾಡಿಸಿದ್ದು ಸುಳ್ಳಾ ಎಂಬ ಪ್ರಶ್ನೆಗೆ, ‘ನಮ್ಮನ್ನು ಯಾರೂ ಕೂರಿಸಿ ಮಾತನಾಡಿಲ್ಲ. ನನ್ನನ್ನು, ಶಾಸಕಾಂಗ ಪಕ್ಷದ ನಾಯಕರು ಹಾಗೂ ಇತರ ನಾಯಕರನ್ನು ಕರೆಸಿ ಚುನಾವಣೆ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ನಾನು ರಾಜ್ಯದ ಅಧ್ಯಕ್ಷನಾಗಿ ಸಮೀಕ್ಷೆ ಮಾಡಿಸಿದ್ದೆ, ರಾಷ್ಟ್ರೀಯ ನಾಯಕರೂ ಸಮೀಕ್ಷೆ ಮಾಡಿಸಿದ್ದಾರೆ. ಅದಕ್ಕಾಗಿ ಒಂದು ವಿಭಾಗವನ್ನೇ ಮಾಡಿದ್ದಾರೆ. ಕೆಲವು ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಕುರಿತು ಕೆಲವು ಮಾರ್ಗದರ್ಶನ ನೀಡಿದ್ದಾರೆ. ನಾವು ಒಟ್ಟಾಗಿ ಇರುತ್ತೇವೆ, ನಮ್ಮಲ್ಲಿ ವ್ಯಕ್ತಿಪೂಜೆ ಇಲ್ಲ, ಪಕ್ಷ ಪೂಜೆ ಎಂದು ಹೇಳಿ ಅಧಿಕಾರ ಪಡೆದೆ. ಇದು ಅಚಲ. ಇದಕ್ಕೆ ನಾವೆಲ್ಲರೂ ಒಪ್ಪಿದ್ದೇವೆ’ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿಯವರು ನಿಮ್ಮನ್ನು ಕೋತ್ವಾಲ್ ರಾಮಚಂದ್ರನ ಶಿಷ್ಯ ಎಂದು ಕರೆಯುವ ಬಗ್ಗೆ ಕೇಳಿದಾಗ, ‘ಬಿಜೆಪಿ ರೌಡಿ ಮೋರ್ಚಾ ಆರಂಭಿಸಿದ್ದಾರೆ. ಅದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಕೊತ್ವಾಲ್ ರಾಮಚಂದ್ರ ಶಿಷ್ಯ ಎಂಬುದಕ್ಕೆ ಏನು ದಾಖಲೆ ಇದೆ? ನಾನು 80ರಿಂದ ಸಕ್ರಿಯ ರಾಜಕಾರಣದಲ್ಲಿದ್ದೇನೆ. ವಿದ್ಯಾರ್ಥಿ ಕಾಲದಿಂದಲೂ ರಾಜಕೀಯದಲ್ಲಿ ಇದ್ದೇನೆ. 85ರಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸಿದ್ದೆ. ನನಗೆ ನನ್ನದೇ ಆದ ಇತಿಹಾಸವಿದೆ. ವಿದ್ಯಾರ್ಥಿ ನಾಯಕತ್ವದ ಸಂದರ್ಭದಲ್ಲಿ ಹಲವು ನಾಯಕರು ಬಂದು ಹೋಗಿದ್ದಾರೆ’ ಎಂದು ಹೇಳಿದರು.

ಗುಜರಾತ್ ಚುನಾವಣೆ ಮಾದರಿಯಲ್ಲಿ ಬೇರೆ ಪಕ್ಷಗಳಿಂದ ಕಾಂಗ್ರೆಸ್ ಮತವಿಭಜನೆ ರೀತಿ ಕರ್ನಾಟಕದಲ್ಲೂ ಆಗುತ್ತದೆಯೇ ಎಂಬ ಪ್ರಶ್ನೆಗೆ, ‘ರಾಜ್ಯದ ಮತದಾರರು ಪ್ರಜ್ಞಾವಂತ ಮತದಾರರು. ಬದುಕು ಹಾಗೂ ಭಾವನೆ ವಿಚಾರದ ಬಗ್ಗೆ ನಾನು ಆರಂಭದಲ್ಲೇ ಒತ್ತಿ ಹೇಳಿದ್ದೇನೆ. ದೆಹಲಿಯಲ್ಲಿ ಕೇಂದ್ರ ಸರ್ಕಾರ ಇದೆ ಎಲ್ಲ ಮಂತ್ರಿ ಇದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಯಾಕೆ ಉಳಿಸಿಕೊಳ್ಳಲು ಆಗಲಿಲ್ಲ, ಹಿಮಾಚಲದಲ್ಲಿ ಯಾಕೆ ಬದಲಾವಣೆ ಆಯ್ತು? ಮತ ವಿಭಜನೆಗೆ ಹಿಂದೆಯೂ ಪ್ರಯತ್ನ ಮಾಡಲಾಗಿದೆ. ಈ ಬಾರಿಯೂ ಆಗುತ್ತದೆ. ನಮ್ಮ ರಾಜ್ಯದಲ್ಲೂ ಜನ ಆಯಾ ಕಾಲಕ್ಕೆ ಆಯಾ ತೀರ್ಮಾನ ಮಾಡಿದ್ದಾರೆ. ಜನ ಬಿಜೆಪಿ ಆಡಳಿತ ನೋಡಿದ್ದಾರೆ. ಜನ ಕಾಂಗ್ರೆಸ್ ಸುಭದ್ರ ಸರ್ಕಾರ ನಿರೀಕ್ಷೆಯಲ್ಲಿದ್ದಾರೆ’ ಎಂದು ತಿಳಿಸಿದ್ದಾರೆ.

ಪರಿಶಿಷ್ಟರಿಗೆ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಪ್ರಚಾರದ ಬಗ್ಗೆ ಕೇಳಿದಾಗ, ‘ನಮ್ಮ ಕಾಲದಲ್ಲಿ ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಲು ಕಾನೂನು ಮಾಡಿದ್ದೇವೆ. ಆದರೆ ಅವರು ಅದನ್ನು ಪಾಲಿಸುತ್ತಿಲ್ಲ. ಅವರು 600 ಭರವಸೆ ಕೊಟ್ಟಿದ್ದರು. ಆ ಬಗ್ಗೆ ನಾವು ನಿತ್ಯ ಪ್ರಶ್ನೆ ಕೇಳುತ್ತಿದ್ದು, ಒಂದಕ್ಕೂ ಮುಖ್ಯಮಂತ್ರಿಗಳು ಉತ್ತರ ನೀಡಲು ಸಾಧ್ಯವಾಗಿಲ್ಲ. ನಾವು ವಿಫಲವಾಗಿದ್ದೇವೆ ಎಂದು ಭಾವಿಸಿ ಜನ ನಮಗೆ ಮತ ಹಾಕಲಿಲ್ಲ. ಆದರೆ ಆಪರೇಷನ್ ಕಮಲದ ಮೂಲಕ ಸರ್ಕಾರ ಮಾಡಿ ಅಧಿಕಾರ ನಡೆಸಿದ್ದೀರಿ. ನಿಮ್ಮ ಸರ್ಕಾರದ ಅಂಕಪಟ್ಟಿ ನೀವು ನೀಡಿ’ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಮೋದಿ, ಶಾ ಅವರ ಆಗಮನದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಮ್ಮ ಪಕ್ಷ ನುಡಿದಂತೆ ನಡೆದಿದ್ದು, ಮುಂದೆಯೂ ನಡೆಯುತ್ತೇವೆ. ಮಲ್ಲಿಕಾರ್ಜುನ ಖರ್ಗೆ ಅವರು ಇದೇ ರಾಜ್ಯದವರು ರಾಜ್ಯದ ಮೂಲೆ ಮೂಲೆ ಗೊತ್ತಿದೆ. ನಮ್ಮ ಸ್ಥಳೀಯ ನಾಯಕರು ಸಮರ್ಥರಾಗಿದ್ದಾರೆ. ನಮಗೆ ಮೋದಿ ಶಾರಂತಹ ನಾಯಕರ ಅಗತ್ಯವಿಲ್ಲ. ಯಾವ ನಾಯಕರು ಯಾವಾಗ ಎಲ್ಲಿ ಪ್ರಚಾರ ಮಾಡಬೇಕು ಎಂದು ಪಕ್ಷ ತೀರ್ಮಾನ ಮಾಡಲಿದೆ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಹೀಗಾಗಿ ಕರೆತರುತ್ತಿದ್ದಾರೆ’ ಎಂದು ತಿಳಿಸಿದರು.

ಮಹಾರಾಷ್ಟ್ರ ಗಡಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ‘ಎರಡೂ ರಾಜ್ಯ ಸರ್ಕಾರ ಅಶಾಂತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಈ ವಿವಾದದಲ್ಲಿ ನಮ್ಮ ಸರ್ಕಾರ ಅಥವಾ ಮಹಾರಾಷ್ಟ್ರ ಸರ್ಕಾರ ಯಾರೇ ಭಾಗಿಯಾಗಿದ್ದರೆ ಅದು ತಪ್ಪು. ನಮಗೆ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಹಿತವೂ ಮುಖ್ಯ. ಕರ್ನಾಟಕದಲ್ಲಿರುವ ಮರಾಠಿಗರ ಹಿತವೂ ಮುಖ್ಯ’ ಎಂದು ತಿಳಿಸಿದರು.

ಹಾಲಿ ಶಾಸಕರಿಗೆ ಎಷ್ಟು ಜನರಿಗೆ ಟಿಕೆಟ್ ನೀಡುತ್ತಾರೆ ಎಂಬ ಪ್ರಶ್ನೆಗೆ, ‘ಈಗಷ್ಟೇ ಚುನಾವಣಾ ಸಮಿತಿ ರಚನೆ ಮಾಡಿದ್ದು, ಅದರ ಸಭೆಯಲ್ಲಿ ಚರ್ಚೆ ಮಾಡಿದ ಬಳಿಕ ಹೆಚ್ಚಿನ ಮಾಹಿತಿ ನೀಡುತ್ತೇವೆ’ ಎಂದರು.

ಸಿದ್ದರಾಮಯ ಹಾಗೂ ನೀವು ನಿಮ್ಮ ಸಮುದಾಯದ ಸಹಾಯ ಕೇಳುತ್ತಿದ್ದೀರಿ ಇದನ್ನೇ ಈಶ್ವರಪ್ಪ ಟೀಕೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, ‘ಈಶ್ವರಪ್ಪನ ವಿಚಾರವಾಗಿ ನಾನು ಏನುನ್ನೂ ಮಾತನಾಡುವುದಿಲ್ಲ. ರಾಜಕೀಯ ಪಕ್ಷದ ಅಧ್ಯಕ್ಷನಾಗಿ ನಾನು ಎಲ್ಲಿ ಹೋದರೂ ಸಹಾಯ ಕೇಳುತ್ತೇನೆ. ಪರಿಶಿಷ್ಟರ ಸಮಾವೇಶದಲ್ಲೂ ಕೇಳುತ್ತೇನೆ. ಈಗ ಮಾಧ್ಯಮ ಸಂವಾದಕ್ಕೆ ಇಲ್ಲಿಗೆ ಆಗಮಿಸಿದ್ದು, ನಿಮ್ಮ ಸಹಾಯವನ್ನು ಕೇಳುತ್ತಿದ್ದೇನೆ. ನಾವು ಇರುವುದೋ ಸಹಾಯ ಕೇಳಲು, ನೀವು ಇರುವುದು ಸಹಾಯ ಮಾಡಲು’ ಎಂದರು.

ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಮಾಡದ ಸಾಧನೆ ಮಾಡಿದ್ದೇವೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ ಎಂದು ಕೇಳಿದಾಗ, ‘ಇವರ ಸಾಧನೆ, ಹೇಳಿಕೆ ಹಾಗೂ ಕಾಗದಕ್ಕೆ ಮಾತ್ರ ಸೀಮಿತ. ಸಂಸತ್ತಿನಲ್ಲಿ ಕೇಂದ್ರ ಸಚಿವರೇ ಮೀಸಲಾತಿ ಹೆಚ್ಚಳದ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ. ಮಾತೆತ್ತಿದರೆ ಧಮ್ಮು ಎನ್ನುವ ಮುಖ್ಯಮಂತ್ರಿಗಳು ಸಂಸತ್ತಿನಲ್ಲಿ ಈ ವಿಚಾರವನ್ನು ತಂದು, ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸಿ ಸಂವಿಧಾನಕ್ಕೆ ತಿದ್ದುಪಡಿ ತಂದು ಸಾಧನೆ ಮಾಡಿ ಜನರ ಮುಂದೆ ತಮ್ಮ ಧಮ್ಮು ತೋರಿಸಲಿ. ನಾವು ಹಾಕಿರುವ ಅಡಿಪಾಯಕ್ಕೆ ಅವರು ಇತೀಶ್ರೀ ಹಾಡಲಿ’ ಎಂದರು.

ಹಿಂದುತ್ವ ವಿಚಾರವನ್ನು ಕಾಂಗ್ರೆಸ್ ಎದುರಿಸುವ ಸಾಮರ್ಥ್ಯವಿಲ್ಲವೇ ಎಂದು ಕೇಳಿದಾಗ, ‘ಕಾಂಗ್ರೆಸ್ ಪಕ್ಷ ಭಾವನೆ ವಿಚಾರವಲ್ಲ, ಬದುಕಿನ ಬಗ್ಗೆ ಯೋಚಿಸುತ್ತೇವೆ. ಪ್ರತಿನಿತ್ಯ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ಇದಕ್ಕೆ ಪರಿಹಾರ ನೀಡಲು ಪ್ರಯತ್ನಿಸುತ್ತಿದ್ದೇವೆ ಹೊರತು ಭಾವನೆ ವಿಚಾರವಾಗಲ್ಲ. ಜನ ಅವರಿಗೆ ಮತ ಹಾಕಿದ್ದು ಆದಾಯ ಡಬಲ್ ಮಾಡುತ್ತೇವೆ ಎಂದು ಹೇಳಿದ್ದಕ್ಕೆ. ನೀವು ಆದಾಯ ಡಬಲ್ ಮಾಡಿದ್ದೀರಾ ಎಂದು ಕೇಳುತ್ತೇವೆ’ ಎಂದು ಭಾವನಾತ್ಮಕ ವಿಚಾರ ತರುತ್ತಿದ್ದಾರೆ.

ಬೆಳಗಾವಿಯಲ್ಲಿ ಗಡಿ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ ವಿಚಾರವಾಗಿ ಯಾವ ರೀತಿ ಹೋರಾಟ ಮಾಡುತ್ತೀರಿ ಎಂದು ಕೇಳಿದಾಗ, ‘ಇದೇ 19ರಂದು ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಪಕ್ಷದ ಹೋರಾಟದ ಬಗ್ಗೆ ವಿರೋಧ ಪಕ್ಷದ ನಾಯಕರು ಎಲ್ಲರೂ ಚರ್ಚೆ ಮಾಡುತ್ತೇವೆ. ಇದಕ್ಕಾಗಿ ನಮ್ಮ ಪ್ರವಾಸಗಳನ್ನು ಮುಂದಕ್ಕೆ ಹಾಕಿದ್ದೇವೆ’ ಎಂದರು.

ಮಹಾಜನ್ ಸಮಿತಿ ವರದಿ ವಿಚಾರವಾಗಿ ಕಾಂಗ್ರೆಸ್ ನಿಲುವು ಏನು ಎಂದು ಕೇಳಿದಾಗ, ‘ಗಡಿ ವಿಚಾರ ಕೋರ್ಟ್ ನಲ್ಲಿ ಚರ್ಚೆ ಆಗುತ್ತಿದೆ. ನ್ಯಾಯಾಲಯದಲ್ಲಿ ವಿಚಾರ ನಡೆಯುತ್ತಿರುವಾಗ ಈ ವಿಚಾರವಾಗಿ ಬಾಯಿ ಹಾಕಿಕೊಂಡು ವಿವಾದ ಯಾಕೆ ಸೃಷ್ಟಿಸಬೇಕು? ಬೊಮ್ಮಾಯಿ ಸರ್ಕಾರ ಮಹಾರಾಷ್ಟ್ರ ಸರ್ಕಾರ ಈ ವಿಚಾರ ಪ್ರಸ್ತಾಪ ಮಾಡಿದ್ದು ಯಾಕೆ? ನಾವು ತಟಸ್ಥ ಸ್ಥಿತಿಯನ್ನು ಪಾಲಿಸುತ್ತೇವೆ. ನ್ಯಾಯಾಲಯದಲ್ಲಿರುವ ವಿಚಾರ ಈಗ ಚರ್ಚೆ ಬೇಡ’ ಎಂದರು.

ಪಕ್ಷ ಬಿಟ್ಟು ಹೋದವರಲ್ಲಿ ನಿಮ್ಮ ಸಂಪರ್ಕದಲ್ಲಿ ಯಾರಾದರೂ ಇದ್ದಾರಾ ಎಂದು ಕೇಳಿದ ಪ್ರಶ್ನೆಗೆ, ‘ಆಂತರಿಕವಾದ ಗುಟ್ಟಿನ ವಿಚಾರವನ್ನು ಬಹಿರಂಗ ನೀಡುವುದಿಲ್ಲ. ಅಶೋಕ್ ಅವರು ಸಂಕ್ರಾಂತಿ ಬಗ್ಗೆ ಮಾತನಾಡುತ್ತಿದ್ದು, ಸಂಕ್ರಾಂತಿ ಬರಲಿ ಗೊತ್ತಾಗುತ್ತದೆ’ ಎಂದು ತಿಳಿಸಿದರು.

ಅಲ್ಪಸಂಖ್ಯಾತರಿಗೆ ಹೆಚ್ಚಿನ ಟಿಕೆಟ್ ನೀಡುವ ಬಗ್ಗೆ ಕೇಳಿದಾಗ, ‘ಅಲ್ಪಸಂಖ್ಯಾತರಿಂದ ಹೆಚ್ಚಿನ ಅರ್ಜಿ ಬಂದಿರುವುದು ತಪ್ಪಿಲ್ಲ. ಅವರು ಟಿಕೆಟ್ ಕೇಳುತ್ತಿರುವುದರಲ್ಲೂ ತಪ್ಪಿಲ್ಲ. ಪ್ರತಿ ಕ್ಷೇತ್ರ ಬಹಳ ಮುಖ್ಯ. ಬಿಜೆಪಿ ಕಾರ್ಯಯೋಜನೆ ಗೊತ್ತಿದೆ. ಕಾಂಗ್ರೆಸ್ ಪಕ್ಷ ಕೂಡ ಆ ಸಮುದಾಯಕ್ಕೆ ಶಕ್ತಿ ತುಂಬಲು ಪ್ರಯತ್ನಿಸುತ್ತದೆ. ವಿಧಾನಪರಿಷತ್ ನಲ್ಲಿ ನಾಲ್ಕು ಸ್ಥಾನಗಳು ಖಾಲಿ ಇದ್ದಾಗ ಅವರ ಧ್ವನಿ ಇರಬೇಕು ಎಂಬ ಕಾರಣಕ್ಕೆ ಎರಡು ಸೀಟನ್ನು ಅವರಿಗೆ ನೀಡಲಾಗಿದೆ. ಯಾವುದೇ ಸಮುದಾಯದವರು ಕೇಳಿದರೂ ತಪ್ಪಿಲ್ಲ. ಮುಸಲ್ಮಾನರಿಗೆ ಟಿಕೆಟ್ ನೀಡಬೇಕು ಎಂದು ಅಂದುಕೊಂಡಿರುವ ಕ್ಷೇತ್ರಗಳಲ್ಲಿ ಅರ್ಜಿಯನ್ನೇ ಹಾಕಿಲ್ಲ. ನಾವೇ ಕೆಲವನ್ನು ಸೇರಿಸಿದ್ದೇವೆ’ ಎಂದು ತಿಳಿಸಿದರು.

ಬಸ್ ಯಾತ್ರೆ ಯಾವಾಗ ಆರಂಭವಾಗಲಿದೆ, ಜನಸಂಕಲ್ಪ ಹಾಗೂ ಪಂಚರತ್ನ ಯಾತ್ರೆಗಿಂತ ಹೇಗೆ ಭಿನ್ನವಾಗಿರುತ್ತದೆ ಎಂದು ಕೇಳಿದಾಗ, ‘ನಾವು ಸತತವಾಗಿ ಜನರ ಬಳಿ ಹೋಗುತ್ತಿದ್ದೇವೆ. ಕೆಲವರು ಈಗ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ತಕರಾರಿಲ್ಲ. ಯಾರು ಏದರೂ ಮಾಡಲಿ, ಯಾವುದೇ ಆಶ್ವಾಸನೆ ನೀಡಲಿ. ಆದರೆ ನಾವು ಕೊಟ್ಟ ಆಶ್ವಾಸನೆಯನ್ನು ಬಹುತೇಕ ಈಡೇರಿಸುತ್ತೇವೆ. ಇನ್ನು ಬಿಜೆಪಿ ಜನಸಂಕಲ್ಪ ಯಾತ್ರೆ ಯಾಕೆ ಮಾಡುತ್ತಿದ್ದಾರೆ? ಅವರ ಆಡಳಿತದಲ್ಲಿ ಕೆಲಸ ಮಾಡದ ಕಾರಣ ಅವರು ಈಗ ಯಾತ್ರೆ ಮಾಡುತ್ತಿದ್ದಾರೆ. ಕೊರೋನಾದಲ್ಲಿ ಸತ್ತವರಿಗೆ ಪರಿಹಾರ ನೀಡದಿದ್ದರೆ, ಬೆಲೆ ಏರಿಕೆ ಇಳಿಸಲಾಗದಿದ್ದರೆ ಯಾವ ಸಂಕಲ್ಪ ಮಾಡಿದರೆ ಏನು? ಅಲ್ಲಮ ಪ್ರಭುಗಳು ಹೇಳಿರುವಂತೆ ಕೊಟ್ಟ ಕುಜದುರೆಯನ್ನು ಏರಲಾಗದೇ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ ಶೂರನೂ ಅಲ್ಲ. ಅಧಿಕಾರ ಇದ್ದಾಗ ಏನೂ ಮಾಡಲಾಗದವರು ಅಧಿಕಾರ ಹೋಗುವ ಸಮಯದಲ್ಲಿ ಮಾಡುತ್ತೇವೆ ಎಂದು ಹೇಳಿದರೆ ಏನು ಪ್ರಯೋಜನ? ನಿಮಗೆ ಸಿಕ್ಕ ಅವಕಾಶದಲ್ಲಿ ಯಾವ ಬದಲಾವಣೆ ತಂದಿದ್ದೀರಿ ಹೇಳಿ?’ ಎಂದು ಕೇಳಿದರು.

ಚುನಾವಣೆ ಸಮೀಪಿಸಿದಂತೆ ಶಿವಕುಮಾರ್ ಅವರಿಗೆ ಇಡಿ ಕುಣಿಕೆ ಗಟ್ಟಿಯಾಗಲಿದೆ ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ ಎಂಬ ಬಗ್ಗೆ ನಿಮ್ಮ ಪಕ್ಷದಲ್ಲಿ ಚರ್ಚೆಯಾಗುತ್ತಿದೆ ಎಂಬುದರ ಬಗ್ಗೆ ಕೇಳಿದ ಪ್ರಶ್ನೆಗೆ, ‘ಇದನ್ನು ನೀವು ಹಾಗೂ ಬಿಜೆಪಿಯವರು ಮಾತನಾಡುತ್ತಿದ್ದೀರಿ’ ಎಂದರು.

ಒಕ್ಕಲಿಗರ ಸಭೆಯಲ್ಲಿ ಎಸ್.ಎಂ ಕೃಷ್ಣ ಅವರನ್ನು ಹೋಲಿಕೆ ಮಾಡಿಕೊಂಡಿರುವುದು ಎಷ್ಟು ಸರಿ ಎಂದು ಕೇಳಿದಾಗ, ‘ನನ್ನನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಗಿದ್ದು, ಈ ಸ್ಥಾನಕ್ಕೆ ಆಯ್ಕೆ ಮಾಡಬೇಕಾದರೆ ಅನೇಕ ಲೆಕ್ಕಾಚಾರಗಳನ್ನು ಇಟ್ಟುಕೊಂಡೆ ಮಾಡಿರುತ್ತಾರೆ’ ಎಂದು ಉತ್ತರಿಸಿದರು.

ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವುದು ಕಡಿಮೆ ಮಾಡಿದ್ದೀರಿ, ಇದು ಭಯದಿಂದಲೋ ಅಥವಾ ತಂತ್ರಗಾರಿಕೆಯೋ ಎಂದು ಕೇಳಿದಾಗ, ‘ಎಷ್ಟು ಅಂತಾ ಅವರ ಜತೆ ಕುಸ್ತಿ ಮಾಡಲಿ. ಯುವಕನಾಗಿದ್ದಾಗ ಕುಸ್ತಿ ಮಾಡಿದ್ದೆ. ಈಗ ಕೂದಲು ಬೆಳ್ಳಗಾಗಿದೆ. ಕುಸ್ತಿ ಸೈದ್ಧಾಂತಿಕವಾಗಿ ಮಾಡುತ್ತೇವೆ. ವೈಯಕ್ತಿಕವಾಗಿ ಮಾಡುವುದಿಲ್ಲ’ ಎಂದು ತಿಳಿಸಿದರು.

ನಿರುದ್ಯೋಗ ಹೆಚ್ಚಾಗುತ್ತಿರುವುದರ ಬಗ್ಗೆ ಕೇಳಿದಾಗ, ‘ನಿರುದ್ಯೋಗದ ವಿಚಾರದಲ್ಲಿ ಬಿಜೆಪಿ ಸರ್ಕಾರದಿಂದ ನಮ್ಮ ಯುವಕರಿಗೆ ಅತ್ಯಂತ ಹೆಚ್ಚಿನ ಮೋಸವಾಗಿದೆ. ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ ನೀಡಲಿಲ್ಲ. ನಾವು ಇತ್ತೀಚೆಗೆ ಕಲ್ಯಾಣ ಕರ್ನಾಟಕದಲ್ಲಿ ಘೋಷಣೆ ಮಾಡಲಾಗಿದ್ದು, ರಾಜ್ಯದಲ್ಲಿ ಖಾಲಿ ಇರುವ ಎಲ್ಲಾ ಉದ್ಯೋಗಗಳನ್ನು ಭರ್ತಿ ಮಾಡುತ್ತೇವೆ. ಸರ್ಕಾರ ಬಂದ ದಿನದಿಂದ ಇದು ಆರಂಭವಾಗಲಿದೆ. ಬಿಜೆಪಿ ಸರ್ಕಾರ ಉದ್ಯೋಗ ನೀಡುವುದರಲ್ಲಿ ಭ್ರಷ್ಟಾಚಾರ ಮಾಡಿ ಯುವಕರ ನಂಬಿಕೆ ನಾಶ ಮಾಡಿದ್ದಾರೆ. ನಾವು ಸರ್ಕಾರಿ ಉದ್ಯೋಗ ತುಂಬುವುದರ ಜತೆಗೆ ಖಾಸಗಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುತ್ತೇವೆ. ರಾಜ್ಯದ ಎಲ್ಲ ವರ್ಗದ ಜನರ ಅಭಿಪ್ರಾಯ ಕೇಳುತ್ತಿದ್ದೇನೆ. ನೀವು ನಿಮ್ಮ ಅಭಿಪ್ರಾಯವನ್ನು ನೀಡಿ’ ಎಂದು ಕೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು