News Karnataka Kannada
Saturday, May 11 2024
ಬೆಂಗಳೂರು ನಗರ

ಬೆಂಗಳೂರು: ನಲ್ಲಿ ಯೋಜನೆ ಕೆಲಸ ನಮ್ಮದು ಕ್ರೆಡಿಟ್ ನಿಮ್ಮದು ಹೇಗೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ!

Siddaramaih
Photo Credit : News Kannada

ಬೆಂಗಳೂರು: ಮನೆ ಮನೆಗೆ ನಲ್ಲಿ ಯೋಜನೆ ಕೆಲಸ ನಮ್ಮದು ಕ್ರೆಡಿಟ್ಟು ನಿಮ್ಮದು ಹೇಗೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.‌

ಈ ಕುರಿತು ಸಿದ್ದರಾಮಯ್ಯ ಅವರ ಪತ್ರಿಕಾ ಹೇಳಿಕೆಯ ವಿವರ ಹೀಗಿದೆ:

2018 ರಲ್ಲಿ ಲೋಕಸಭಾ ಚುನಾವಣೆಗೆ ಮೊದಲು ತಾವು ಏನು ಹೇಳಿದ್ದೀರಿ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ. 2022 ರ ಒಳಗೆ ಮನೆಯಿಲ್ಲದವರಿಗೆ ಮನೆ. ಪ್ರತಿ ಮನೆಗೆ ನಲ್ಲಿ, ನಲ್ಲಿಯಲ್ಲಿ ನೀರು, ಪ್ರತಿ ಮನೆಗೆ ಗ್ಯಾಸ್ ಕನೆಕ್ಷನ್ ಹೀಗೆ ಪುಂಖಾನುಪುಂಖವಾಗಿ ಭಾಷಣ ಮಾಡಿದ್ದಿರಿ.

ಇದನ್ನು ಆಧರಿಸಿ ‘ಜಲ ಜೀವನ್ ಮಿಷನ್’ ಎಂದು ಹಳೆಯ ಯೋಜನೆಗಳ ಹೆಸರು ಬದಲಾಯಿಸಿ ಜನ ಸುಲಿಗೆ ಮಿಷನ್ ಮಾಡಿದಿರಿ. 1972 ಮತ್ತು 2009 ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಜಾರಿಗೆ ತಂದ ನೀರು ಸರಬರಾಜು ಯೋಜನೆಗಳ ಹೆಸರುಗಳನ್ನು ಬದಲಾಯಿಸಿ ‘ಜಲಜೀವನ್ ಮಿಷನ್ ಯೋಜನೆ’ ಎಂದು ಹೆಸರು ಬದಲಾಯಿಸಿದಿರಿ ಅಡ್ಡಿ ಇಲ್ಲ.

ದೇಶದಲ್ಲಿ 10 ಕೋಟಿ ಮನೆಗಳಿಗೆ ನಲ್ಲಿ ಸಂಪರ್ಕಗಳನ್ನು ಕಲ್ಪಿಸಿದ್ದೇವೆಂದು ಇತ್ತೀಚೆಗೆ ತಾವು ಹೇಳಿದ್ದೀರಿ. ಆದರೆ ವಾಸ್ತವವೇನು ಎಂದು ತಮಗೆ ಗೊತ್ತಿದೆಯೇ ?

ರಾಜ್ಯ ಸರ್ಕಾರ ನನಗೆ ಒದಗಿಸಿರುವ ಮಾಹಿತಿ ಪ್ರಕಾರ 2013-14ರಿಂದ 2017-18 ರವರೆಗೆ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 7107 ಓವರ್ ಹೆಡ್ ಟ್ಯಾಂಕುಗಳನ್ನು ಗ್ರಾಮೀಣ ಪ್ರದೇಶಗಳೊಂದರಲ್ಲೆ ನಿರ್ಮಾಣ ಮಾಡಿದ್ದೆವು. 10812 ನೀರಿನ ಶುದ್ಧೀಕರಣ ಸ್ಥಾವರಗಳನ್ನು ನಿರ್ಮಿಸಿದ್ದೆವು. ಇಷ್ಟು ದೊಡ್ಡ ಮೂಲಭೂತ ವ್ಯವಸ್ಥೆಯನ್ನು ನಿರ್ಮಿಸಿದ ನಾವು ಜನರಿಗೆ ಬಲವಂತ ಮಾಡಿ ನಲ್ಲಿ ಸಂಪರ್ಕಗಳನ್ನು ಮತ್ತು ಮನೆಗಳಿಗೆ ಮಿಟರ್ ಗಳನ್ನು ಅಳವಡಿಸಿರಲಿಲ್ಲ.

ನಮ್ಮ ಸರ್ಕಾರದ ಅವಧಿಯಲ್ಲಿ ಕೇವಲ 79 ಸಾವಿರ ಮೀಟರ್ ಗಳನ್ನು ಮತ್ತು 5.4 ಲಕ್ಷ ನಲ್ಲಿ ಸಂಪರ್ಕಗಳನ್ನು ಕೊಟ್ಟಿದ್ದೆವು. ಮೀಟರ್ ಗಳನ್ನು ಅಳವಡಿಸಿ ತೆರಿಗೆಯನ್ನು ಲೂಟಿ ಮಾಡುವ ಮಟ್ಟಕ್ಕೆ ಇಳಿದಿರಲಿಲ್ಲ.

ನಿಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೇವಲ 5430 ಓವರ್ ಹೆಡ್ ಟ್ಯಾಂಕುಗಳನ್ನು ಕೇವಲ 1401 ನೀರಿನ ಶುದ್ಧೀಕರಣ ಸ್ಥಾವರಗಳನ್ನು ನಿರ್ಮಿಸಲಾಗಿದೆ. ಆದರೆ 21 ಲಕ್ಷ ಮನೆಗೆ ಮೀಟರ್ ಗಳನ್ನು ಮತ್ತು 23 ಲಕ್ಷ ಮನೆಗಳಿಗೆ ನಲ್ಲಿಗಳನ್ನು ಅಳವಡಿಸಿದ್ದೇವೆಂದು ಹೇಳಿ ಸುಲಿಗೆ ಆರಂಭಿಸಿದೆ.

ಬಹಳ ದೊಡ್ಡ ಸಾಧನೆ ಮಾಡಿದ್ದೇವೆಂದು ಬಿಜೆಪಿಯವರು ಜಾಹಿರಾತು ಕೊಡುತ್ತಿದ್ದಾರಲ್ಲ ಎಂದು ಕೆಲವು ಗ್ರಾಮಗಳನ್ನು ಪರಿಶೀಲಿಸಿ ನೋಡಿದರೆ ನಮ್ಮ ಸರ್ಕಾರದ ಅವಧಿಯಲ್ಲಿ ನಾವು ನಿರ್ಮಿಸಿದ್ದ ಓವರ್‍ಹೆಡ್ ಟ್ಯಾಂಕುಗಳು, ನೀರು ಶುದ್ಧೀಕರಣ ಸ್ಥಾವರಗಳು, ಕಲ್ಪಿಸಿಕೊಟ್ಟಿದ್ದ ನಲ್ಲಿ ಸಂಪರ್ಕಗಳನ್ನು ಈ ಬಿಜಿಪಿ ಸರ್ಕಾರ ಜನರಿಂದ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡಿದ್ದಲ್ಲದೆ ಹೊಸದಾಗಿ ಸಂಪರ್ಕ ಕಲ್ಪಿಸಿದ್ದೇವೆಂದು ಹೇಳಿ ಕೇಂದ್ರ ಸರ್ಕಾರಕ್ಕೆ ಸುಳ್ಳು ಲೆಕ್ಕ ಕೊಟ್ಟಿದ್ದಾರೆ.

ನೀವು ಅದನ್ನೆಲ್ಲ ಸೇರಿಸಿ 10 ಕೋಟಿ ನಲ್ಲಿ ಸಂಪರ್ಕ ಕೊಟ್ಟಿದ್ದೇವೆಂದು ಸುಳ್ಳನ್ನು ವಿಸ್ತರಿಸಿದ್ದೀರಿ. ನನ್ನ ಬಳಿ ಗ್ರಾಮೀಣ ಪ್ರದೇಶದ ಮಾಹಿತಿ ಇದೆ. ನಗರ, ಪಟ್ಟಣ ಪ್ರದೇಶಗಳದ್ದೂ ಇದೇ ಕತೆ ಇರಬೇಕು.

ಹಾಗಾಗಿ ಸನ್ಮಾನ್ಯ ಪ್ರಧಾನ ಮಂತ್ರಿಗಳೆ ಯಾರದೋ ಶ್ರಮವನ್ನು ತಮ್ಮ ಶ್ರಮ ಎಂದು ಹೇಳಿಕೊಳ್ಳುವ ಕೆಟ್ಟಚಾಳಿಯನ್ನು ಬಿಟ್ಟು ಸ್ವಂತ ಶ್ರಮ ಎಷ್ಟು ಎಂದು ಜನರಿಗೆ ತಿಳಿಸಿ.

ಇಲ್ಲದಿದ್ದರೆ ನಗೆಪಾಟಲಿಗೆ ಈಡಾಗುತ್ತೀರಿ. ಬೇರೊಬ್ಬರ ಶ್ರಮದಿಂದ ಪದವಿ ಪ್ರಮಾಣ ಪತ್ರ ಪಡೆದರೂ ಇತಿಹಾಸ ನಕಲಿಯನ್ನು ಅಸಲಿ ಎಂದು ಎಂದೂ ಹೇಳುವುದಿಲ್ಲ.

ಇತಿಹಾಸ ಅತ್ಯಂತ ನಿಷ್ಠುರವಾಗಿರುತ್ತದೆ, ಕ್ರೂರವಾಗಿರುತ್ತದೆ. ಗೃಹಿಣಿಯಾದ ಹೆಣ್ಣು ಮಗಳೊಬ್ಬಳು ಕಿಂದರಿಜೋಗಿಯ ಹಾಡಿಗೆ ಮರುಳಾಗಿ ಗಂಡ ಮಕ್ಕಳನ್ನು ಬಿಟ್ಟು ಅವನ ಹಿಂದೆ ಹೋಗುತ್ತಾಳೆ. ಸ್ವಲ್ಪ ಕಾಲದಲ್ಲೆ ಅವನ ಸುಳ್ಳುಗಳು ಅರ್ಥವಾಗಿ ಹತಾಶಳಾಗುತ್ತಾಳೆ.

ಭಾರತದ ಜನರೂ ಸಹ ನಿಮ್ಮ ಕಿಂದರಿ ಜೋಗಿಯಂಥ ಕನಸುಗಳನ್ನು ಕೇಳಿ ‘ಎಲ್ಲೋ ಜೋಗಪ್ಪ ನಿನ್ನರಮಾನೆ’ ಎಂದು ನಿಮ್ಮ ಹಿಂದೆ ಬಂದರು. ಈಗ ಹತಾಶರಾಗಿದ್ದಾರೆ.

ಸನ್ಮಾನ್ಯ ಮೋದಿಯವರೆ, ಸುಳ್ಳುಗಳನ್ನು ಕೇಳಿ ಕೇಳಿ ನಿಮ್ಮ ಜೊತೆಗಿದ್ದ ಶೀಲ ಲಕ್ಷ್ಮಿ ನಿಮ್ಮಿಂದ ದೂರವಾಗಿದ್ದಾಳೆ[ ಅಂಥ ಶೀಲಲಕ್ಷ್ಮಿ ನೀವು ದ್ವೇಷದ ಸಿದ್ಧಾಂತದ ಸಂಘಟನೆಗೆ ಸೇರಿದ ಜೊತೆಯೆ ಹೊರಟು ಹೋಗಿದ್ದಾಳೆ.ಆದರೂ ಜನರಿಗೆ ಮಾತ್ರ ಟೋಪಿ ಹಾಕಿದ್ದ ಕಾರಣಕ್ಕೆ ನಂಬಿದ್ದರು] .

ಶೀಲ ಲಕ್ಷ್ಮಿಯನ್ನು ಕಳೆದುಕೊಂಡ ಮನುಷ್ಯರು ಚರಿತ್ರೆಯಲ್ಲಿ ಬರೀ ಬುರ್ನಾಸುಗಳಾಗುತ್ತಾರೆ.

ಮಂಗಳೂರಿಗೆ ಬರುವವರಿದ್ದೀರಿ ಬನ್ನಿ. ದಯಮಾಡಿ ಸುಳ್ಳು ಹೇಳಬೇಡಿ. ನಿಜ ಏನೆಂದು ಹೇಳಿ ಹೋಗಿ. ನಿಮಗೆ ಹಲವು ಮನವಿಗಳನ್ನು, ಒತ್ತಾಯಗಳನ್ನು ಮಾಡುವುದಿದೆ ಅದರ ಮೊದಲ ಒತ್ತಾಯ ಇದು.

ರಾಜ್ಯದ ನಿರುಪಯೋಗಿ ಸಂಸದರಿಗೆ ಒಂದಿಷ್ಟು ಮಾತನಾಡಲು ಧೈರ್ಯ ನೀಡಿ, ಸಮಸ್ಯೆ ಕೇಳಿ ರಾಜ್ಯದ ಕಷ್ಟ ಏನೆಂದು ತಿಳಿಯುತ್ತದೆ ಎಂದು ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು