News Karnataka Kannada
Friday, May 03 2024
ಬೆಂಗಳೂರು ನಗರ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಾಂಗ್ರೆಸ್ ಭವನದಲ್ಲಿ ಸತ್ಯಾಗ್ರಹ!

Minister who called for siddaramaiah's ouster should be arrested: DK Shivakumar
Photo Credit : Twitter

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಭವನದಲ್ಲಿ ಸತ್ಯಾಗ್ರಹ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮಂಗಳವಾರ  ಪ್ರತಿಕ್ರಿಯೆ ನೀಡಿದರು.

ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:

ಈ ದೇಶದಲ್ಲಿ ಇಡಿ, ಸಿಬಿಐ, ಆದಾಯ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು, ವಿರೋಧ ಪಕ್ಷಗಳ ನಾಯಕರ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ.

ಈ ಸಂವಿಧಾನಿಕ ಸಂಸ್ಥೆಗಳು ಇರುವುದೇ ವಿರೋಧ ಪಕ್ಷಗಳ ಮೇಲೆ ದಾಳಿ ಮಾಡಲು. ಬಿಜೆಪಿಯ ಯಾವುದೇ ನಾಯಕರ ಮೇಲೆ ಇಡಿ ದಾಳಿ ಮಾಡಿಲ್ಲ, ಬಂಧಿಸಿಲ್ಲ.

ಸೋನಿಯಾ ಗಾಂಧಿ ಅವರು ಇಡಿ ಕಚೇರಿಯಲ್ಲಿ ವಿಚಾರಣೆ ಎದುರಿಸುತ್ತಿದ್ದು, ದೇಶದ ಎಲ್ಲ ಕಾಂಗ್ರೆಸಿಗರು ಅವರಿಗೆ ಧೈರ್ಯ ತುಂಬುವ ಅಂಗವಾಗಿ ಇಲ್ಲಿ ಸೇರಿದ್ದೇವೆ.

ರಾಹುಲ್ ಗಾಂಧಿ ಅವರನ್ನು 50 ಗಂಟೆಗಳ ಕಾಲ, ಸೋನಿಯಾ ಗಾಂಧಿ ಅವರನ್ನು ಮೊನ್ನೆ 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರೂ, ಅನಗತ್ಯ ಕಿರುಕುಳ ನಿಂತಿಲ್ಲ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಕಾಂಗ್ರೆಸ್ ಮುಖವಾಣಿಯಾಗಿದ್ದು, ನೆಹರೂ ಅವರು ಅಧ್ಯಕ್ಷರಾಗಿದ್ದಾಗ ಇದನ್ನು ಆರಂಭಿಸಿದ್ದರು.

ಈ ಸಂಸ್ಥೆಯ ಆಸ್ತಿಯನ್ನು ತಮ್ಮ ಸ್ವಂತ ಆಸ್ತಿ ಎಂದು ಎಲ್ಲಿಯೂ ಹೇಳಿಲ್ಲ. ಆ ಪತ್ರಿಕೆ ಸಂಕಷ್ಟದಲ್ಲಿದ್ದಾಗ ಅಲ್ಲಿನ ಸಿಬ್ಬಂದಿಗೆ ವೇತನ ನೀಡಲು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ದೇಣಿಗೆ ರೂಪದಲ್ಲಿ ಹಣ ನೀಡಿದ್ದರು.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಅರುಣ್ ಜೇಟ್ಲಿ ಅವರೇ ಈ ಪ್ರಕರಣದಲ್ಲಿ ಯಾವುದೇ ಅಕ್ರಮ ಇಲ್ಲ ಎಂದು ಹೇಳಿದ್ದರು. ಆದರೂ ಈಗ ಈ ಪ್ರಕರಣ ಮತ್ತೆ ತೆರೆದಿದ್ದಾರೆ.

ನನ್ನನ್ನು, ಚಿದಂಬರಂ, ಮಹಾರಾಷ್ಟ್ರ ನಾಯಕರು, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರನ್ನು ವಿಚಾರಣೆ ಮಾಡಿದ್ದಾರೆ. ಈಗ ಸೋನಿಯಾ ಗಾಂಧಿ ಅವರನ್ನು ಅನಗತ್ಯವಾಗಿ ವಿಚಾರಣೆ ಮಾಡುತ್ತಿದ್ದಾರೆ.

ಅವರು ಏನೇ ಕಿರುಕುಳ ಕೊಟ್ಟರೂ, ಜೈಲಿಗೆ ಹಾಕಿದರೂ ನಾವು ಜಗ್ಗುವುದಿಲ್ಲ. ನೆಹರೂ ಹಾಗೂ ಗಾಂಧೀಜಿ, ಸರ್ದಾರ್ ಪಟೇಲ್ ಅವರು ದೇಶಕ್ಕಾಗಿ ಹಲವು ವರ್ಷಗಳ ಕಾಲ ಜೈಲುವಾಸ ಅನುಭವಿಸಿ, ಜೀವವನ್ನು ಲೆಕ್ಕಿಸದೆ ಬ್ರಿಟೀಷರ ಗುಂಡಿಗೆ ಎದೆಯೊಡ್ಡಿ ನಿಂತಿದ್ದರು.

ದೇಶದ ಹಿತಕ್ಕೆ 10 ವರ್ಷಗಳ ಕಾಲ ಪ್ರಧಾನಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದ ಸೋನಿಯಾ ಗಾಂಧಿ ಅವರಿಗೆ ಈ ರೀತಿ ಕಿರುಕುಳ ನೀಡುತ್ತಿದ್ದಾರೆ. ಅವರ ಕುಟುಂಬದವರು ಅಲಹಾಬಾದ್ ನಲ್ಲಿ 20 ಸಾವಿರ ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ದಾನ ಮಾಡಿದ್ದಾರೆ. ಇಂದು ನಾವೆಲ್ಲ ಅವರ ಜತೆ ಇದ್ದೇವೆ.

ನಾವು 75 ನೇ ಸ್ವಾತಂತ್ರ ದಿನ ಆಚರಿಸುತ್ತಿದ್ದು, ದೇಶಕ್ಕೆ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ತಂದು ಕೊಟ್ಟಿತೆ ವಿನಃ ಬಿಜೆಪಿಯಲ್ಲ. ಈ ದೇಶಕ್ಕೆ ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂವಿಧಾನ, ಪ್ರಜಾಪ್ರಭತ್ವ ವ್ಯವಸ್ಥೆ ತಂದುಕೊಟ್ಟಿದ್ದು ಕಾಂಗ್ರೆಸ್.

ಕಾಂಗ್ರೆಸ್ ಪ್ರಜಾಪ್ರಭುತ್ವ ವ್ಯವಸ್ಥೆ ತಂದಿದ್ದಕ್ಕೆ ಮೋದಿ ಅವರು ಪ್ರಧಾನಮಂತ್ರಿ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿದೆ. ಆ. 15 ರಂದು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೆ ಕನಿಷ್ಠ 1ಲಕ್ಷ ಜನ ರಾಷ್ಟ್ರಧ್ವಜ ಹಿಡಿದು ಮೆರವಣಿಗೆ ಮಾಡಲಿದ್ದಾರೆ.

ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಎಲ್ಲಾ ಪಕ್ಷದವರು, ಸಂಘ ಸಂಸ್ಥೆಗಳು ಇದರಲ್ಲಿ ಭಾಗವಹಿಸಬಹುದು. ಎಐಸಿಸಿ ಮಾರ್ಗದರ್ಶನದಲ್ಲಿ ದೇಶ ಐಕ್ಯತೆ, ಸಮಗ್ರತೆ, ರಾಷ್ಟ್ರಧ್ವಜ ಉಳಿಸಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ.

ಸೋನಿಯಾ ಗಾಂಧಿ ನಮ್ಮ ತಾಯಿ, ರಾಹುಲ್ ಗಾಂಧಿ ನಮ್ಮ ಸಹೋದರರು. ನೀವು ಧೃತಿಗೆಡಬೇಡಿ, ನಾವೆಲ್ಲರೂ ನಿಮ್ಮ ಜತೆ ಇದ್ದೇವೆ.’

ಕಾಂಗ್ರೆಸ್ ನಾಯಕರು ಗಾಂಧಿ ಕುಟುಂಬದ ಗುಲಾಮರು ಎಂಬ ಬಿಜೆಪಿ ಟೀಕೆ ಕುರಿತು ಮಾಧ್ಯಮಗಳು ಪ್ರಶ್ನೆ ಕೇಳಿದಾಗ ಉತ್ತರಿಸಿದ ಅವರು, ‘ ಈ ದೇಶಕ್ಕೆ ಗಾಂಧಿ ಕುಟುಂಬ ಗುಲಾಮರಂತೆ ಸೇವೆ ಸಲ್ಲಿಸಿದೆ. ಇದನ್ನು ಬಿಜೆಪಿ ಅರಿಯಬೇಕು. ಅವರ ಅನುಯಾಯಿಗಳಾದ ನಾವೆಲ್ಲರೂ ಈ ದೇಶಕ್ಕೆ ಗುಲಾಮರೆ. ನಾವು ಜನ ಮತ್ತು ಭಾರತಾಂಬೆ ಸೇವೆ ಮಾಡುತ್ತಿದ್ದೇವೆ ‘ ಎಂದು ತಿಳಿಸಿದರು.

ಗುಜರಾತ್ ಗಲಬೆ ಸಂದರ್ಭದಲ್ಲಿ ಮೋದಿ ಅವರು ವಿಚಾರಣೆ ಎದುರಿಸಿದಾಗ ನಾವು ಪ್ರತಿಭಟಿಸಲಿಲ್ಲ ಎಂಬ ಪ್ರಶ್ನೆಗೆ, ‘ ಅದು ಅವರ ವಿಚಾರ. ನಮ್ಮ ನಾಯಕರು ಯಾವುದೇ ತಪ್ಪು ಮಾಡಿಲ್ಲ. ಕೇವಲ ಕಿರುಕುಳ ನೀಡಲು ಈ ರೀತಿ ಮಾಡಲಾಗುತ್ತಿದೆ. ಅವರನ್ನು ಮಾನಸಿಕವಾಗಿ ಕುಗ್ಗಿಸಲು ಸಾಧ್ಯವಿಲ್ಲ. ಅವರು ಉಕ್ಕಿನ ಮಹಿಳೆ, ದೇಶಕ್ಕಾಗಿ ಅಧಿಕಾರ ತ್ಯಾಗ ಮಾಡಿದ್ದಾರೆ ‘ ಎಂದರು.

ಪಕ್ಷದ ಮುಂದಿನ ನಡೆ ಏನು ಎಂದು ಕೇಳಿದಾಗ, ‘ ಕಳೆದ ಮೂರು ವರ್ಷಗಳ ಅಧಿಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದಕ್ಕೆ ಬಿಜೆಪಿ ಭ್ರಷ್ಟೋತ್ಸವ ಆಚರಿಸುತ್ತಿದೆ. ಅವರ ಸಾಧನೆ ಏನು? ನೇಮಕಾತಿ ಅಕ್ರಮ ಮೂಲಕ ಯುವಕರಿಗೆ ಮೋಸ, ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಬರೆ, ಕೋವಿಡ್ ಸಮಯದಲ್ಲಿ ಆಕ್ಸಿಜನ್ ಪೂರೈಸದೆ ಹಲವರ ಸಾವಿಗೆ ಕಾರಣ, ರಸಗೊಬ್ಬರ ದರ ಏರಿಕೆ, ಆದಾಯ ಕುಸಿತದ ಮೂಲಕ ಹೇಗೆ ಅನ್ಯಾಯ ಮಾಡಲಾಗಿದೆ ಎಂದು ಜನರಿಗೆ ವಿವರಿಸಲಿ. ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಾಗಿದೆ. ಜನ ಸಾಮಾನ್ಯರನ್ನು ಕೇಳಿ ಅವರೇ ಹೇಳುತ್ತಾರೆ ‘ ಎಂದು ಟೀಕಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು