News Karnataka Kannada
Tuesday, May 07 2024
ಬೆಂಗಳೂರು ನಗರ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಅನುಷ್ಠಾನ

15,000 school teachers recruitment selection list to be announced by end of the month
Photo Credit :

ಬೆಂಗಳೂರು: ಕರ್ನಾಟಕದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ (2023-24) ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಅನುಷ್ಠಾನಗೊಳ್ಳಲಿದ್ದು, 3 ವರ್ಷ ಮೇಲ್ಪಟ್ಟ ಮಕ್ಕಳ ‘ಬಾಲ್ಯ ಪೂರ್ವ ಆರೈಕೆ ಮತ್ತು ಶಿಕ್ಷಣ’ವನ್ನು ರಾಜ್ಯದ 20 ಸಾವಿರ ಅಂಗನವಾಡಿಗಳು, ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಹಾಲಪ್ಪ ಆಚಾರ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಗುರುವಾರ (ಆ.24) ಜಂಟಿ ಸುದ್ದಿಗೋಷ್ಠಿ ನಡೆಸಿದ ಸಚಿವರು, ಎನ್ಇಪಿ-2020 ಅನುಷ್ಠಾನ ಕುರಿತು ಮಾಹಿತಿ ನೀಡಿದರು.

‘ದೇಶದ ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಅದಕ್ಕಾಗಿ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಸುಧಾರಣೆ, ಬದಲಾವಣೆ ತರಲಿರುವ ಮಹತ್ವಾಕಾಂಕ್ಷೆಯ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಸರ್ಕಾರ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದ್ದು, ಮುಂದಿನ ವರ್ಷದಿಂದಲೇ ಎನ್‌ಇಪಿ-2020 ಪ್ರಕಾರ, ಬುನಾದಿ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

‘ಎನ್ಇಪಿ-2020 ಪ್ರಕಾರ, ‘ಬಾಲ್ಯ ಪೂರ್ವ ಆರೈಕೆ ಮತ್ತು ಶಿಕ್ಷಣ’ ಪಠ್ಯಕ್ರಮ ಚೌಕಟ್ಟು ರಚನೆಗೆ ಆರು ಸಮಿತಿಗಳನ್ನು ರಚಿಸಲಾಗಿದೆ. ‘ಪಠ್ಯಕ್ರಮ ವಿನ್ಯಾಸ’, ‘ಪಠ್ಯಕ್ರಮ ಬೋಧನಾ ಮತ್ತು ಕಲಿಕಾ ಸಾಮಗ್ರಿಗಳು ಹಾಗೂ ಮೌಲ್ಯಮಾಪನ’, ‘ಸಾಮರ್ಥ್ಯ ಅಭಿವೃದ್ಧಿ’, ‘ಸಮುದಾಯ ತಲುಪುವಿಕೆ’, ‘ಮಗುವಿಗೆ ಆರಂಭಿಕ ಉತ್ತೇಜನ’, ‘ಮೇಲ್ವಿಚಾರಣೆ ಮತ್ತು ಉಸ್ತುವಾರಿ’ ವಿಷಯ ಸೇರಿ ಒಟ್ಟು ಆರು ಸಮಿತಿಗಳು ಪಠ್ಯಕ್ರಮ ಚೌಕಟ್ಟನ್ನು ಸಿದ್ಧಪಡಿಸಿವೆ. ಕೇಂದ್ರ ಶಿಕ್ಷಣ ಇಲಾಖೆಯಿಂದ ಇದೇ ಸೆಪ್ಟಂಬರ್‌ನಲ್ಲಿ ಅಂತಿಮ ಪಠ್ಯಕ್ರಮ ಚೌಕಟ್ಟು ಲಭ್ಯವಾಗುವ ನಿರೀಕ್ಷೆ ಇದೆ. ಬಳಿಕ ರಾಜ್ಯದ ಪಠ್ಯಕ್ರಮ ಚೌಕಟ್ಟನ್ನು ಅಂತಿಮಗೊಳಿಸಲಾಗುತ್ತದೆ. ಪಠ್ಯಕ್ರಮ ಚೌಕಟ್ಟಿಗೆ ತಕ್ಕಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಅಗತ್ಯ ತರಬೇತಿಯನ್ನು ಡಿಎಸ್‌ಇಆರ್‌ಟಿ ಮೂಲಕ ಶಿಕ್ಷಣ ಇಲಾಖೆಯ ಅಧೀನದ ಸಂಸ್ಥೆಗಳಲ್ಲಿ ನೀಡಲಾಗುತ್ತದೆ’ ಎಂದು ಸಚಿವರು ಮಾಹಿತಿ ನೀಡಿದರು.

‘ಎನ್‌ಇಪಿ-2020 ಪರಿಣಾಮಕಾರಿ ಅನುಷ್ಠಾನಕ್ಕಾಗಿ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಜ್ಞರ ಸಮಿತಿಗಳು ಕಾರ್ಯ ನಿರ್ವಹಿಸುತ್ತಿವೆ’ ಎಂದು ಸಚಿವರು ತಿಳಿಸಿದರು.

ಮೊದಲ ಹಂತದ ತರಬೇತಿ ನೀಡಲಾಗಿದೆ:
ರಾಜ್ಯದಲ್ಲಿ 66,361 ಅಂಗನವಾಡಿ ಕೇಂದ್ರಗಳಿವೆ. ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆಯರ ಪೈಕಿ 732 ಜನ ಸ್ನಾತಕೋತ್ತರ ಪದವಿಧರರಿದ್ದಾರೆ. 6,017 ಪದವೀಧರರು, 14,303 ಪಿಯುಸಿ ಮತ್ತು 40,786 ಅಂಗನವಾಡಿ ಕಾರ್ಯಕರ್ತೆಯರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಹೊಂದಿದ್ದಾರೆ. ಹೀಗಾಗಿ, ಎನ್‌ಇಪಿ-2020 ಪಠ್ಯಕ್ರಮದ ಕುರಿತು ತರಬೇತಿ ನೀಡಬಹುದು ಎಂದು ಸಚಿವ ಹಾಲಪ್ಪ ಆಚಾರ್ ಅವರು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿನ ಆಶಯದಂತೆ ಕಲ್ಯಾಣ ಕರ್ನಾಟಕ ಭಾಗದ 14 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ಟಾಟಾ ಫೌಂಡೇಶನ್ ಮೂಲಕ ಈಗಾಗಲೇ ತರಬೇತಿ ನೀಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ವಿದ್ಯಾರ್ಹತೆ ಅನುಸಾರ ಮೂರು ವಿಧದ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಶೈಕ್ಷಣಿಕ ವರ್ಷ ಆರಂಭದ ವೇಳೆಗೆ ತರಬೇತಿಯನ್ನು ಮುಕ್ತಾಯಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

‘ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ, ಆರೋಗ್ಯ, ಆರೈಕೆ ಮತ್ತು ಶಿಕ್ಷಣವನ್ನು ನೀಡಲಾಗುತ್ತಿದೆ. ಚಿಲಿಪಿಲಿ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಎನ್‌ಇಪಿ-2020 ಮೂಲಕ ಈ ಕಾರ್ಯಕ್ರಮವನ್ನು ಇನ್ನಷ್ಟು ಸುಧಾರಣೆ ಮಾಡಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು’ ಎಂದು ಸಚಿವರಾದ ಹಾಲಪ್ಪ ಆಚಾರ್ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು