News Karnataka Kannada
Thursday, May 02 2024
ಬೆಂಗಳೂರು ನಗರ

ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಉದ್ಘಾಟನಾ ಅಭಿಯಾನಕ್ಕೆ ಚಾಲನೆ

Bengaluru: Cm performs bhoomi pujan for kempegowda theme park
Photo Credit : By Author

ಬೆಂಗಳೂರು, ಸೆ.2: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108ಅಡಿ ಎತ್ತರದ ಕಂಚಿನ ಪ್ರತಿಮೆಯ ಉದ್ಘಾಟನೆಗೆ ಪೂರ್ವಭಾವಿಯಾಗಿ ರಾಜ್ಯಾದ್ಯಂತ ಪವಿತ್ರ ಮೃತ್ತಿಕೆ(ಮಣ್ಣು) ಮತ್ತು ಜಲವನ್ನು ಸಂಗ್ರಹಿಸುವ ವಿಶಿಷ್ಟ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಚಾಲನೆ ನೀಡಿದರು.

ನಾಡಪ್ರಭು ಕೆಂಪೇಗೌಡರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಉದ್ಘಾಟನೆ ಅಭಿಯಾನಕ್ಕೆ ಚಾಲನೆ ನೀಡಿ ಹಾಗೂ ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣಕ್ಕೂ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು. ರಾಜ್ಯ ಸರಕಾರದಿಂದ ವಿಧಾನಸೌಧದ ಆವರಣದಲ್ಲೂ 50 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಜೊತೆಗೆ ಲಾಲ್‌ಬಾಗ್ ಆವರಣದಲ್ಲೂ ನಾಡಪ್ರಭುವಿನ ಪ್ರತಿಮೆ ಮೈದೆಳೆಯಲಿದೆ ಎಂದು ಘೋಷಿಸಿದರು.

ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಮತ್ತು ಥೀಮ್ ಪಾರ್ಕ್ ಸ್ಥಾಪನೆಗಾಗಿ ಸರಕಾರವು 84ಕೋಟಿ ರೂ. ವಿನಿಯೋಗಿಸುತ್ತಿದೆ. ಹೊರ ದೇಶದಿಂದ ಬರುವ ವಿದೇಶಿ ಪ್ರವಾಸಿಗರಿಗೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ನಾಡಪ್ರಭು ಕೆಂಪೇಗೌಡರ ಆಶಯಗಳನ್ನು ಸಂಕೇತಿಸುವಂತೆ “ಪ್ರಗತಿಯ ಪ್ರತಿಮೆ” ಎಂದು ನಾಮಕರಣ ಮಾಡಲಾಗುತ್ತಿದೆ ಎಂದು ನುಡಿದ ಅವರು ಸಂಸ್ಕೃತಿ ಮತ್ತು ಶ್ರೀಮಂತಿಕೆಯ ಪ್ರತಿರೂಪ ಎಂದು ಹೇಳಿದರು.

ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆಯ ಉದ್ಘಾಟನಾ ಅಭಿಯಾನವು ಸಾಂಕೇತಿಕವಾಗಿ ಆರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿ, ಪ್ರತಿಮೆಯನ್ನು ಉದ್ಘಾಟಿಸಿ ಲೋಕಾರ್ಪಣೆಗೆ ಕ್ರಮವಹಿಸಲಾಗುವುದು ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವರು ಮತ್ತು ನಾಡಪ್ರಭು ಕೆಂಪೇಗೌಡ ಪಾರಂಪರಿಕ ಅಭಿವೃದ್ಧಿ ತಾಣಗಳ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮಾತನಾಡಿ, ಬೆಂಗಳೂರಿನ ಇಂದಿನ ಕೀರ್ತಿಗೆ ಈ ನಗರಕ್ಕೆ ಬುನಾದಿ ಹಾಕಿದ ಕೆಂಪೇಗೌಡರೇ ಕಾರಣ. ಅವರ ಪ್ರತಿಮೆ ಉದ್ಘಾಟನೆಗೆ ಪೂರ್ವಭಾವಿಯಾಗಿ 45 ದಿನಗಳ ಕಾಲ ರಾಜ್ಯ ಮಟ್ಟದ ಅಭಿಯಾನ ನಡೆಯಲಿದೆ. ಇದರ ಅಂಗವಾಗಿ ಎಲ್ಲ ಹಳ್ಳಿಗಳ ವ್ಯಾಪ್ತಿಯ ಕೆರೆಕಟ್ಟೆಗಳು ಮತ್ತು ನದಿಗಳಿಂದ ಪವಿತ್ರವಾದ ಮಣ್ಣು ಮತ್ತು ಜಲ ಸಂಗ್ರಹಿಸಲಾಗುವುದು. ಬಳಿಕ ಪ್ರಧಾನಿ ಮೋದಿ ಅವರು ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.

23 ಎಕರೆ ವಿಸ್ತೀರ್ಣದಲ್ಲಿ ಥೀಮ್ ಪಾರ್ಕ್ ಅಭಿವೃದ್ಧಿಯು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಕಾಮಗಾರಿ ಒಂಬತ್ತು ತಿಂಗಳಲ್ಲಿ ಮುಗಿಯಲಿದೆ. ಒಟ್ಟು 30ಕೋಟಿ ರೂ. ವೆಚ್ಚದ ಥೀಮ್ ಪಾರ್ಕ್, ನಾಡಪ್ರಭುವಿನ ಜೀವನ, ಸಂದೇಶಗಳ ಪಡಿಯಚ್ಚು ನಿರ್ಮಾಣ ಕಾಮಗಾರಿಗೆ ಈಗಾಗಲೇ ೨೦ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರವು ಕೆಂಪೇಗೌಡರ ಜೀವನಕ್ಕೆ ಸಂಬಂಧಿಸಿದ 46 ಸ್ಥಳಗಳಿಗೆ ಕಾಯಕಲ್ಪ ನೀಡುತ್ತಿದೆ. ಮಾಗಡಿ ತಾಲ್ಲೂಕಿನ ಕೆಂಪಾಪುರವನ್ನು ವೀರಸಮಾಧಿ ತಾಣವನ್ನಾಗಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು. ಅಲ್ಲದೆ 50ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ ಅಧ್ಯಯನ ಕೇಂದ್ರ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ತಲೆ ಎತ್ತಲಿದೆ ಎಂದು ಹೇಳಿದರು.

ಸಚಿವರಾದ ಆರ್.ಅಶೋಕ, ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಮನಿರತ್ನ, ಎನ್.ನಾಗರಾಜು(ಎಂಟಿಬಿ), ನಾರಾಯಣಗೌಡ, ಲೋಕಸಭಾ ಸದಸ್ಯರಾದ ಡಿ.ವಿ.ಸದಾನಂದಗೌಡ, ರಾಜ್ಯಸಭಾ ಸದಸ್ಯರಾದ ಜಗ್ಗೇಶ್, ಬಿ.ಡಿ.ಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಬಯಪ್ಪ ಅಧ್ಯಕ್ಷರಾದ ರವಿ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ.ಎಲ್.ಎನ್, ವಿಧಾನಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದ, ಅ.ದೇವಗೌಡ, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಆರ್.ಲತಾ, ಸೇರಿದಂತೆ ಅಧಿಕಾರಿಗಳು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು