ಬೆಂಗಳೂರು: ಸಂಸದ ಅನಂತ್ಕುಮಾರ್ ಹೆಗಡೆ ಅವರನ್ನು ಅರೆಸ್ಟ್ ಮಾಡಿ, ಬಿಡಿ ಅಂತ ನಾನು ಯಾವತ್ತೂ ಯಾರಿಗೂ ಹೇಳಿಲ್ಲ. ಬಂಧನ ಮಾಡಬೇಕಾ, ಬೇಡ್ವಾ ಎಂದು ಸ್ಥಳೀಯ ಪೊಲೀಸರು ನಿರ್ಧಾರ ಮಾಡುತ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಸಂಸದರ ವಿರುದ್ಧ ಎಫ್ಐಆರ್ ದಾಖಲಾಗಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಸಂಸದರ ಮೇಲೆ ಎಫ್ಐಆರ್ ಆಗಿದೆ. ಪೊಲೀಸರು ಸಾಕ್ಷ್ಯ ಎಲ್ಲವನ್ನೂ ಕಲೆ ಹಾಕುತ್ತಿದ್ದಾರೆ. ಅದಾದ ಮೇಲೆ ಮುಂದಿನ ಕ್ರಮ ಏನು ಆಗಬೇಕೋ ಅದು ಕಾನೂನು ರೀತಿ ಆಗುತ್ತದೆ. ಅವರನ್ನು ಅರೆಸ್ಟ್ ಮಾಡಬೇಕಾ, ಮಾಡಬಾರದಾ ಎಂದು ಸ್ಥಳೀಯ ಪೊಲೀಸರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ಗೃಹ ಇಲಾಖೆಯಿಂದ ನಾವು ಯಾವುದೇ ಡೈರೆಕ್ಷನ್ ಕೊಡೋದಿಲ್ಲ. ಅವರನ್ನು ಅರೆಸ್ಟ್ ಮಾಡಿ, ಬಿಡಿ ಅಂತ ನಾನು ಯಾವತ್ತೂ ಯಾರಿಗೂ ಹೇಳಿಲ್ಲ. ಹೇಳೋದು ಇಲ್ಲ ಎಂದು ಹೇಳಿದರು.