ಬೆಂಗಳೂರು: ಇಂಡಿಯಾ ಮೈತ್ರಿಕೂಟವನ್ನು ಉಳಿಸಿಕೊಳ್ಳಲು ಸ್ಟಾಲಿನ್ ಕಟ್ಟಪ್ಪಣೆಯ ಮೇರೆಗೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ ಜಲಸಂಪನ್ಮೂಲ ಸಚಿವ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಪತ್ತೆಯಾಗಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ 61 ವರ್ಷದ ಡಿ.ಕೆ ಶಿವಕುಮಾರ್ ಕರ್ನಾಟಕ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದು ಹುಡುಕಿಕೊಟ್ಟವರಿಗೆ 5 ಗ್ಯಾರಂಟಿಗಳು ಉಚಿತ ಎಂದು ಹೇಳಿದೆ.
ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ‘ದೊಡ್ಡಮಟ್ಟದಲ್ಲಿ ಸಹಕರಿಸಿದ’ ಋಣವನ್ನು ತೀರಿಸಲು ಹಾಗೂ ಲೋಕಸಭಾ ಚುನಾವಣೆಯ ಬಳಿಕ ಸಿಎಂ ಕುರ್ಚಿಗೆ ಲಾಬಿ ಮಾಡಲು, ಕಾವೇರಿಯನ್ನು ಸ್ಟಾಲಿನ್ ನಾಡಿಗೆ ಬೇಕಾಬಿಟ್ಟಿಯಾಗಿ ಹರಿಬಿಟ್ಟು ಜಲಸಂಪನ್ಮೂಲ ಸಚಿವ ಶಿವಕುಮಾರ್ ಅವರು ನಾಪತ್ತೆಯಾಗಿದ್ದಾರೆ. ದಯವಿಟ್ಟು ಹುಡುಕಿಕೊಡಿ ಎಂದು ಪೋಸ್ಟ್ ಮಾಡಿದೆ.