ಬೆಂಗಳೂರು : ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಒಮಿಕ್ರಾನ್ ಸೋಂಕಿನ ಅಬ್ಬರ ರಾಜ್ಯದಲ್ಲೂ ಹೆಚ್ಚಾಗಿದ್ದು, ಇಂದು ರಾಜ್ಯದಲ್ಲಿ 10 ಒಮಿಕ್ರಾನ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.
ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಜನವರಿ 2 ರಂದು ಕರ್ನಾಟಕದಲ್ಲಿ 10 ಒಮಿಕ್ರಾನ್ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 76 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 8 ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ 5 ವಿದೇಶಿ ಪ್ರಯಾಣಿಕರಾಗಿದ್ದಾರೆ. ಧಾರವಾಡದಲ್ಲಿ 2 ಪ್ರಕರಣಗಳು ದೃಢಪಟ್ಟಿವೆ ಎಂದು ಮಾಹಿತಿ ನೀಡಿದ್ದಾರೆ.