ಬೆಂಗಳೂರು, ಮಾ.15 : ಆಟೋ ಚಾಲಕರೊಬ್ಬರನ್ನು ಅಟ್ಟಾಡಿಸಿ ಕಲ್ಲಿನಿಂದ ಹೊಡೆದು ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಜೆಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ದೂಪನಹಳ್ಳಿಯ ನಿವಾಸಿ ಮಂಜುನಾಥ (32) ಕೊಲೆಯಾದ ಆಟೋ ಚಾಲಕ. ಜೆಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜೆಡಿ ಬಾರ್ ಬಳಿ ರಾತ್ರಿ ಮಂಜುನಾಥ ಹಾಗೂ ಆರೋಪಿಗಳ ನಡುವೆ ಕ್ಷುಲ್ಲಕ ವಿಚಾರವಾಗಿ ಜಗಳವಾಗಿದೆ. ಆ ಸಂದರ್ಭದಲ್ಲಿ ಮಂಜುನಾಥ ಬಾರ್ನಿಂದ ಹೊರಗೆ ಬಂದು ಆಟೋದೊಳಗೆ ಕುಳಿತುಕೊಂಡಿದ್ದಾಗ ಆರೋಪಿ ಗಳು ಮತ್ತೆ ಅಲ್ಲಿಗೂ ಬಂದು ಜಗಳವಾಡಿದ್ದಾರೆ.
ಬೆಳಗಿವ ಜಾವ 1.30ರ ಸುಮಾರಿನಲ್ಲಿ ಆಟೋದಿಂದ ಇಳಿದು ಮಂಜುನಾಥ್ ಓಡಿ ಹೋಗುತ್ತಿದ್ದಾಗ ಆರೋಪಿಗಳು ಅಟ್ಟಾಡಿಸಿಕೊಂಡು ಹೋಗಿದ್ದಾರೆ.
ಕೋಡಿಹಳ್ಳಿ ಜಕ್ಷನ್ ಬಳಿ ಕೆಳಗೆ ಬಿದ್ದ ಮಂಜುನಾಥ್ ತಲೆಗೆ ಕಲ್ಲಿನಿಂದ ಹೊಡೆದು ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸುದ್ದಿ ತಿಳಿದು ಜೆಬಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧ ಕೈಗೊಂಡಿದ್ದಾರೆ.