ಬೆಂಗಳೂರು: ನಗರದಲ್ಲಿ ಕೊವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಸಲೂನ್ ಗಳಿಗೆ ಭೇಟಿ ನೀಡಲು ಹೆದರುತ್ತಿರುವ ಕಾರಣ ನೂರಾರು ಸಲೂನ್ ಗಳು ಬಂದ್ ಆಗಿದೆ.
ಸಲೂನ್ ಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ ಎಂದು ಕೆಲವು ಸಲೂನ್ ಮಾಲಕರು ಶಟರ್ ಮೇಲೆ ನೋಟಿಸ್ ಅಂಟಿಸಿದ್ದಾರೆ. ಮೈಸೂರು, ಹುಬ್ಬಳ್ಳಿ-ಧಾರವಾಡದಲ್ಲಿ ಕೂಡ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ.
ಬ್ಯೂಟಿ ಪಾರ್ಲರ್ ಗಳು ಕೂಡ ಬಂದ್ ಆಗಿರುವ ಕಾರಣದಿಂದಾಗಿ ಹಲವಾರು ಮಹಿಳೆಯರು ಉದ್ಯೋಗವಿಲ್ಲದೆ ಈಗ ಮನೆಯಲ್ಲೇ ಇದ್ದಾರೆ. ಇದರಿಂದ ಅವರ ಜೀವನ ನಿರ್ವಹಣೆಗೆ ಕೂಡ ಕಷ್ಟವಾಗುತ್ತಿದೆ ಎಂದು ಹೇಳುತ್ತಿದ್ದಾರೆ.
ರಾಜ್ಯ ಸರ್ಕಾರವು ಈಗಾಗಲೇ ಸಲೂನ್ ಮಾಲಕರಿಗೆ ಪರಿಹಾರ ಧನ ಮಂಜೂರು ಮಾಡಿದೆ. ಆದರೆ ಬ್ಯೂಟಿ ಪಾರ್ಲರ್ ಗಳಲ್ಲಿ ಕೆಲಸ ಮಾಡುವವರಿಗೆ ಯಾವುದೇ ಪರಿಹಾರ ನೀಡಿಲ್ಲ.