News Karnataka Kannada
Monday, April 29 2024
ಬೆಂಗಳೂರು ನಗರ

ಕರ್ನಾಟಕದ ಮಾನಸಿಕ ಆರೋಗ್ಯ ಉಪಕ್ರಮ ದೇಶಾದ್ಯಂತ ಜಾರಿ: ಸಚಿವ ಡಾ. ಸುಧಾಕರ್

Dr. Sudhakar
Photo Credit :

ಬೆಂಗಳೂರು: ಕೋವಿಡ್ ಬಂದ ನಂತರ ಜನರು ಮಾನಸಿಕ ಒತ್ತಡಕ್ಕೆ ಒಳಗಾಗಿರುವುದನ್ನು ಗಮನಿಸಿರುವ ಕೇಂದ್ರ ಸರಕಾರ, ಇದಕ್ಕಾಗಿ ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಆಸ್ಪತ್ರೆಯನ್ನು ಆರಿಸಿಕೊಂಡು ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮ ನೀಡುವುದಾಗಿ ತಿಳಿಸಿದೆ. ಇದು ಸಕಾಲಿಕವಾಗಿದ್ದು, ಇಂದಿನ ಯುವಜನತೆಗೆ ಬಹಳ ಉಪಯೋಗವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಶ್ಲಾಘಿಸಿದ್ದಾರೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2022-23ನೇ ಸಾಲಿನ ಬಜೆಟ್ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಕೋವಿಡ್ ನಿಂದ ಅನೇಕರು ಮಾನಸಿಕ ಸಮಸ್ಯೆಗೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಆರಂಭದಿಂದಲೇ ಮಾನಸಿಕ ಒತ್ತಡಕ್ಕೊಳಗಾದವರನ್ನು ಪತ್ತೆ ಮಾಡಿ ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ. ಈವರೆಗೆ 26.08 ಲಕ್ಷ ಜನರಿಗೆ ಆಪ್ತ ಸಮಾಲೋಚನೆ ಮಾಡಲಾಗಿದೆ. ಈಗ ಕೇಂದ್ರ ಬಜೆಟ್‌ನಲ್ಲಿ ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮ ನೀಡಿದ್ದು, ಇದಕ್ಕಾಗಿ ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಸೆಂಟರ್ ಫಾರ್ ಎಕ್ಸ್ ಲೆನ್ಸ್ ಎಂಬ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಈ ಕಾರ್ಯಕ್ರಮವು 23 ಕೇಂದ್ರಗಳನ್ನು ಒಳಗೊಂಡಿರುತ್ತದೆ. ಇದನ್ನು ನಮ್ಮದೇ ಬೆಂಗಳೂರಿನ ನಿಮ್ಹಾನ್ಸ್ ನಿರ್ವಹಣೆ ಮಾಡಲಿದೆ. ಬೆಂಗಳೂರಿನ ಐಐಐಟಿ ಸಂಸ್ಥೆ ತಾಂತ್ರಿಕ ನೆರವು ನೀಡಲಿದೆ. ಇಂತಹ ಅವಕಾಶವನ್ನು ರಾಜ್ಯಕ್ಕೆ ನೀಡಿರುವುದಕ್ಕಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದಗಳು. ಇದರಿಂದಾಗಿ ಮಾನಸಿಕ ಆರೋಗ್ಯದ ನಿರ್ವಹಣೆಯನ್ನು ಭವಿಷ್ಯದಲ್ಲಿ ಕರ್ನಾಟಕ ಮುಂದಾಳತ್ವ ವಹಿಸಿ ಮಾದರಿಯಾಗಿ ನಿಲ್ಲಲಿದೆ ಎಂದು ಸಚಿವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರಕಾರ ಇಂದು ಮಂಡನೆ ಮಾಡಿರುವ ಬಜೆಟ್, ಕೋವಿಡ್ ನಂತರದ ಕಾಲದಲ್ಲಿ ದೇಶದ ಸಮಗ್ರ ಆರ್ಥಿಕ ಸುಧಾರಣೆಗೆ ಒತ್ತು ನೀಡಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತ ಸದೃಢವಾಗಿ ಬೆಳೆಯಲು ವೇಗ ದೊರೆತಂತಾಗಿದೆ. ಜೊತೆಗೆ ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಆದ್ಯತೆ ದೊರೆತಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಸ್ವಾತಂತ್ರ್ಯದ 100ನೇ ವರ್ಷದತ್ತ ಸಾಗುತ್ತಿರುವ ಈ ಅಮೃತ ಕಾಲದಲ್ಲಿ ದೇಶವನ್ನು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಗೆ ತರಲು ಭದ್ರ ಅಡಿಪಾಯ ಹಾಕುವ ನಿಟ್ಟಿನಲ್ಲಿ ಬಜೆಟ್ ರೂಪಿಸಲಾಗಿದೆ. ಅದರಲ್ಲೂ ಆರೋಗ್ಯ ಕ್ಷೇತ್ರದಲ್ಲಿ ಹೊಸ ಯೋಜನೆ, ಕ್ರಮಗಳನ್ನು ತಂದು ಜನರ ಜೀವನ ಗುಣಮಟ್ಟ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗಿದೆ. ದೇಶದಲ್ಲಿ ಈವರೆಗೆ 166 ಕೋಟಿಗೂ ಅಧಿಕ ಲಸಿಕೆಗಳನ್ನು ನೀಡುವ ಮೂಲಕ ಜನರ ಜೀವ, ಜೀವನೋಪಾಯ ಎರಡನ್ನೂ ರಕ್ಷಿಸಲಾಗಿದೆ. ಲಸಿಕಾಕಾರಣ ಕೋವಿಡ್ ನಂತರದ ಆರ್ಥಿಕ ಪುಶ್ಚೇತನಕ್ಕೆ ವೇಗ ನೀಡಿದೆ. ಇಂತಹ ಬಜೆಟ್ ನೀಡಿದ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು ಎಂದು ಸಚಿವರು ಹೇಳಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಬೆಂಬಲ ಬೆಲೆ ಯೋಜನೆಯಡಿ 2.37 ಲಕ್ಷ ಕೋಟಿ ರೂ.ನಲ್ಲಿ ಬೆಳೆ ಖರೀದಿ ನಡೆಯಲಿದೆ. ಸಹಕಾರಿ ಸಂಘಗಳ ತೆರಿಗೆ ದರವನ್ನು ಶೇ.15ಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಕಾವೇರಿ ಸೇರಿದಂತೆ 5 ನದಿಗಳ ಜೋಡಣೆಗೆ ಅನುಮತಿ ನೀಡಲಾಗಿದೆ. ಈ ಎಲ್ಲಾ ಕಾರ್ಯಗಳಿಂದಾಗಿ ಕೃಷಿಯ ಸಮಗ್ರ ಸುಧಾರಣೆ ಸಾಧ್ಯವಾಗಲಿದೆ.

ಇಷ್ಟೇ ಅಲ್ಲದೆ, ಪಿಎಂ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳ ನಿರ್ಮಾಣ, 400 ವಂದೇ ಭಾರತ್ ರೈಲುಗಳು, ಆಧುನಿಕ ತಂತ್ರಜ್ಞಾನ ಇ-ಪಾಸ್ ಪೋರ್ಟ್ ವ್ಯವಸ್ಥೆ, 2 ಲಕ್ಷ ಅಂಗನವಾಡಿಗಳ ಉನ್ನತೀಕರಣ, ಹೊಸದಾಗಿ 3.8 ಕೋಟಿ ಮನೆಗಳಿಗೆ ನಳ್ಳಿಸಂಪರ್ಕ, ಸೌರ ವಿದ್ಯುತ್‍ಗೆ ₹ 19,500 ಕೋಟಿ ಮೊದಲಾದ ಯೋಜನೆಗಳು ದೇಶವನ್ನು ಎಲ್ಲಾ ಆಯಾಮಗಳಿಂದ ಸುಧಾರಣೆ ಮಾಡಲು ಪೂರಕವಾಗಿದೆ ಎಂದು ಸಚಿವ ಸುಧಾಕರ್ ಶ್ಲಾಘಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು