ಬೆಂಗಳೂರು: ಮಾರ್ಚ್ ಮತ್ತು ಏಪ್ರಿಲ್ನಲ್ಲಿ ನಡೆದಿರುವ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಮೌಲ್ಯಮಾಪನ ಮುಕ್ತಾಯವಾಗಿದ್ದು, ಫಲಿತಾಂಶ ಪ್ರಕಟಣೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳ ಫಲಿತಾಂಶ ಮೇ 25ರ ಒಳಗೆ ಪ್ರಕಟಿಸಲು ನಿರ್ಧರಿಸಲಾಗಿದೆ. ಇದುವರೆಗೆ ನಿಗದಿತ ದಿನಾಂಕ ಪ್ರಕಟವಾಗಿಲ್ಲ. ಮೊದಲು ಎಸ್ಎಸ್ಎಲ್ಸಿ ನಂತರ ಪಿಯುಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಉತ್ತರ ಪತ್ರಿಕೆಗಳ ಮೌಲ್ಯಮಾಪನ ಈಗಾಗಲೇ ಮುಗಿದಿದ್ದು, ಶೀಘ್ರವೇ ಫಲಿತಾಂಶದ ದಿನಾಂಕ ನಿಗದಿಪಡಿಸಲಾಗುವುದು. ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕ ಪಡಬೇಕಾಗಿಲ್ಲ ಎಂದರು.