News Karnataka Kannada
Saturday, May 11 2024
ಬೆಂಗಳೂರು

ಬೆಂಗಳೂರು: ಕಣ್ಮರೆಯಾಗುತ್ತಿರುವ ಅಕ್ಕಿ ತಳಿಗಳಲ್ಲಿ ಮೂಡಿ ಬಂದ ವೈವಿಧ್ಯಮಯ ತಿನಿಸುಗಳು

A variety of delicacies emerging from the vanishing rice varieties
Photo Credit : By Author

ಬೆಂಗಳೂರು: ಗ್ರೀನ್‌ಪೀಸ್ ಇಂಡಿಯಾ ಆಯೋಜಿಸಿದ ಕುಕ್ಕಿಂಗ್‌ ಅಪ್‌ ಚೇಂಜ್‌- ಅಕ್ಕಿ ತಳಿಗಳ ಮರುಶೋಧನೆ ಕಾರ್ಯಕ್ರಮ ಕಣ್ಮರೆಯಾಗುತ್ತಿರುವ ವಿವಿಧ ದೇಸೀ ಅಕ್ಕಿ ತಳಿಗಳನ್ನು ಬಳಸಿಕೊಂಡು ಮಾಡಲಾದ ವೈವಿಧ್ಯಪೂರ್ಣ ಅಡುಗೆಗೆ ಸಾಕ್ಷಿಯಾಯಿತು.

ಸಮುದಾಯವನ್ನು ಹವಾಮಾನ ವೈಪರೀತ್ಯಗಳಿಗೆ ಒಗ್ಗಿಕೊಳ್ಳುವಂತಹ ಬೆಳೆಗಳ ಸೇವನೆಯತ್ತ ಪ್ರೋತ್ಸಾಹಿಸುವ ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮ ಭಾನುವಾರ ಯಲಹಂಕದ ಆರ್‌ಎಂಝಡ್ ಗ್ಯಾಲೇರಿಯಾದಲ್ಲಿ ನಡೆಯಿತು.

ಆರೋಗ್ಯಕರ ಮತ್ತು ರಾಸಾಯನಿಕ-ಮುಕ್ತ ಆಹಾರ ಸೇವನೆ ಕುರಿತಂತೆ ಸಾರ್ವಜನಿಕರಲ್ಲಿ ಸಾಕಷ್ಟು ಉತ್ಸಾಹ ಮತ್ತು ಕಾಳಜಿ ಇದ್ದರೂ, ಈ ನಿಟ್ಟಿನಲ್ಲಿ ಸ್ಥಳೀಯ ಆಹಾರ ಪದಾರ್ಥಗಳನ್ನು  ದೊಡ್ಡ ಪ್ರಮಾಣದಲ್ಲಿ ಸೂಕ್ತವಾಗಿ ಬಳಕೆ ಮಾಡಿಕೊಳ್ಳಲಾಗಿಲ್ಲ. ಇದಕ್ಕೆ ಅವುಗಳ ಅಲಭ್ಯತೆ, ಹೆಚ್ಚು ಪರಿಚಿತವಲ್ಲದ ಈ ತಳಿಗಳೆಡೆಗೆ ಆತಂಕಗಳು, ತಪ್ಪು ಮಾಹಿತಿ  ಹೀಗೆ ಹಲವಾರು ಕಾರಣಗಳಿವೆ.

ಪ್ರಸ್ತುತ ಪರಿಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಗ್ರೀನ್‌ಪೀಸ್‌ ಇಂಡಿಯಾ ಹೆಜ್ಜೆ ಇಡುತ್ತಿದೆ. ಭಾರತದಲ್ಲಿ ಕಣ್ಮರೆಯಾಗುತ್ತಿರುವ ಭತ್ತದ ತಳಿಗಳನ್ನು ಜನರಿಗೆ ಪರಿಚಯಿಸಿ, ಅದನ್ನು ಬಳಸುವಂತೆ ಪ್ರೇರೇಪಿಸುವ ಸಲುವಾಗಿ ಗ್ರೀನ್‌ ಪೀಸ್‌ ಇಂಡಿಯಾ ʻಕುಕ್ಕಿಂಗ್‌ ಅಪ್‌ ಚೇಂಜ್‌ʼ ಎಂಬ ವಿನೂತನ ಪರಿಕಲ್ಪನೆಯೊಂದಿಗೆ ದೇಸೀ ಅಕ್ಕಿಯಿಂದ ಅನ್ನ ತಯಾರಿಸುವುದು ಹೇಗೆ ಎಂಬುದರಿಂದ ಮೊದಲುಗೊಂಡು, ವಿವಿಧ ಬಗೆಯ ತಿನಿಸುಗಳ ತಯಾರಿಕಾ ವಿಧಾನವನ್ನು ಸಾದರಪಡಿಸಿತು.

ಗ್ರೀನ್‌ಪೀಸ್ ಇಂಡಿಯಾದ ಬಾಣಸಿಗರಾದ ಚೆಫ್‌ ರುತ್ವಿಕ್ ಖಾಸ್ನಿಸ್ ಮತ್ತು ಚೆಫ್‌ ವಿಕಾಸ್ ಪೃಥ್ವಿನಾಥ್  ಅಪ್ಪಟ ದೇಸೀ, ರುಚಿಕರ, ಸುವಾಸನೆಯುಳ್ಳ, ಪರಿಸರ ಸ್ನೇಹಿ ಮತ್ತು ಆರೋಗ್ಯಕರ ಭತ್ತದ ತಳಿಗಳಾದ ನಿಜಾವರ, ಗಂಧಕಶಾಲ, ವಲಿಯಾಚೆನ್ನೆಲ್ಲು ಮತ್ತು ಮುಲ್ಲಂಕೈಮಾ ಮುಂತಾದ ಅಕ್ಕಿಗಳನ್ನು ಬಳಸಿಕೊಂಡು ಸ್ವಾದಿಷ್ಟಭರಿತ ತಿಂಡಿಗಳನ್ನು ತಯಾರಿಸಿದರು. ಈ ಕಾರ್ಯಕ್ರಮವು ರೈತರಿಂದ ಸಾವಯವ ಭತ್ತದ ತಳಿಗಳ ಪ್ರದರ್ಶನ ಮತ್ತು ಮಾರಾಟವನ್ನು ಸಹ ಒಳಗೊಂಡಿತ್ತು.

ಕಾರ್ಯಕ್ರಮದ ಕುರಿತು ಮಾತನಾಡಿದ  ಗ್ರೀನ್‌ಪೀಸ್ ಇಂಡಿಯಾದ ಪ್ರಚಾರಕ ರುತ್ವಿಕ್ ಅಜಿತ್ ಖಾಸ್ನಿಸ್, “ನಾವು ಹೆಚ್ಚಾಗಿ ಸಾವಯವ ಆಹಾರವನ್ನು ಉತ್ತೇಜಿಸಲು ನಗರವಾಸಿಗಳನೇ ಆಯ್ಕೆ ಮಾಡಿಕೊಂಡಿದ್ದೇವೆ. ಅವರು ತಂತ್ರಜ್ಞಾನ ಆಧಾರಿತ ಇಂದಿನ ಹೊಸ ಮಾದರಿಯ ಮಾರುಕಟ್ಟೆಗಳಿಗೆ ತೆರೆದುಕೊಳ್ಳುವ ಹಾಗು ನವೀನ ತಾಂತ್ರಿಕತೆಗಳನ್ನು ಬಳಸಿ ಹೊಸ ಮಾದರಿಗಳನ್ನು ನಿರ್ಮಿಸುವ ಮನೋಭಾವವನ್ನು ಹೊಂದಿದ್ದಾರೆ. ಸಾವಯವ ರೈತರು ಮತ್ತು ರೈತರು ಮತ್ತು ಉತ್ಪಾದಕರ ಸಂಸ್ಥೆಗಳು( ಎಫ್‌ಪಿಒ) ಗಳು ಈ ಪ್ರಕ್ರಿಯೆಯ ಪ್ರಮುಖ ಭಾಗವಾಗಿದೆ. ಅವರು ನಾಗರಿಕರ ಪೌಷ್ಟಿಕಾಂಶದ ಎಲ್ಲಾ ಅಗತ್ಯತೆಗಳನ್ನು ಪೂರೈಸುವ ಹಾಗು ಸುಸ್ಥಿರ, ಸ್ಥಳೀಯ ಆಹಾರ ವ್ಯವಸ್ಥೆಯನ್ನು ನಿರ್ಮಿಸುವ ನಮ್ಮ ಹೋರಾಟದಲ್ಲಿ  ಮುಂಚೂಣಿಯಲ್ಲಿದ್ದಾರೆʼʼ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಸಕ್ತರು ತಯಾರಿಸಿದ ಅಡುಗೆಯನ್ನು ಸಂಪೂರ್ಣವಾಗಿ ಸಾವಯವ ಧಾನ್ಯಗಳಿಂದಲೇ ಮಾಡಲಾಗಿದ್ದು, ಅದನ್ನು ಸಾವಯವ ಕೃಷಿಕರಿಂದಲೇ ಖರೀದಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಸಕ್ತ ಬಾಣಸಿಗರಲ್ಲಿ ಒಬ್ಬರಾದ ಶ್ರೀಮತಿ ಪುಷ್ಪಾ ಬ್ಲೆಸ್ಸಿಂಗ್ಸ್‌ ಅವರು, ಕುಸುಬಲಕ್ಕಿ ಮಾದರಿಯ  ವಯನಾಡ್ ತೊಂಡಿ ಮತ್ತು ಚೆಂದಾಲಿ ಎಂಬ ಪಾಲಿಶ್ ಮಾಡದ ಕೇರಳದ ವಯನಾಡ್‌ ಮೂಲದ ಎರಡು ವಿಧದ ಅಕ್ಕಿಯನ್ನು ಬಳಸಿ ಇಡ್ಲಿಗಳನ್ನು ತಯಾರಿಸಿದರು. ಇನ್ನೂ ಪ್ರೌಢಶಾಲೆಯಲ್ಲಿ ಓದುತ್ತಿರುವ ಚಿಕ್ಕ ಹುಡುಗ ಚಯಾನ್, ಮಂಡ್ಯ ಜಿಲ್ಲೆಯಿಂದ ಬಂದ ಗಂಧಸಾಲೆ ಎಂಬ ಪರಿಮಳಯುಕ್ತ ಭತ್ತದ ತಳಿಯನ್ನು ಬಳಸಿ ತಯಾರಿಸಿದ ಬಿರಿಯಾನಿ ಎಲ್ಲರ ಬಾಯಲ್ಲಿ ನೀರೂರಿಸಿತು. ಬೆಂಗಳೂರಿನ ಅಚ್ಚುಮೆಚ್ಚಿನ ಖಾದ್ಯ ಬಿಸಿಬೇಳೆಬಾತ್ ನ್ನು ತಯಾರಿಸಲು ಮುಂದಾದ ಬೆಂಗಳೂರಿನ ಪ್ರಿಯಾ  ಸಣ್ಣ ರಾಗಿ (ಗೋಂಧ್ಲಿ) ಜೊತೆಗೆ ಗಾಳಿಗೆಣಸಿನಂತಹ ಕೆಲವು ಮರೆಯಾಗಿರುವ ಅಥವಾ ಮೂಲೆಗುಂಪಾಗಿರುವ ಎಂಟು ತರಕಾರಿಗಳನ್ನು ಸೇರಿಸುವ ಮೂಲಕ, ವಿಶೇಷ ಆರೋಗ್ಯಕರ ತಿನಿಸು ತಯಾರಿಸಿ ಎಲ್ಲರ ಮನಸೆಳೆದರು.

ಈವೆಂಟ್‌ನಲ್ಲಿ ಭಾಗವಹಿಸಿದ ರಶ್ಮಿ ಸಬಿ ಸನ್ನಿ, ತಮ್ಮ ಅನುಭವದ ಬಗ್ಗೆ ಮಾತನಾಡುತ್ತಾ, “ನಮ್ಮ ಸ್ಥಳೀಯ ಅಕ್ಕಿ ತಳಿಗಳು ಇಷ್ಟು ರುಚಿಕರವಾಗಿರುತ್ತವೆ ಎಂದು ನನಗೆ ಗೊತ್ತೇ ಇರಲಿಲ್ಲ. ನಮ್ಮ ಮನೆಯಲ್ಲಿ ಎಲ್ಲರಿಗೂ ಅನ್ನ ಎಂದರೆ ಇಷ್ಟ. ನಾವು ಅದನ್ನು ಪ್ರತಿದಿನ ಸೇವಿಸುತ್ತೇವೆ. ಈ ತರೇವಾರಿ ಖಾದ್ಯಗಳನ್ನು ನೋಡಿದ ಮೇಲೆ, ನಾನು ಈಗ ಈ ತಳಿಯ ಅಕ್ಕಿಯನ್ನೇ ರೈತರಿಂದ ನೇರವಾಗಿ ಖರೀದಿಸುವ ಕುರಿತು ಆಲೋಚಿಸುತ್ತಿದ್ದೇನೆ. ರುಚಿಕರವಾದ, ಆರೋಗ್ಯಕರ ಮತ್ತು ಸುರಕ್ಷಿತವಾದ ಊಟವನ್ನು ಸೇವಿಸುವ ಮೂಲಕ ನಾನು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಸಾಧ್ಯವಾದರೆ, ಅದಕ್ಕಿಂತ ಹೆಚ್ಚಿನದು ಇನ್ನೇನು ಬೇಕು?ʼʼ ಎಂದರು.

ಮರುಶೋಧಿಸಿದ ಅಕ್ಕಿ ತಳಿಗಳು

ಅಕ್ಕಿ ಭಾರತದಲ್ಲಿ ವ್ಯಾಪಕವಾಗಿ ಸೇವಿಸುವ ಏಕದಳ ಧಾನ್ಯ ಮತ್ತು ಉಪಖಂಡದಲ್ಲಿ ಇದು ಪ್ರಮುಖ ಆಹಾರ ಬೆಳೆಯಾಗಿದೆ. ಭಾರತವು ಭತ್ತ ಬೆಳೆಯುವ 2 ನೇ ಅತಿದೊಡ್ಡ ರಾಷ್ಟ್ರವಾಗಿದೆ ಮತ್ತು ಈ ಬೆಳೆಯನ್ನು  ಆಹಾರ ಭದ್ರತೆಯ ಪ್ರಮುಖ  ಆಧಾರಸ್ತಂಭವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಬೆಳೆಯುವ ಹಲವಾರು ಸಾಂಪ್ರದಾಯಿಕ ಭತ್ತದ ತಳಿಗಳು ಪೌಷ್ಟಿಕಾಂಶ ಮತ್ತು ಔಷಧೀಯ ಮೌಲ್ಯಗಳನ್ನು ಹೊಂದಿವೆ ಮತ್ತು ಅನೇಕ ರೋಗಗಳಿಗೆ ಚಿಕಿತ್ಸೆ ನೀಡಬಲ್ಲವು ಎಂದು ಅಧ್ಯಯನಗಳು  ಸಾಬೀತುಪಡಿಸಿವೆ.

ಹಸಿರು ಕ್ರಾಂತಿಯ ಮೊದಲು ಭಾರತವು ಒಂದು ಲಕ್ಷಕ್ಕೂ ಹೆಚ್ಚು ಭತ್ತವನ್ನು ಬೆಳೆಯುತ್ತಿದ್ದರೂ,ಈಗ ಕೇವಲ 6000  ಭತ್ತದ ತಳಿಗಳು ಮಾತ್ರ ಉಳಿದುಕೊಂಡಿವೆ. ಅವುಗಳಲ್ಲಿ,ಇಂದು ತಯಾರಿಸಲಾದ ವಿವಿಧ ಖಾದ್ಯಗಳಲ್ಲಿ ಈ ಕೆಳಗೆ ಪಟ್ಟಿ ಮಾಡಿದ ಈ ತಳಿಗಳನ್ನು ಬಳಸಲಾಯಿತು.

ನಿಜಾವರ ಕೇರಳದ ಜನಪ್ರಿಯ ಔಷಧೀಯ ಕೆಂಪು ಅಕ್ಕಿಯಾಗಿದ್ದು ಇದನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ.ಗಂಧಕಶಾಲವು ಸುವಾಸನೆಭರಿತವಾಗಿದ್ದು,ಗಾತ್ರದಲ್ಲಿ ಚಿಕ್ಕದಾಗಿದ್ದು ದಪ್ಪವಾಗಿರುವ ಬಿಳಿ ಅಕ್ಕಿ. ಇದು ಮೂಲತಃ ವಯನಾಡ್‌ಗೆ ಸೇರಿದ್ದಾಗಿದ್ದು ಮಲಬಾರ್ ಬಿರಿಯಾನಿಯ ಅಂತ:ಸತ್ತ್ವವೇ ಇದರಲ್ಲಿ ಅಡಗಿದೆ.

ವಲಿಯಾಚೆನ್ನೆಲ್ಲು ಒಂದು ಔಷಧೀಯ ಅಕ್ಕಿ ಮತ್ತು ಇದರಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿದೆ. ಹೀಗಾಗಿ ಸಾಂಪ್ರದಾಯಿಕವಾಗಿ ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಇದರ ನುಚ್ಚಕ್ಕಿಯನ್ನು ನೀಡಲಾಗುತ್ತದೆ. ರಕ್ತಹೀನತೆಯ ನಿವಾರಿಸಲು ಸಹ ಇದು ಉಪಯುಕ್ತವಾಗಿದೆ. ಮುಲ್ಲಂಕಿಮಾವನ್ನು ಇದರಲ್ಲಿ ಹೆಚ್ಚಿನ ವಿಟಮಿನ್ ಎ ಅಂಶವಿರುವುದರಿಂದ ಮಕ್ಕಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.

ಸಮುದಾಯ ಬೆಂಬಲಿತ ಕೃಷಿ

ಈ ಕಾರ್ಯಕ್ರಮದ ಮೂಲಕ,  ಗ್ರೀನ್‌ಪೀಸ್ ಇಂಡಿಯಾ ಸಮುದಾಯ ಬೆಂಬಲಿತ ಕೃಷಿ ಯನ್ನು ಎಂದರೆ, ಗ್ರಾಹಕ ಉತ್ಪಾದಕರ ಸಂಪರ್ಕವನ್ನು ಅಭಿವೃದ್ಧಿಪಡಿಸುವ ಮತ್ತು ಬಲಪಡಿಸುವ ಗುರಿಯನ್ನು ಹೊಂದಿದೆ. ಇಲ್ಲಿ ನೈಸರ್ಗಿಕವಾಗಿ ಬೆಳೆದ ಉತ್ಪನ್ನಗಳ ಖರೀದಿಗಾಗಿ ಗ್ರಾಹಕರು ನೇರವಾಗಿ ರೈತರನ್ನು ಸಂಪರ್ಕಿಸುತ್ತಾರೆ.

ಗ್ರಾಹಕ ಸಮೂಹಗಳನ್ನು ರಚಿಸುವ ಮೂಲಕ ಮಾರುಕಟ್ಟೆ ಚಟುವಟಿಕೆಗಳನ್ನು ಸುಲಭಗೊಳಿಸಲಾಗುತ್ತದೆ. ಉತ್ಪನ್ನಗಳ ಸಾಗಣೆಗೆ ಅನುಕೂಲವಾಗುವಂತೆ ರಚಿಸಲಾಗಿರುವ ಈ ಗ್ರಾಹಕರ ಗುಂಪುಗಳು (ಕನ್ಸ್ಯೂಮರ್‌ ಕಲೆಕ್ಟೀವ್ಸ್‌) ನಿವಾಸಿಗಳ ಕಲ್ಯಾಣ ಸಂಘದ ಸದಸ್ಯರು, ನೆರೆಹೊರೆಯವರು, ಸ್ನೇಹಿತರು, ಕುಟುಂಬದ ಸದಸ್ಯರು, ಸಹೋದ್ಯೋಗಿಗಳು, ಮುಂತಾದವರನ್ನು ಒಳಗೊಂಡಿರುತ್ತದೆ. ಸಾವಯವ ಕೃಷಿ ಸಮುದಾಯ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಉತ್ತೇಜಿಸುವ ಮೂಲಕ, ನೈಸರ್ಗಿಕ ಕೃಷಿಯ ಸಂತೋಷ ಮತ್ತು ಬವಣೆಗಳನ್ನೂ ರೈತರು ಗ್ರಾಹಕರೊಂದಿಗೆ ಹಂಚಿಕೊಳ್ಳಬಹುದು, ಇದು ಸಾವಯವ ಮಾರುಕಟ್ಟೆಯನ್ನು ಎಲ್ಲರೂ ಪ್ರವೇಶಿಸುವಂತೆ ಮಾಡುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12429
Bhavana S.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು