ಬೆಂಗಳೂರು: ದೇಶಾದ್ಯಂತ ಮೇ 28ರ ಗುರುವಾರದಂದು ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದ್ದು, ಬೆಂಗಳೂರಿನ ಪ್ರಮುಖ ಮಸೀದಿ ಹಾಗೂ ಮೈದಾನಗಳಲ್ಲಿ ಸಾಮೂಹಿಕ ಈದ್ ಪ್ರಾರ್ಥನೆಗಳು ಜರುಗಲಿವೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಮತ್ತು ವಾಹನ ದಟ್ಟಣೆ ನಿಯಂತ್ರಿಸಲು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆ.ಜೆ.ಹಳ್ಳಿ ಮತ್ತು ಚಾಮರಾಜಪೇಟೆ ಸಂಚಾರ ಠಾಣಾ ವ್ಯಾಪ್ತಿಗಳಲ್ಲಿ ಬೆಳಗಿನ ಜಾವ 5 ಗಂಟೆಯಿಂದ ಮಧ್ಯಾಹ್ನದವರೆಗೆ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿರಲಿವೆ. ಚಾಮರಾಜಪೇಟೆಯ ಮೈಸೂರು ರಸ್ತೆಯ ಬಿ.ಬಿ. ಜಂಕ್ಷನ್ ಹತ್ತಿರದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ನಡೆಯುವುದರಿಂದ, ಟೋಲ್‌ಗೇಟ್‌ನಿಂದ ಬಿ.ಬಿ. ಜಂಕ್ಷನ್ ಮೂಲಕ ಬಿ.ಜಿ.ಎಸ್ ಮೇಲ್ಸೇತುವೆ ಕಡೆಗೆ ಹೋಗುವ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಮೈಸೂರಿನಿಂದ ಬರುವ ವಾಹನಗಳು ವಿಜಯನಗರ ಹಾಗೂ ಮಾಗಡಿ ರಸ್ತೆಗಳ ಮೂಲಕ ಪರ್ಯಾಯವಾಗಿ ಸಂಚರಿಸಲು ಸೂಚಿಸಲಾಗಿದೆ. ಪುಲಿಕೇಶಿನಗರ ಸಂಚಾರ ಠಾಣಾ ವ್ಯಾಪ್ತಿಯ ಮಿಲ್ಲರ್ಸ್ ರಸ್ತೆಯ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ಹೆನ್ಸ್ ರಸ್ತೆ, ನಂದಿದುರ್ಗ ರಸ್ತೆ ಹಾಗೂ ತರಬಂಡಿ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.
ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್‌ವರೆಗೂ ಸಂಚಾರ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ಪೊಲೀಸರು ಸೂಚಿಸಿರುವ ಪರ್ಯಾಯ ರಸ್ತೆಗಳನ್ನು ಬಳಸುವ ಮೂಲಕ ಸಹಕರಿಸಬೇಕೆಂದು ಕೋರಲಾಗಿದೆ. ಪ್ರಾರ್ಥನೆಗೆ ಬರುವವರಿಗಾಗಿ ನಿಗದಿಪಡಿಸಿದ ಜಾಗಗಳಲ್ಲೇ ವಾಹನಗಳನ್ನು ಪಾರ್ಕಿಂಗ್ ಮಾಡಲು ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ.

