ಬೆಂಗಳೂರು: ನಗರದಲ್ಲಿ ಅಬ್ಬರಿಸಿದ ಭಾರೀ ಮಳೆಗೆ ವಿಜಯನಗರದಲ್ಲಿ ಕ್ಲಬ್ ಕಾಂಪೌಂಡ್ವೊಂದು ಕುಸಿದು ಬಿದ್ದು ಆಟೋ ಚಾಲಕರೊಬ್ಬರು ಜಾಗದಲ್ಲೇ ಸಾವನ್ನಪ್ಪಿದ್ದಾರೆ. ಮಗಂಗೊಂಡನಹಳ್ಳಿಯ ನಿವಾಸಿಯಾದ ಶಿವಬೋರಯ್ಯ (56) ಮೃತಪಟ್ಟ ದುರ್ದೈವಿ ಆಟೋ ಚಾಲಕ.
ಸದ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಅವಾಂತರಗಳ ಮಧ್ಯೆಯೇ ವಿಜಯನಗರ ಕ್ಲಬ್ ಕಾಂಪೌಂಡ್ ಪಕ್ಕದಲ್ಲೇ ನಿಲ್ಲಿಸಿದ್ದ ಆಟೋ ಮೇಲೆ ಕಾಂಪೌಂಡ್ ಗೋಡೆ ದಿಢೀರನೆ ಕುಸಿದು ಬಿದ್ದಿದೆ. ಪರಿಣಾಮ ಆಟೋ ಒಳಗಿದ್ದ ಚಾಲಕ ಶಿವಬೋರಯ್ಯ ಅವರು ಗೋಡೆಯ ಅವಶೇಷಗಳ ಅಡಿಯಲ್ಲಿ ಸಿಲುಕಿ ಕೊನೆಯುಸಿರೆಳೆದಿದ್ದಾರೆ. ಘಟನೆ ನಡೆದ ತಕ್ಷಣವೇ ವಿಜಯನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

