ಬೆಂಗಳೂರು: ಕೆಎಎಸ್​​ ಪೂರ್ವಭಾವಿ ಪರೀಕ್ಷೆ ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ. ಮತ್ತು ತರಾತುರಿಯಲ್ಲಿ ಪರೀಕ್ಷೆಯನ್ನು ನಡೆಸುತ್ತಿಲ್ಲ. ಅಭ್ಯರ್ಥಿಗಳು ತಯಾರಿಯಾಗಲು ಸಾಕಷ್ಟು ಸಮಯ ನೀಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಕೆಲ ಕೆಎಎಸ್​​ ಆಕ್ಷಾಂಕ್ಷಿಗಳು ಪರೀಕ್ಷೆಯನ್ನು ಮುಂದೂಡುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಈ ವಿಚಾರವಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿದ ಸರ್ಕಾರ, ಕೆಲ ಕೆಎಎಸ್​​ ಆಕ್ಷಾಂಕ್ಷಿಗಳು ಪರೀಕ್ಷೆಯನ್ನು ಮುಂದೂಡುವಂತೆ ಹಿರಿಯ ಅಧಿಕಾರಿಗಳಿಂದ ಒತ್ತಡ ತರುತ್ತಿದ್ದಾರೆ. ಅಲ್ಲದೇ, ಅವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕೆಪಿಎಸ್​​ಸಿಯಲ್ಲಿ (KPSC) ಹಗರಣ ನಡೆದಿದೆ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ, ಯಾವುದೇ ಹಗರಣ ನಡೆದಿಲ್ಲ, ಆಗಸ್ಟ್​ 27 ರಂದೇ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದೆ.

ಕೆಪಿಎಸ್​ಸಿ ಅಥವಾ ಸರ್ಕಾರವು ಹೆಚ್ಚುವರಿ ಅವಕಾಶ ಮತ್ತು ವಯೋಮಿತಿ ಸಡಿಲಿಕೆಗೊಳಿಸಿದ ನಂತರ 2017-18ರಲ್ಲಿ ಪರೀಕ್ಷೆ ಬರೆದಿದ್ದ 1500 ಅಭ್ಯರ್ಥಿಗಳು ಕೂಡ ಪರೀಕ್ಷೆಗೆ ಅರ್ಜಿಸಲ್ಲಿಸಿದ್ದಾರೆ. ಇವರು ಸೇರಿದಂತೆ ಒಟ್ಟು 2.5 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಸಿದ್ದರಾಗಿದ್ದಾರೆ.