ಬೆಂಗಳೂರು: ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದ ಐವರನ್ನು ತಲಘಟ್ಟಪುರ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಸೋಮಶೇಖರ್‌, ಅಮರೇಶ್‌, ರಾಮಪ್ಪ, ಪ್ರದೀಪ್‌, ಜಗದೀಶ್‌ ಬಂಧಿತರು.

24 ವರ್ಷದ ಸಂತ್ರಸ್ತೆಗೆ ಆರೋಪಿಗಳ ಪೈಕಿ ಇಬ್ಬರ ಪರಿಚಯವಿತ್ತು. ಅವರನ್ನು ನಂಬಿದ್ದ ಯುವತಿ ಪಾರ್ಟಿಗೆಂದು ಬಂದಿದ್ದರು ಎಂದು ಪೊಲೀಸರು ಹೇಳಿದರು. ಸೋಮಶೇಖರ್, ಸೆಕ್ಯೂರಿಟಿ ಪ್ರೊವೈಡಿಂಗ್‌ ಏಜೆನ್ಸಿಯಲ್ಲಿ ಕೆಲಸ ಮಾಡು ತ್ತಿದ್ದು, ತಲಘಟ್ಟಪುರದ ಮಾರುತಿನಗರದಲ್ಲಿ ವಾಸವಾಗಿದ್ದ. ಅಮರೇಶ್‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ದೇವನಹಳ್ಳಿಯಲ್ಲಿ ಸಂತ್ರಸ್ತೆ ವಾಸವಾಗಿದ್ದಾರೆ. ಶುಕ್ರವಾರ ಸಂಜೆ 5ಕ್ಕೆ ಸುಮಾರಿಗೆ ಯುವತಿಗೆ ಕರೆ ಮಾಡಿದ್ದ ಸೋಮಶೇಖರ್‌, ‘ಕಲಬುರಗಿಯ ಸ್ನೇಹಿತರು ಬಂದಿದ್ದಾರೆ. ಪಾರ್ಟಿ ಮಾಡೋಣ ಬಾ’ ಎಂದು ಕರೆದಿದ್ದ. ರ್‍ಯಾಪಿಡೊ ಮೂಲಕ ಕಾರು ಬುಕ್ ಮಾಡಿಕೊಂಡು ರಾತ್ರಿ 7.30ರ ಸುಮಾರಿಗೆ ಮಾರುತಿನಗರಕ್ಕೆ ಸಂತ್ರಸ್ತೆ ಬಂದಿದ್ದರು. ಈ ವೇಳೆ ಅಮರೇಶ್, ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದ. ನಂತರ, ಇತರೆ ಆರೋಪಿಗಳ‍ು ಸೇರಿ ಆಕೆ ಜತೆ ಅನುಚಿತವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದರು.

ಆರೋಪಿಗಳಿಂದ ತಪ್ಪಿಸಿಕೊಂಡು ಬಂದು ಸಂತ್ರಸ್ತೆ, ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿದ್ದರು. ಈ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ, ಐವರನ್ನು ಬಂಧಿಸಿದ್ದಾರೆ.